ಕೆನಡಾ: ಅಮೆರಿಕದ ಜನಪ್ರಿಯ ಟಿವಿ ಕಾರ್ಯಕ್ರಮ ‘ಫ್ರೆಂಡ್ಸ್’ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಮ್ಯಾಥ್ಯೂ ಪೆರ್ರಿ ಇಂದು ಸಾವಿಗೀಡಾಗಿದ್ದಾರೆ.
ತಮ್ಮ ನಿವಾಸದ ಹಾಟ್ ಟಬ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪೆರ್ರಿ ಬಿದ್ದಿದ್ದು, ಅವರನ್ನು ಬದುಕಿಸಲು ಪ್ರಯತ್ನಿಸಿದರೂ ಆಗಲಿಲ್ಲ ಎಂದು ಮೊದಲು ಕಂಡವರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಡೇವಿಡ್ ಕ್ರೇನ್ ಮತ್ತು ಮಾರ್ಟಾ ಕೌಫ್‌ಮನ್ ಸಾರಥ್ಯದಲ್ಲಿ ಮೂಡಿಬಂದಿದ್ದ ‘ಫ್ರೆಂಡ್ಸ್’ ಸಿಟ್‌ಕಾಮ್ ಟಿವಿ ಶೋ 1994ರಲ್ಲಿ ಪ್ರಾರಂಭವಾಗಿ 2004ರಲ್ಲಿ ಕೊನೆಗೊಂಡಿತ್ತು. ಸುಮಾರು 10 ಸೀಸನ್, 236 ಎಪಿಸೋಡ್‌ಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಿತ್ತು. ಟಿವಿ ಇತಿಹಾಸದಲ್ಲಿಯೇ ಅತ್ಯಂತ ಜನಪ್ರಿಯ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೇ ಪ್ರಪಂಚದಾದ್ಯಂತ ಹೆಚ್ಚಿನ ಅಭಿಮಾನಿಗಳನ್ನು ಪಡೆದುಕೊಂಡ ಕಾರ್ಯಕ್ರಮವೂ ಹೌದು.
ಮೋನಿಕಾ (ಕೋರ್ಟಿನಿ ಕಾಕ್ಸ್), ರೆಚೆಲ್ ಗ್ರೀನ್ (ಜೆನ್ನಿಫರ್ ಅನಿಸ್ಟನ್), ಚಾಂಡ್ಲರ್ ಬಿಂಗ್ (ಮ್ಯಾಥ್ಯೂ ಪೆರ್ರಿ), ರಾಸ್ ಗೆಲ್ಲರ್ (ಡೇವಿಡ್ ಶ್ವಿಮ್ಮರ್), ಪಿಬಿ(ಲೀಸಾ ಕುಡ್ರೋಸ್), ಜೋಯಿ ಟ್ರಿಬಿಯಾನಿ (ಮ್ಯಾಥ್ ಲೆಬ್ಲಾಂಕ್) ಎಂಬ ಆರು ಜನ ಸ್ನೇಹಿತರ ಬದುಕಿನ ಕಥನವನ್ನು ಹಾಸ್ಯಭರಿತವಾಗಿ ಈ ಕಾರ್ಯಕ್ರಮದಲ್ಲಿ ತೋರಿಸಲಾಗಿದೆ. ಮ್ಯಾಥ್ಯೂ ಪೆರ್ರಿ ಅವರು ‘ಚಾಂಡ್ಲರ್ ಬಿಂಗ್’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಚುಟುಕು ಹಾಸ್ಯದಿಂದ ಅಭಿಮಾನಿಗಳನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದರು. ಪೆರ್ರಿ ಅವರ ಸಾವಿಗೆ ವಿಶ್ವದಾದ್ಯಂತ ಅಭಿಮಾನಿಗಳು ಕಂಬಿನಿ ಮಿಡಿದಿದ್ದಾರೆ.
ಗೆಳೆಯನ ಅಗಲಿಕೆಗೆ ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರುಡೊ ಭಾವುಕ
ಮ್ಯಾಥ್ಯೂ ಪೆರ್ರಿ ಅವರ ಸಾವಿಗೆ ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರುಡೋ ಕಂಬಿನಿ ಮಿಡಿದಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದು, ಜಗತ್ತನ್ನು ನಗಿಸಿದ ನಿನ್ನನ್ನು ಈ ಜಗತ್ತು ಮರೆಯುವುದಿಲ್ಲ ಎಂದು ಹೇಳಿದ್ದಾರೆ.
‘ನಿನ್ನ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ. ಬಾಲ್ಯದಲ್ಲಿ ಆಡಿದ ಆಟಗಳು ಕಣ್ಣ ಮುಂದೆ ಬಂದಿವೆ. ಜಗತ್ತು ನಿನ್ನನ್ನು ಯಾವತ್ತು ಮರೆಯುವುದಿಲ್ಲ. ಜಗತ್ತನ್ನು ನಗಿಸಿದ್ದಕ್ಕೆ ನಿನಗೆ ಧನ್ಯವಾದ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.