ADVERTISEMENT

ಇಬ್ಬನಿ ತಬ್ಬಿದ ಇಳೆಯಲಿ; ಕನ್ನಡಕ್ಕೆ ಇಂತಹ ಫಿಲ್ಮ್‌ಮೇಕರ್ ಅವಶ್ಯವಿತ್ತು: ರಕ್ಷಿತ್

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 5:35 IST
Last Updated 31 ಆಗಸ್ಟ್ 2024, 5:35 IST
ವಿಹಾನ್‌, ಅಂಕಿತಾ ಅಮರ್‌
ವಿಹಾನ್‌, ಅಂಕಿತಾ ಅಮರ್‌   

ರಕ್ಷಿತ್‌ ಶೆಟ್ಟಿ ಸಾರಥ್ಯದ ಪರಂವಃ ಸ್ಟುಡಿಯೋಸ್‌ ನಿರ್ಮಾಣ ಮಾಡಿರುವ, ಚಂದ್ರಜಿತ್‌ ಬೆಳ್ಯಪ್ಪ ನಿರ್ದೇಶದ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಸೆ.5ರಂದು ತೆರೆಕಾಣಲಿದ್ದು, ಚಿತ್ರದ ಟ್ರೇಲರ್‌ ಅನ್ನು ಇತ್ತೀಚೆಗೆ ರಕ್ಷಿತ್‌ ಶೆಟ್ಟಿ ಬಿಡುಗಡೆಗೊಳಿಸಿದರು. 

‘ಚಂದ್ರಜಿತ್ ನಮ್ಮ ಸೆವೆನ್‌ ಆಡ್ಸ್‌ನ ಭಾಗ. 9 ವರ್ಷಗಳ ಹಿಂದೆ ಬ್ಲಾಗ್‌ನಲ್ಲಿ ಈ ಸಿನಿಮಾ ಕಥೆಯನ್ನು ಬರೆದು ನನಗೆ ಕಳುಹಿಸಿದ್ದರು. ಬರವಣಿಗೆ ವಿಶೇಷ ಅನಿಸಿತು. ಅವರು ಬರೆದ ಕಥೆ ಇಂದು ಸಿನಿಮಾ ರೂಪ ಪಡೆದಿದೆ. ಬ್ಲಾಗ್‌ ಓದಿದ ಬಳಿಕ, ಚಂದ್ರಜಿತ್‌ ಸಿನಿಮಾ ಮಾಡಿದರೆ ಅದು ರೊಮ್ಯಾಂಟಿಕ್‌ ಸಿನಿಮಾಗಳನ್ನೇ ಮಾಡುತ್ತಾರೆ ಎನ್ನುವ ಭರವಸೆ ನನಗೆ ಬಂತು. ಚೆನ್ನಾಗಿಯೇ ಸಿನಿಮಾ ಮಾಡುತ್ತಾರೆ ಎನ್ನುವ ನಂಬಿಕೆಯೂ ಇತ್ತು. ಚಂದ್ರಜಿತ್‌ ಪ್ರಾಮಾಣಿಕತೆಯೇ ಆತನ ಮೇಲೆ ನಂಬಿಕೆ ಇಡಲು ಮತ್ತೊಂದು ಕಾರಣ. ಸಿನಿಮಾವನ್ನೂ ಇಷ್ಟೇ ಪ್ರಾಮಾಣಿಕವಾಗಿ ಮಾಡಿದ್ದಾರೆ. ಇಂತಹ ಸಿನಿಮಾಗಳು ಕನ್ನಡಕ್ಕೆ ಇಂದು ಅಗತ್ಯವಿದೆ. ಸದ್ಯಕ್ಕೆ ಈ ರೀತಿಯ ಫಿಲ್ಮ್‌ಮೇಕರ್‌ ಕನ್ನಡ ಚಿತ್ರರಂಗದಲ್ಲಿ ಇಲ್ಲ. ಇಂತಹ ಫಿಲ್ಮ್‌ಮೇಕರ್‌ ಅಗತ್ಯ ಚಿತ್ರರಂಗಕ್ಕಿದೆ. ಇನ್ನೊಂದಿಷ್ಟು ಜನ ಇವರಿಂದ ಪ್ರೇರಿತರಾಗಿ ಸಿನಿಮಾ ಮಾಡಬಹುದು. ರೊಮ್ಯಾಂಟಿಕ್‌ ಸಿನಿಮಾ ಬಹಳಷ್ಟು ಜನ ಮಾಡುತ್ತಾರೆ. ಆದರೆ ಅದರಲ್ಲೂ ಒಂದು ಭಿನ್ನತೆ ಇರಬೇಕು. ನಿರ್ದೇಶಕರ ಒಳಗಡೆಯೂ ರೊಮ್ಯಾನ್ಸ್‌ ಅನ್ನುವುದು ಇದ್ದರಷ್ಟೇ ಭಿನ್ನವಾದ ಸಿನಿಮಾ ಕಟ್ಟಿಕೊಡಲು ಸಾಧ್ಯ. ಚಂದ್ರಜಿತ್‌ ಅವರ ಒಳಗಡೆ ಈ ರೊಮ್ಯಾನ್ಸ್‌ ತುಂಬಿತುಳುಕುತ್ತಿದೆ’ ಎಂದು ರಕ್ಷಿತ್‌ ನಗೆಚಟಾಕಿ ಹಾರಿಸಿದರು. 

ಈ ಸಿನಿಮಾದಲ್ಲಿನ ನಟನೆಗಾಗಿ ನಟಿ ಅಂಕಿತಾ ಅಮರ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆಯಲಿದೆ ಎನ್ನುವ ಭರವಸೆಯನ್ನೂ ರಕ್ಷಿತ್‌ ವ್ಯಕ್ತಪಡಿಸಿದರು. 

ADVERTISEMENT

‘ಈ ಸಿನಿಮಾ ಒಂದು ಕಾದಂಬರಿ ಓದಿದ ಅನುಭವ ಕೊಡಬೇಕು ಎಂದಿತ್ತು. ಇದನ್ನು ಸಾಧಿಸಿದ್ದೇನೆ ಎನ್ನುವುದು ನನ್ನ ನಂಬಿಕೆ. ಈ ಅನುಭವ ನೀಡಲೆಂದೇ ಶೀರ್ಷಿಕೆಯಿಂದ ಹಿಡಿದು ಪೋಸ್ಟರ್‌, ಸಂಗೀತ, ಛಾಯಾಚಿತ್ರಗ್ರಹಣವನ್ನು ಭಿನ್ನವಾಗಿ ಮಾಡಿದ್ದೇವೆ. ಈ ಚಿತದಲ್ಲಿ ‘ಗೀತಾಂಜಲಿ’ ಚಿತ್ರದ ಖ್ಯಾತಿಯ ನಟಿ ಗಿರಿಜಾ ಶೆಟ್ಟರ್ ಅಭಿನಯಿಸಿದ್ದಾರೆ. ಇಪ್ಪತ್ತು ವರ್ಷಗಳ ನಂತರ ಅವರು ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ’ ಎಂದರು ಚಂದ್ರಜಿತ್‌ ಬೆಳ್ಯಪ್ಪ. 

ಚಿತ್ರದ ನಾಯಕ ವಿಹಾನ್‌, ನಾಯಕಿಯರಾದ ಅಂಕಿತಾ ಅಮರ್‌, ಮಯೂರಿ ನಟರಾಜ್, ಪರಂವಃ ಸಿಇಒ ಶ್ರೀನೀಶ್‌ ಶೆಟ್ಟಿ, ಸಂಗೀತ ನಿರ್ದೇಶಕ ಗಗನ್ ಬಡೇರಿಯಾ, ಛಾಯಾಚಿತ್ರಗ್ರಾಹಕ ಶ್ರೀವತ್ಸನ್ ಸೆಲ್ವರಾಜನ್, ಸಂಕಲನಕಾರ ರಕ್ಷಿತ್ ಕಾಪು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.