ADVERTISEMENT

ಯಾರಿಗೇ ಆದರೂ ಅಗತ್ಯ ಗೌರವ ಕೊಡಲೇ ಬೇಕು: ರಮೇಶ್‌ ಅರವಿಂದ್‌

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 13:40 IST
Last Updated 6 ಸೆಪ್ಟೆಂಬರ್ 2024, 13:40 IST
ರಮೇಶ್‌ ಅರವಿಂದ್‌
ರಮೇಶ್‌ ಅರವಿಂದ್‌   

ಬೆಂಗಳೂರು: ಕನ್ನಡ ಚಲನಚಿತ್ರೋದ್ಯಮದಲ್ಲಿ ಕಲಾವಿದೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನ ಮಾಡಿ ವರದಿ ನೀಡುವುದಕ್ಕಾಗಿ ಸಮಿತಿ ರಚಿಸಲು ಒತ್ತಡ ಹೆಚ್ಚಾಗುತ್ತಿದೆ. ನಟ ರಮೇಶ್‌ ಅರವಿಂದ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಚಿತ್ರರಂಗ ಮಾತ್ರ ಎಂದಲ್ಲ, ಯಾವುದೇ ಕ್ಷೇತ್ರದಲ್ಲಾದರೂ ಯಾರಿಗೇ ಆದರೂ ಕೊಡಬೇಕಾದ ಅಗತ್ಯ ಗೌರವ ಕೊಡಲೇಬೇಕು. ಯಾರಿಗಾದರೂ ಅನ್ಯಾಯ ಆಗುತ್ತಿದೆ ಎಂದಾದರೆ ನ್ಯಾಯ ಕೇಳುವ ಪ್ರಕ್ರಿಯೆಗೆ ನನ್ನ ಬೆಂಬಲಿದೆ ಎಂದಿದ್ದಾರೆ.

ಇಂಥ ವಿಷಯಗಳು ಬಂದಾಗ ಇಡೀ ಚಿತ್ರರಂಗವನ್ನು ತಕ್ಕಡಿಯ ಒಂದೇ ಕಡೆ ಇಟ್ಟು ತೂಗುವ ಕಾರ್ಯ ನಡೆಯುತ್ತಿರುವುದು ದುರಂತ. ಸಿನಿಮಾ ಎಂಬುದು ಬಹಳ ಅದ್ಭುತ ಕಲೆ. ಇಲ್ಲಿ ಎಲ್ಲರೂ ಬಹಳ ಕಷ್ಟಪಟ್ಟು ಕೆಲಸ ಮಾಡಿರುತ್ತೇವೆ. ಆದರೆ ಇಲ್ಲಿರುವ ಯಾರೋ ಕೆಲವರಿಂದ ಹೀಗೆ ಆದಾಗ ಇಡೀ ಚಿತ್ರರಂಗವನ್ನು ದೂಷಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ನಟಿ ತಾರಾ ಅನೂರಾಧ ಪ್ರತಿಕ್ರಿಯಿಸಿ, ನನ್ನ ಗಮನಕ್ಕೆ ಬಂದ ಹಾಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕನ್ನಡ ಚಿತ್ರೋದ್ಯಮದಲ್ಲಿ ಇಲ್ಲ. ಚಿತ್ರರಂಗ ಆ ಮಟ್ಟಿಗೆ ಹಾಳಾಗಿಲ್ಲ. ನಮ್ಮ ಚಿತ್ರರಂಗದಲ್ಲಿ ಕುಟುಂಬದ ಬಾಂಧವ್ಯವಿದೆ. ಆ ರೀತಿ ಪ್ರಕರಣಗಳು ಬೆಳಕಿಗೆ ಬಂದಾಗ ಖಂಡಿತ ವಿರೋಧಿಸಬೇಕು. ಇದಕ್ಕೆ ಸಮಿತಿ ರಚನೆಯಾಗಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಅದರಲ್ಲಿ ತಪ್ಪಿಲ್ಲ. ಮಹಿಳೆಯರ ರಕ್ಷಣೆಗೆ ಮಹಿಳಾ ಆಯೋಗವಿದೆ. ಚಿತ್ರರಂಗದ ಸಮಸ್ಯೆಗಳ ಪರಿಹಾರಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಯಿದೆ. ಈ ರೀತಿ ಸಮಸ್ಯೆಗಳಾದಾಗ ಇವರೆಲ್ಲ ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.

ADVERTISEMENT
ಕಲಾವಿದೆಯರ ಸಮಸ್ಯೆಗಳನ್ನು ಆಲಿಸಲು ಸಮಿತಿ ರಚಿಸಬೇಕೆಂಬುದು ಸೂಕ್ತ ಬೇಡಿಕೆ. ಇದಕ್ಕೆ ಪೂರ್ಣ ಚಿತ್ರೋದ್ಯಮವೇ ಸಾಥ್‌ ನೀಡಲಿದೆ. ಈ ನಿರ್ಧಾರದ ಪತ್ರಕ್ಕೆ ಸಹಿ ಮಾಡಿ ಗುಹೆಯಲ್ಲಿ ಕುಳಿತರೆ ಪ್ರಯೋಜನವಿಲ್ಲ. ಅದರ ಹಿಂದೆ ಹೋಗಿ ಏನಾಗುತ್ತಿದೆ ಎಂದು ನೋಡುವೆ. ಮಾಧ್ಯಮಗಳಿಂದ ನನಗೆ ವಿಷಯ ಗೊತ್ತಾಗುತ್ತಿದೆ. 
–ರಕ್ಷಿತ್‌ ಶೆಟ್ಟಿ, ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.