ADVERTISEMENT

ಸಂದರ್ಶನ | ಕಂಟೆಂಟ್‌ ಸಿನಿಮಾಗಳಿಗೆ ಪ್ರೇಕ್ಷಕರಿದ್ದಾರೆ: ನಟ ಪ್ರವೀಣ್‌ ತೇಜ್‌

ಸುಕೃತ ಎಸ್.
Published 5 ಜುಲೈ 2024, 0:30 IST
Last Updated 5 ಜುಲೈ 2024, 0:30 IST
ಪ್ರವೀಣ್ ತೇಜ್
ಪ್ರವೀಣ್ ತೇಜ್   
ಪ್ರವೀಣ್‌ ತೇಜ್‌ ನಟನೆಯ ‘ಜಿಗರ್’ ಚಿತ್ರ ಇಂದು (ಜುಲೈ 5) ತೆರೆ ಕಾಣುತ್ತಿದೆ. ಸದಾ ಹೊಸತನದಿಂದ ಕೂಡಿರುವ ಕಥೆಗಳನ್ನು ಆಯ್ದುಕೊಳ್ಳುವ ಇವರು ಪ್ರಯೋಗಶೀಲ ಚಿತ್ರಗಳ ಕುರಿತಾದ ತಮ್ಮ ಆಲೋಚನೆಯನ್ನಿಲ್ಲಿ ಹಂಚಿಕೊಂಡಿದ್ದಾರೆ...

‘ಜಿಗರ್‌’ನಲ್ಲಿನ ನಿಮ್ಮ ಪಾತ್ರದ ಕುರಿತು ಹೇಳಬಹುದೇ?

ಪಾತ್ರದ ಹೆಸರು ಜೀವ. ಸ್ವಲ್ಪ ಆ್ಯಂಗ್ರಿ ಯಂಗ್‌ಮ್ಯಾನ್‌ ಎನ್ನಬಹುದಾದ ಪಾತ್ರ. ಯಾವುದೇ ಸನ್ನಿವೇಶಕ್ಕೂ ತಕ್ಷಣದಲ್ಲಿ ಈ ಪಾತ್ರ ಪ್ರತಿಕ್ರಿಯಿಸುತ್ತದೆ. ಕಮರ್ಷಿಯಲ್ ಸಿನಿಮಾ ಒಂದರಲ್ಲಿ ಇರಬಹುದಾದ ಎಲ್ಲ ಎಲಿಮೆಂಟ್‌ಗಳೂ ಈ ಸಿನಿಮಾದಲ್ಲಿದೆ. ಒಟ್ಟಿನಲ್ಲಿ ಮನರಂಜನೆಯೊಂದಿಗೆ ಈ ಪಾತ್ರವು ಈ ಚಿತ್ರದಲ್ಲಿ ಜೀವಿಸಿದೆ.

ಈ ಚಿತ್ರವನ್ನು ಯಾಕಾಗಿ ಆಯ್ಕೆ ಮಾಡಿಕೊಂಡಿರಿ?

ADVERTISEMENT

ಕಥೆ ಕೇಂದ್ರಿತ ಚಿತ್ರಗಳಲ್ಲಿ ಅಥವಾ ಇದನ್ನು ಪ್ರಯೋಗಶೀಲ ಚಿತ್ರಗಳೂ ಎಂದೂ ಹೇಳಬಹುದು. ಇಂಥ ಚಿತ್ರಗಳಲ್ಲಿಯೇ ನಾನು ಹೆಚ್ಚಾಗಿ ನಟಿಸಿದ್ದೇನೆ. ಇಂಥ ಚಿತ್ರಗಳಲ್ಲಿ ನಟಿಸುವುದು ಒಂದು ರೀತಿಯಲ್ಲಿ ಸುರಕ್ಷಿತವಾದುದು. ಯಾಕೆಂದರೆ, ಒಂದೊಮ್ಮೆ ಸಿನಿಮಾವು ದುಡ್ಡ ಮಾಡಲಿಲ್ಲ ಎಂದಾದರೂ, ಇಂಥ ಸಿನಿಮಾಗಳಿಗೆ ಮೀಸಲು ವೀಕ್ಷಕರು ಇದ್ದಾರೆ. ಒಟಿಟಿನಲ್ಲಿ ಇಂಥ ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತದೆ. ಆದರೆ, ಕಮರ್ಷಿಯಲ್‌ ಸಿನಿಮಾ ಎಂದರೆ ಹಾಗಲ್ಲ. ಇದು ದೊಡ್ಡ ಪ್ರೇಕ್ಷಕರನ್ನು ತಲುಪುತ್ತದೆ. ಒಳ್ಳೆಯ ಕಥೆ, ಒಳ್ಳೆಯ ನಿರ್ಮಾಪಕರು ಸಿಕ್ಕಾಗ ಇಂಥ ಕಮರ್ಷಿಯಲ್‌ ಚಿತ್ರದಲ್ಲಿಯೂ ನಟಿಸಬೇಕು. ಇದೇ ಹಾದಿಯಲ್ಲಿ ನಾನು ಈ ಚಿತ್ರವನ್ನು ಒಪ್ಪಿಕೊಂಡೆ.

ಜೀವನದಲ್ಲಿ ಒಂದು ಗುರಿ ಇದ್ದಾಗ, ಅದರ ಕುರಿತು ಮಾತ್ರ ಯೋಚನೆ ಮಾಡಬೇಕು ಮತ್ತು ಆ ಗುರಿಯನ್ನು ತಲುಪಲು ಶ್ರಮಿಸಬೇಕು. ಹೀಗೆ ಆಗದೆ, ನಮ್ಮ ಏಕಾಗ್ರತೆ ವಿಚಲಿತ ಆದಾಗ ಬದುಕು ಏನಾಗುತ್ತದೆ ಎನ್ನುವುದನ್ನು ಈ ಚಿತ್ರ ಹೇಳುತ್ತದೆ. ‘ಜಿಗರ್‌’ ಒಂದು ಸುಂದರ ಪ್ರೇಮ ಕಥೆ ಇರುವ ಸಿನಿಮಾ ಕೂಡ ಹೌದು.

ಒಬ್ಬ ನಟನಿಗೆ ಕಮರ್ಷಿಯಲ್‌ ಆಗಿ ಯಶಸ್ವಿ ಆಗುವುದೇ ಮುಖ್ಯವೇ?

ಯಾಕಾಗಿ ಎಲ್ಲ ನಟರು ಕಮರ್ಷಿಯಲ್‌ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಇಚ್ಛೆ ಇಟ್ಟುಕೊಂಡಿರುತ್ತಾರೆ ಎಂದರೆ, ಈ ಚಿತ್ರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಅಧಿಕ ಇರುತ್ತದೆ. ಹೆಚ್ಚಿನ ಪ್ರೇಕ್ಷಕರು ಸಿನಿಮಾ ನೋಡಲು ಬಂದರೆ ಮಾತ್ರ ಸಿನಿಮಾವು ಹಣ ಗಳಿಸಿಕೊಳ್ಳುತ್ತದೆ. ಪ್ರಯೋಗಶೀಲವಾದ ಎಷ್ಟೇ ಸಿನಿಮಾ ಮಾಡಿದರು ಕೂಡ ಅದಕ್ಕೆ ಜನ ಸೇರಲಿಲ್ಲ ಎಂದಾದರೆ, ಆ ಸಿನಿಮಾವನ್ನು ಸೋಲಿನ ಪಟ್ಟಿಗೆ ಸೇರಿಸಲಾಗುತ್ತದೆ. ಆದರೆ, ಮಾಸ್‌ ಆಗಿ ಇರುವ ಸಿನಿಮಾಗಳು ಹಣ ಗಳಿಸಿಕೊಂಡಾಗ ಮಾತ್ರ ಈ ನಾಯಕ ನಟನ ಸಿನಿಮಾವು ಗೆದ್ದಿತು ಎನ್ನಲಾಗುತ್ತದೆ. ನಮ್ಮ ಹಿಂದಿನ ಸಿನಿಮಾ ಯಾವ ರೀತಿಯಲ್ಲಿ ಗೆದ್ದಿದೆ ಎನ್ನುವುದರ ಮೇಲೆಯೇ ನಮ್ಮ ಮುಂದಿನ ಸಿನಿಮಾವು ನಿರ್ಧಾರವಾಗುತ್ತದೆ. ಆದ್ದರಿಂದ ನಮ್ಮ ಭವಿಷ್ಯಕ್ಕೆ ಕಮರ್ಷಿಯಲ್‌ ಸಿನಿಮಾ ಮಾಡುವುದೇ ಮುಖ್ಯವಾಗುತ್ತದೆ.

ಪ್ರಯೋಗಶೀಲ ಸಿನಿಮಾಗಳಲ್ಲಿ ನಟಿಸಿದ್ದೀರಿ, ಒಳ್ಳೆಯ ಪಾತ್ರಗಳನ್ನು ನಿರ್ವಹಿಸಿದ್ದೀರಿ. ಆದರೆ, ಇವಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಅನ್ನಿಸುತ್ತದೆಯೇ?

ಪ್ರಯೋಗಶೀಲ ಸಿನಿಮಾಗಳಿರಲಿ, ಕಮರ್ಷಿಯಲ್‌ ಸಿನಿಮಾಗಳೇ ಇರಲಿ, ಸಿನಿಮಾದ ಹುಟ್ಟು ಒಂದೇ ರೀತಿಯಲ್ಲಿಯೇ ಇರುತ್ತದೆ. ಎರಡು ರೀತಿಯ ಸಿನಿಮಾಗಳಲ್ಲೂ ಕಥೆ ಇರುತ್ತದೆ. ಕಥೆಯನ್ನು ಯಾವ ರೀತಿಯಲ್ಲಿ ಜನರಿಗೆ ತೋರಿಸುತ್ತೇವೆ ಎನ್ನುವುದರಲ್ಲಿ ವ್ಯತ್ಯಾಸ ಇದೆಯಷ್ಟೆ. ನೈಜವಾಗಿ, ಸಹಜವಾಗಿ ಕಥೆಯನ್ನು, ನಾಯಕನ ಪಾತ್ರವನ್ನು ಕಟ್ಟಿಕೊಟ್ಟರೆ ಅದು ಪ್ರಯೋಗಶೀಲ ಸಿನಿಮಾಗಳು ಎನಿಸಿಕೊಳ್ಳುತ್ತದೆ. ಕಮರ್ಷಿಯಲ್‌ ಸಿನಿಮಾಗಳಲ್ಲಿ ನಾವು ಸನ್ನಿವೇಶಗಳನ್ನು ಅತಿ ರಂಜನೀಯ ಹಾಗೂ ಸಹಜವಲ್ಲದ ಪ್ರತಿಕ್ರಿಯೆಗಳ ಮೂಲಕ ತೋರಿಸುತ್ತೇವೆ. ಆದ್ದರಿಂದ, ಒಬ್ಬ ನಟನಿಗೆ ಯಾವುದೇ ರೀತಿಯ ಸಿನಿಮಾ ಇರಲಿ, ಕಥೆ ಮುಖ್ಯ ಮತ್ತು ನಮ್ಮ ವೈಯಕ್ತಿಕ ಏಳಿಗೆ ಅಥವಾ ನಾವು ನಟನೆಯಲ್ಲಿ ಎಷ್ಟು ಸುಧಾರಿಸಿದ್ದೇವೆ ಎನ್ನುವುದು ಮುಖ್ಯವಷ್ಟೆ.

ನಿಮ್ಮ ಮುಂದಿನ ಸಿನಿಮಾ ಯಾವುದು?

ಎಂ.ಡಿ. ಶ್ರೀಧರ್ ಅವರ ನಿರ್ದೇಶನದಲ್ಲಿ ಒಂದು ಸಿನಿಮಾ ಮಾಡಿದ್ದೀನಿ. ಈ ಸಿನಿಮಾ ಕೂಡ ಚೆನ್ನಾಗಿ ಮೂಡಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.