ಪ್ರಜಾವಾಣಿ ಪತ್ರಿಕೆಯು ಈ ವರ್ಷ ‘ಸಿನಿ ಸಮ್ಮಾನ’ ಪುರಸ್ಕಾರ ನೀಡಿ ಚಿತ್ರರಂಗದ ಪ್ರತಿಭೆಗಳನ್ನು ಗೌರವಿಸಿತ್ತು. ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ನಿರೂಪಿಸಿದ್ದ ಖ್ಯಾತ ನಟ ರಮೇಶ್ ಅರವಿಂದ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
***
ನಾವೆಲ್ಲ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡು ಇರುತ್ತೇವೆ. ಸದಾ ಓಡುತ್ತಾ ಇರುತ್ತೇವೆ. ಸರಿಯಾದ ದಿಕ್ಕಿನಲ್ಲಿ ಓಡುತ್ತಾ ಇದ್ದೇವೆಯೋ ಇಲ್ಲವೋ ಎಂಬ ಅನುಮಾನ ಆಗೀಗ ಎದುರಾಗುತ್ತದೆ. ಆಗ ಯಾರಾದರೂ ವಿಶ್ವಾಸಾರ್ಹತೆ ಇರುವವರು ಪ್ರಶಸ್ತಿ ನೀಡಿದರೆ ಓಡುತ್ತಿರುವ ದಿಕ್ಕು ಸರಿಯಾಗಿದೆ ಎಂದು ಸ್ಪಷ್ಟವಾಗುತ್ತದೆ. ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಪ್ರೇರಣೆ ಸಿಗುತ್ತದೆ. ಇದು ಬರಿ ಪ್ರಶಸ್ತಿ ಅಲ್ಲ, ಪ್ರಜಾವಾಣಿ ನೀಡುವ ಪ್ರಶಸ್ತಿ. ಎಪ್ಪತ್ತೈದು ವರ್ಷಗಳ ಇತಿಹಾಸ ಇರುವ, ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡು ಬಂದಿರುವ ಪತ್ರಿಕೆ ‘ಪ್ರಜಾವಾಣಿ’. ಬೆಳೆಯುವ ಹಂತದಲ್ಲಿ ಇರುವ ನಟ-ನಟಿ, ನಿರ್ದೇಶಕರು, ತಂತ್ರಜ್ಞರಿಗೆ ಈ ರೀತಿಯ ಪ್ರಶಸ್ತಿ ಬಹಳ ಮಹತ್ವದ್ದು.
‘ಪ್ರಜಾವಾಣಿ’ ಮೊದಲ ಸಲ ಸಿನಿ ಸಮ್ಮಾನ ಪುರಸ್ಕಾರ ನೀಡಿತು. ನಾನು ನಿರೀಕ್ಷಿಸಿದ್ದಕ್ಕಿಂತ ಅಚ್ಚುಕಟ್ಟಾಗಿ, ಅದ್ದೂರಿಯಾಗಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿತವಾಗಿತ್ತು. ಫಿಲಂಫೇರ್ ಪ್ರಶಸ್ತಿ ಸಮಾರಂಭವನ್ನು ನಾನು ನೋಡಿದ್ದೆ, ನಿರೂಪಿಸಿದ್ದೆ. ಕನ್ನಡದ ಪತ್ರಿಕೆ ಕೂಡ ಅದೇ ಮಟ್ಟಕ್ಕೆ ಕಾರ್ಯಕ್ರಮ ಆಯೋಜಿಸಿದ್ದು ತುಂಬಾ ಖುಷಿ ತಂದಿತು.
ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವಂತೆ ನನ್ನನ್ನು ಕೇಳಿದಾಗ ನಾನು ಮೊದಲು ಕೇಳಿದ್ದು- ತೀರ್ಪುಗಾರರು ಯಾರು ಎಂದು. ಗಿರೀಶ್ ಕಾಸರವಳ್ಳಿ ತರಹದವರು ನೇತೃತ್ವ ವಹಿಸಿದ್ದಾರೆ ಎನ್ನುವುದನ್ನು ಕೇಳಿಯೇ ನನಗೆ ಈ ಪ್ರಶಸ್ತಿಯ ಆಯ್ಕೆಯ ಬಗೆಗೆ ಸ್ಪಷ್ಟತೆ ಸಿಕ್ಕಿತು. ಯಾವುದೇ ಪೂರ್ವಗ್ರಹವಿಲ್ಲದೆ ಆಯ್ಕೆ ಮಾಡುವ ಸಮಿತಿ ತುಂಬಾ ಮುಖ್ಯ. ಅದು ‘ಪ್ರಜಾವಾಣಿ’ ಎಚ್ಚರಿಕೆಯಿಂದ ನಿರ್ವಹಿಸಿದ್ದು ಇನ್ನೊಂದು ಗಮನ ಸೆಳೆಯುವ ವಿಷಯ.
ಈ ಎಲ್ಲ ಕಾರಣಗಳಿಂದ ನಾನು, ಅದರಲ್ಲಿಯೂ ‘ಪ್ರಜಾವಾಣಿ’ ಪ್ರಶಸ್ತಿ ನೀಡುತ್ತಿದೆ ಎನ್ನುವ ಕಾರಣಕ್ಕೆ ಕಾರ್ಯಕ್ರಮ ನಿರೂಪಿಸಲು ಒಪ್ಪಿಕೊಂಡೆ.
ಹೀಗೆ ಪ್ರಶಸ್ತಿ ನೀಡುವ ಪರಿಪಾಟ ವರ್ಷದಿಂದ ವರ್ಷಕ್ಕೆ ಇನ್ನಷ್ಟು ಕಳೆಗಟ್ಟಲಿ. ಇಡೀ ಚಿತ್ರರಂಗಕ್ಕೆ ಇಂತಹ ಪ್ರಶಸ್ತಿಯ ಅಗತ್ಯ ಖಂಡಿತ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.