ಬೆಂಗಳೂರು: ಕಳೆದ ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದ ನಟ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ ಸರ್ಕಾರಿ ಗೌರವದೊಂದಿಗೆ ಕಂಠೀರವ ಸ್ಟುಡಿಯೊದಲ್ಲಿ ನಡೆದಿದ್ದು, ಮಂಗಳವಾರ ಹಾಲು–ತುಪ್ಪ ಬಿಡುವ ಕಾರ್ಯ ನಡೆಸಲು ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ. ಹೀಗಾಗಿ ಅಲ್ಲಿಯವರೆಗೂ ಪುನೀತ್ ಅವರ ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ.
ಈ ಕುರಿತು ಮಾತನಾಡಿದ ಪುನೀತ್ ರಾಜ್‌ಕುಮಾರ್ ಅಣ್ಣ, ನಟ ರಾಘವೇಂದ್ರ ರಾಜ್‌ಕುಮಾರ್, ‘ಮಂಗಳವಾರ ಹಾಲು–ತುಪ್ಪ ಬಿಡುವ ಕಾರ್ಯ ನಡೆಯಲಿದ್ದು, ಇದಾದ ಬಳಿಕ ಸಾರ್ವಜನಿಕರಿಗೆ ಕಂಠೀರವ ಸ್ಟುಡಿಯೊ ಒಳಗಡೆ ಪುನೀತ್ ಸಮಾಧಿ ನೋಡಲು ಅವಕಾಶ ನೀಡಲಾಗುವುದು. ಈ ಭಾರ ನಮ್ಮ ಕೊನೆಯವರೆಗೂ ಇರಲಿದೆ. ತಂದೆ ತಾಯಿಯನ್ನು ಇಷ್ಟಪಟ್ಟು ಅಪ್ಪು ಬೇಗ ಹೋಗಿದ್ದಾನೆ ಎನಿಸುತ್ತಿದೆ. ಅಭಿಮಾನಿಗಳ ಪ್ರೀತಿಗೆ ಏನೂ ಹೇಳಲು ಸಾಧ್ಯವಿಲ್ಲ. ಮೂರು ದಿನ ಕಳೆದರೂ ಲಕ್ಷಾಂತರ ಜನ ಇನ್ನೂ ಬರುತ್ತಿದ್ದಾರೆ.
ಇದಕ್ಕಾಗಿಯೇ ಅಪ್ಪಾಜಿ ಅಭಿಮಾನಿ ದೇವರುಗಳು ಎಂದಿದ್ದರು. ಅಪ್ಪಾಜಿ ಅಂತ್ಯಕ್ರಿಯೆ ಸಂದರ್ಭದಲ್ಲಿ ಜನರೇ ಕಂಠೀರವಸ್ಟುಡಿಯೊ ಒಳಗೆ ಹೋಗಿ ಕುಟುಂಬಸ್ಥರಿಗಿಂತ ಮೊದಲೇ ಹಾಲು–ತುಪ್ಪ ಬಿಟ್ಟಿದ್ದರು. ಮಣ್ಣನ್ನೂ ತೋಡಿದ್ದರು. ಹೀಗಾಗಿ ಈ ಬಾರಿ ಹಾಗೆ ಆಗಬಾರದು ಎಂದು ಕುಟುಂಬಸ್ಥರು ಹಾಲು–ತುಪ್ಪ ಬಿಟ್ಟ ಬಳಿಕ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದರು.
‘ಸರ್ಕಾರ, ಅಭಿಮಾನಿಗಳಿಗೆ ಧನ್ಯವಾದ. ಶಾಂತಿಯಿಂದ ಅಂತ್ಯಕ್ರಿಯೆ ನಡೆದಿದೆ. ಅಪ್ಪಾಜಿ ನಿಧನರಾದ ಸಂದರ್ಭದಲ್ಲಿ ನಡೆದಿದ್ದ ಘಟನೆ ನಮಗೆಲ್ಲ ಇನ್ನೂ ನೆನಪಿದೆ. ಹೀಗಾಗಿ ಯಾವುದೇ ಯಾತ್ರೆ ಇಲ್ಲದೆ ಕಂಠೀರವ ಸ್ಟೇಡಿಯಂನಿಂದ ಇಲ್ಲಿಗೆ ಪಾರ್ಥಿವ ಶರೀರವನ್ನು ತರಲಾಯಿತು. ಕುಟುಂಬದ ಸದಸ್ಯರೇ ಈ ನಿರ್ಧಾರ ಕೈಗೊಂಡಿದ್ದೆವು. ಜನರು ಮಾಧ್ಯಮದ ಮುಖಾಂತರ ಎಲ್ಲವನ್ನೂ ವೀಕ್ಷಿಸಿದ್ದಾರೆ. ಅವರ ಪ್ರೀತಿಗೆ ಏನೂ ಹೇಳಲು ಸಾಧ್ಯವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.