ಮುಂಬೈ: ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ₹100 ಕೋಟಿ ನಷ್ಟ ಪರಿಹಾರಕ್ಕೆ ಒತ್ತಾಯಿಸಿ ಮಾಜಿ ಪತ್ನಿ ಆಲಿಯಾ ಅಲಿಯಾಸ್ ಜೈನಬ್ ಸಿದ್ಧಿಕಿ ಹಾಗೂ ಸಹೋದರ ಶಂಷುದ್ದೀನ್ ಸಿದ್ಧಿಕಿ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ತನ್ನ ವಿರುದ್ಧ ಮಾಜಿ ಪತ್ನಿ ಆಲಿಯಾ ಮತ್ತು ಸಹೋದರ ಶಂಷುದ್ದೀನ್ ಮಾನಹಾನಿಕರ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸಿದ್ಧಿಕಿ ಆರೋಪಿಸಿದ್ದಾರೆ. ಮಾರ್ಚ್ 30ರಂದು ನ್ಯಾಯಮೂರ್ತಿ ರಿಯಾಜ್ ಚಂಗ್ಲಾ ಅವರ ಏಕಸದಸ್ಯ ಪೀಠದ ಎದುರು ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಮಾಜಿ ಪತ್ನಿ ಹಾಗೂ ಸಹೋದರ ನನ್ನ ಮಾನಹಾನಿಗೆ ಕಾರಣವಾಗುವ ಯಾವುದೇ ಹೇಳಿಕೆ ನೀಡದಂತೆ ಶಾಶ್ವತವಾಗಿ ತಡೆ ನೀಡುವಂತೆ ಅವರು ಹೈಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ, ಅವರಿಬ್ಬರಿಂದ ಲಿಖಿತ ಕ್ಷಮಾಪಣಾ ಪತ್ರಕ್ಕೂ ಸಿದ್ಧಿಕಿ ಬೇಡಿಕೆ ಇಟ್ಟಿದ್ದಾರೆ.
2008ರಲ್ಲಿ ಸಹೋದರ ಶಂಷುದ್ದೀನ್‌ನನ್ನು ತನ್ನ ಮ್ಯಾನೇಜರ್ ಆಗಿ ನೇಮಕ ಮಾಡಿಕೊಂಡು ಎಲ್ಲ ಹಣಕಾಸು ವ್ಯವಹಾರಗಳನ್ನು ಒಪ್ಪಿಸಿದ್ದೆ. ಆದರೆ, ಆತ ನನ್ನನ್ನು ವಂಚಿಸಿ ನನ್ನ ಹಣದಲ್ಲಿ ಆಸ್ತಿ ಖರೀದಿ ಮಾಡಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ, ನನ್ನ ಮಾಜಿ ಪತ್ನಿಯನ್ನು ಉತ್ತೇಜಿಸಿ ಸುಳ್ಳು ಪ್ರಕರಣ ದಾಖಲಿಸುವಂತೆ ಮಾಡಿದ್ದಾನೆ ಎಂದು ಸಿದ್ಧಿಕಿ ದಾಖಲಿಸಿರುವ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ಆಲಿಯಾ ಮತ್ತು ಶಂಷುದ್ದೀನ್ ತನಗೆ ₹21 ಕೋಟಿ ವಂಚಿಸಿ ಆಸ್ತಿ ಖರೀದಿಸಿದ್ದಾರೆ ಎಂದು ಸಿದ್ಧಿಕಿ ಆರೋಪಿಸಿದ್ದಾರೆ.
ಅಕ್ರಮ ಆಸ್ತಿಯನ್ನು ತನಗೆ ಹಿಂದಿರುಗಿಸುವಂತೆ ಕೇಳಿದಾಗ, ಇಬ್ಬರೂ ನನ್ನ ವಿರುದ್ಧ ಸಂಚು ರೂಪಿಸಿದ್ದಾರೆ. ನನ್ನ ವಿರುದ್ಧ ಕೀಳುಮಟ್ಟದ ವಿಡಿಯೊ ಮತ್ತು ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ ಮಾನ ಕಳೆದಿದ್ದಾರೆ ಎಂದೂ ಸಿದ್ಧಿಕಿ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.