ADVERTISEMENT

ನವ ಅವತಾರವೆತ್ತಿದ ನಟ ಪ್ರೇಮ್‌

ಪ್ರಜಾವಾಣಿ ವಿಶೇಷ
Published 5 ಡಿಸೆಂಬರ್ 2019, 19:30 IST
Last Updated 5 ಡಿಸೆಂಬರ್ 2019, 19:30 IST
   

ಕೆಲವು ಸಿನಿಮಾಗಳ ಆಯ್ಕೆಯಲ್ಲಿ ನಾನೇ ದುಡುಕಿನ ನಿರ್ಧಾರ ತಳೆದೆ. ಅವುಗಳಲ್ಲಿ ನಟಿಸದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ಅಂದಿನ ನನ್ನ ಪರಿಸ್ಥಿತಿ ಈಗಿನಂತೆ ಇರಲಿಲ್ಲ. ಸಿನಿಮಾ ಒಪ್ಪಿಕೊಳ್ಳುವುದು ಅನಿವಾರ್ಯವಾಗಿತ್ತು. ಆಗ ನನ್ನಿಂದ ಏನನ್ನೂ ಮಾಡಲು ಆಗುತ್ತಿರಲಿಲ್ಲ ಎನ್ನುತ್ತಾರೆ ನಟ ಪ್ರೇಮ್‌

‘ನೆನಪಿರಲಿ’ ಚಿತ್ರದ ಖ್ಯಾತಿಯ ನಟ ಪ್ರೇಮ್‌ ಬಣ್ಣದಲೋಕ ಪ್ರವೇಶಿಸಿ ಒಂದೂವರೆ ದಶಕ ಉರುಳಿದೆ. ವೃತ್ತಿಬದುಕಿನಲ್ಲಿ ಹಲವು ಏರಿಳಿತ ಕಂಡಿರುವ ಅವರು ಈಗ ಸಿನಿಮಾಗಳ ಆಯ್ಕೆಯಲ್ಲಿ ಸಾಕಷ್ಟು ಚ್ಯೂಸಿಯಾಗಿದ್ದಾರೆ. ಇದೇ ಹಾದಿಯಲ್ಲಿ ಸಾಗುವ ಆಲೋಚನೆ ಅವರದ್ದು. ಲವರ್‌ ಬಾಯ್‌ ಇಮೇಜ್‌ನಲ್ಲಿಯೇ ವೃತ್ತಿಬದುಕು ಆರಂಭಿಸಿದ ಅವರು ಕಮರ್ಷಿಯಲ್, ಆ್ಯಕ್ಷನ್‌ ಚಿತ್ರಗಳಲ್ಲೂ ಮಿಂಚಿದ್ದು ಉಂಟು. ಅವರ ನಟನೆಯ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ ಕಥೆ ಮತ್ತು ಮೇಕಿಂಗ್‌ನಿಂದ ಕುತೂಹಲ ಹೆಚ್ಚಿಸಿರುವುದು ದಿಟ. ಇದರ ಮೂಲಕ ಪ್ರಯೋಗಕ್ಕೆ ಒಗ್ಗಿಕೊಂಡಿರುವ ಅವರೊಟ್ಟಿಗೆ ನಡೆಸಿದ ಮಾತುಕತೆ ಇಲ್ಲಿದೆ.

* ‘ಪ್ರೇಮಂ ಪೂಜ್ಯಂ’ ಚಿತ್ರದ ವಿಶೇಷತೆ ಏನು?‌

ADVERTISEMENT

ಇದೊಂದು ಡಿವೈನ್‌ ಲವ್‌ಸ್ಟೋರಿ. ಹುಡುಗ ಮತ್ತು ಹುಡುಗಿಯ ನಡುವೆ ಹಾಡು, ರೊಮ್ಯಾನ್ಸ್‌ ಅನ್ನು ಹೊರತುಪಡಿಸಿ ನೈಜವಾಗಿ ನಡೆಯುವ ಪ್ರೇಮ ಕಥೆ.

* ಸಿನಿಮಾದ ಚಿತ್ರೀಕರಣ ಯಾವ ಹಂತದಲ್ಲಿದೆ?

ಶೇಕಡ 80ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಎರಡು ಹಾಡು, ಒಂದು ಸಾಹಸ ದೃಶ್ಯದ ಶೂಟಿಂಗ್‌ ಮಾಡಬೇಕು. ಇನ್ನು ಹತ್ತು ದಿನದಷ್ಟು ಚಿತ್ರೀಕರಣ ಬಾಕಿಯಿದೆ. ಕಳೆದ ವಾರ ವಿಯೆಟ್ನಾಂಗೆ ಹೋಗಿದ್ದೆವು. ಭಾರತೀಯ ಚಿತ್ರರಂಗದ ಇತಿಹಾದಲ್ಲಿಯೇ ಆ ಸ್ಥಳದಲ್ಲಿ ಯಾವುದೇ ಸಿನಿಮಾಗಳ ಶೂಟಿಂಗ್‌ ನಡೆದಿಲ್ಲ. ಅಲ್ಲಿ ಚಿತ್ರೀಕರಣ ನಡೆಸಿರುವುದು ನಮ್ಮ ಚಿತ್ರದ ವಿಶೇಷ. ಡಾರ್ಜಿಲಿಂಗ್‌ನಲ್ಲೂ ಶೂಟಿಂಗ್‌ ಮಾಡಿದ್ದೇವೆ. ಮುಂದಿನ ಹಂತದಲ್ಲಿ ಧರ್ಮಶಾಲಾ ಮತ್ತು ಊಟಿಯಲ್ಲಿ ಶೂಟಿಂಗ್‌ ನಡೆಸುವ ಯೋಜನೆಯಿದೆ.

* ಈ ಚಿತ್ರದ ಪಾತ್ರಕ್ಕೆ ತಯಾರಿ ಹೇಗಿತ್ತು?

ಚಿತ್ರದಲ್ಲಿ ಒಂಬತ್ತು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರುವೆ. ಅದಕ್ಕಾಗಿ ಒಂದು ವರ್ಷ ತಯಾರಿ ನಡೆಸಿದೆ. ಒಂದು ಗೆಟಪ್‌ಗೆ ಗಡ್ಡ ಬಿಡಬೇಕಿತ್ತು; ಮತ್ತೊಂದಕ್ಕೆ ಟ್ರಿಮ್‌ ಮಾಡಬೇಕಿತ್ತು. ಇನ್ನೊಂದು ಗೆಟಪ್‌ಗೆ ನೀಟಾಗಿ ಶೇವ್ ಮಾಡಬೇಕಿತ್ತು. ನನ್ನ ಹೇರ್‌ಸ್ಟೈಲ್‌ನಲ್ಲಿಯೂ ಬದಲಾವಣೆ ಮಾಡಿಕೊಳ್ಳಬೇಕಿತ್ತು. ನಾಯಕನದು ಇಪ್ಪತ್ತು ವರ್ಷದ ಜರ್ನಿ. ಕಾಲೇಜಿನಿಂದ ಕಥೆ ಆರಂಭಗೊಂಡರೆ ಆತನಿಗೆ 40 ವರ್ಷವಾಗುವವರೆಗೂ ಸಾಗುತ್ತದೆ. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡೇ ನಟಿಸಿದ್ದೇನೆ.

* ನಿಮ್ಮ ಹಿಂದಿನ ಸಿನಿಮಾಗಳಿಗೂ ಮತ್ತು ಈ ಚಿತ್ರಕ್ಕೂ ವ್ಯತ್ಯಾಸ ಇದೆಯೇ?

ಈ ಸಿನಿಮಾದಲ್ಲಿ‌ ಪ್ರೇಕ್ಷಕರಿಗೆ ವ್ಯತ್ಯಾಸ ಗುರುತಿಸಲು ಸಾಕಷ್ಟು ಅವಕಾಶವಿದೆ. ಹಿಂದಿನ ಸಿನಿಮಾಗಳಲ್ಲಿ ಇಂತಹ ಪಾತ್ರ ಮಾಡಿರಲಿಲ್ಲ. ಇದು ನನ್ನ ವೃತ್ತಿಬದುಕಿನಲ್ಲಿ ವಿಭಿನ್ನವಾದ ಪಾತ್ರ. ಇಷ್ಟು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಪ್ರಯೋಗಕ್ಕೂ ಒಗ್ಗಿಕೊಂಡಿರಲಿಲ್ಲ. ಹೊಸತನದ ಪಾತ್ರ ಮಾಡಿರುವ ಖುಷಿಯಿದೆ.

* ಇತ್ತೀಚೆಗೆ ಸಿನಿಮಾಗಳ ಆಯ್ಕೆಯಲ್ಲಿ ಸಾಕಷ್ಟು ಚ್ಯೂಸಿಯಾಗಿದ್ದೀರಲ್ಲಾ?

ಹೌದು. ಚಿತ್ರರಂಗ ಪ್ರವೇಶಿಸಿ ಒಂದೂವರೆ ದಶಕ ಮುಗಿದಿದೆ. ನಾನು ನಡೆದುಬಂದ ಹಾದಿಯನ್ನು ಒಮ್ಮೆ ಹಿಂದಿರುಗಿ ನೋಡಿದರೆ ಖುಷಿಯಾಗುತ್ತದೆ. ಆದರೆ, ಒಂದಷ್ಟು ತಪ್ಪುಗಳನ್ನು ಆರಂಭದಲ್ಲಿಯೇ ತಿದ್ದಿಕೊಳ್ಳುವ ಅವಕಾಶವಿತ್ತು. ಅದು ಆಗಲಿಲ್ಲ. ನಾನು ‘ಲವ್ಲಿಸ್ಟಾರ್‌’ ಆಗಿ ಬೆಳೆಯಲು ಜನರೇ ಕಾರಣ. ಕನ್ನಡ ಚಿತ್ರರಂಗದ ನನಗೆ ಅಪಾರ ಗೌರವವಿದೆ. ಈ ಕ್ಷೇತ್ರದಲ್ಲಿನ ನನ್ನ ಬೆಳವಣಿಗೆ ಅವಲೋಕಿಸಿದರೆ ವಿಸ್ಮಯವಾಗುತ್ತದೆ.

* ಸಿನಿಮಾಗಳ ಆಯ್ಕೆ ವೇಳೆ ಯಾವ ಅಂಶಗಳಿಗೆ ಒತ್ತು ನೀಡುತ್ತೀರಿ?

ಮೊದಲಿಗೆ ಕಥೆಗೆ ಪ್ರಧಾನ್ಯ ನೀಡುತ್ತೇನೆ. ನಂತರ ಚಿತ್ರತಂಡ ಚೆನ್ನಾಗಿರಬೇಕು. ಅದನ್ನು ಬಿಟ್ಟರೆ ನನ್ನ ಸಂಭಾವನೆಯತ್ತ ಗಮನ ಹರಿಸುತ್ತೇನೆ. ಈ ಮೂರು ಅಂಶಗಳು ಚೆನ್ನಾಗಿದ್ದರೆ ಧೈರ್ಯವಾಗಿ ಮುಂದುವರಿಯುತ್ತೇನೆ. ಈಗಾಗಲೇ, ಹಲವು ಸ್ಕ್ರಿಪ್ಟ್‌ಗಳು ಬಂದಿವೆ. ಆದರೆ, ‘ಪ್ರೇಮಂ ಪೂಜ್ಯಂ’ ಚಿತ್ರ ಒಂದು ಹಂತಕ್ಕೆ ಬಂದ ಬಳಿಕ ಹೊಸ ಸಿನಿಮಾಗಳತ್ತ ಗಮನಹರಿಸಲು ನಿರ್ಧರಿಸಿರುವೆ.

* ಸಿನಿಮಾ ಮತ್ತು ಟಿ.ವಿ. ಪ್ರೇಕ್ಷಕರ ನಡುವೆ ಇರುವ ವ್ಯತ್ಯಾಸ ಎಂತಹದ್ದು?

ನಾನು ಕಿರುತೆರೆಯ ರಿಯಾಲಿಟಿ ಶೋಗಳಲ್ಲೂ ತೀರ್ಪುಗಾರನಾಗಿ ಕೆಲಸ ಮಾಡಿರುವೆ. ಕಿರುತೆರೆ ಮತ್ತು ಹಿರಿತೆರೆಯ ಪ್ರೇಕ್ಷಕರ ನಡುವೆ ಅಂತಹ ದೊಡ್ಡ ವ್ಯತ್ಯಾಸವಿಲ್ಲ. ಈ ಇಬ್ಬರೂ ಒಂದೇ.ಆದರೆ, ಟಿ.ವಿ.ಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳೇ ಬೇರೆ. ಅದನ್ನು ನೋಡಿ ಆನಂದಿಸುವ ವರ್ಗ ದೊಡ್ಡದು. ಸಿನಿಮಾ ನೋಡಲು ದುಡ್ಡು ಕೊಡಬೇಕು. ಥಿಯೇಟರ್‌ನಲ್ಲಿ ಎರಡೂವರೆ ಗಂಟೆಯಷ್ಟು ಸಮಯ ಮೀಸಲಿಡಬೇಕು. ಅವರನ್ನು ನಾನು ಉತ್ತಮ ಪ್ರೇಕ್ಷಕರು ಎನ್ನುತ್ತೇನೆ.

* ನಿಮ್ಮ ಕನಸಿನ ಪಾತ್ರವೇನಾದರೂ ಇದೆಯೇ?

ಪೌರಾಣಿಕ ಪಾತ್ರದಲ್ಲಿ ನಟಿಸಬೇಕೆಂಬುದು ನನ್ನಾಸೆ. ಆದರೆ, ಇಂತಹದ್ದೇ ಪಾತ್ರದಲ್ಲಿ ಅಭಿನಯಿಸಬೇಕು ಎಂಬುದಿಲ್ಲ. ಯಾವುದೇ, ಪಾತ್ರ ನೀಡಿದರೂ ನಟಿಸಲು ಸಿದ್ಧ. ಪೌರಾಣಿಕ ಪಾತ್ರಗಳ ಸ್ಕ್ರಿಪ್ಟ್‌ಗಳು ಬಂದಿಲ್ಲ.

ಇದನ್ನೂ ಓದಿ:`ಪ್ರೇಮ' ಪಲ್ಲಕ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.