ADVERTISEMENT

ಆರ್ಮುಗಂ ಕೋಟೆಯಿಂದ ಗಜೇಂದ್ರಗಡ ಕೋಟೆಗೆ ರವಿಶಂಕರ್‌! ಬರುತ್ತಿದೆ ‘ಬಯಲು ಸೀಮೆ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 8:01 IST
Last Updated 21 ಸೆಪ್ಟೆಂಬರ್ 2021, 8:01 IST
ರವಿಶಂಕರ್‌ 
ರವಿಶಂಕರ್‌    

ವಿಭಿನ್ನ ಮಾದರಿಯ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟ ರವಿಶಂಕರ್‌ ಇದೀಗ ಆರ್ಮುಗಂ ಕೋಟೆಯಿಂದ ಬಯಲುಸೀಮೆಯ ಗಜೇಂದ್ರಗಡ ಕೋಟೆಗೆ ಲಗ್ಗೆ ಇಟ್ಟಿದ್ದಾರೆ!

4 ಸಾವಿರಕ್ಕೂ ಅಧಿಕ ಸಿನಿಮಾಗಳಿಗೆ ಡಬ್ಬಿಂಗ್‌ ಮಾಡಿದರೂ ಬಯಲುಸೀಮೆಯ ಕನ್ನಡ ಮಾತನಾಡಲು ಹರಸಾಹಸವನ್ನೇ ಪಟ್ಟಿದ್ದಾರೆ ರವಿಶಂಕರ್‌.

ಹೊಸಬರ ತಂಡದೊಂದಿಗೆ ರವಿಶಂಕರ್‌ ಈ ಬಾರಿ ಗಜೇಂದ್ರಗಡ ಪ್ರವೇಶಿಸಿದ್ದು,ವರುಣ್‌ ಕಟ್ಟೀಮನಿ ನಿರ್ದೇಶನದ ‘ಬಯಲುಸೀಮೆ’ ಎಂಬ ಚಿತ್ರದಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಪೊಲಿಟಿಕಲ್‌ ಕ್ರೈಂ ಥ್ರಿಲ್ಲರ್‌ ಕಥಾಹಂದರವನ್ನು ಚಿತ್ರವು ಹೊಂದಿದೆ ಎನ್ನುತ್ತಾರೆ ವರುಣ್‌.

ADVERTISEMENT

ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ರವಿಶಂಕರ್‌, ‘ಕೆಂಪೇಗೌಡ ಚಿತ್ರದಲ್ಲಿ ನಾನೂ ಹೊಸಬನೇ. ನನ್ನ ಸಿನಿ ಪಯಣದಲ್ಲಿ ಹೊಸಬರ ಜೊತೆ ಹಲವು ಸಿನಿಮಾಗಳನ್ನು ಮಾಡಿದ್ದೇನೆ. ಈ ಚಿತ್ರದಲ್ಲಿ ಬಹಳ ವಾಸ್ತವವಾಗಿರುವ ಪಾತ್ರಕ್ಕೆ ಬಣ್ಣಹಚ್ಚಿದ್ದೇನೆ.ಇದರಲ್ಲಿ ಯಾವುದೇ ಆರ್ಭಟ ಇಲ್ಲ. ನ್ಯಾಚುರಲ್‌ ಆಗಿರುತ್ತೇನೆ. ನಾಗಾಭರಣ ಅವರ ಜೊತೆಗೆ ಮೊದಲ ಬಾರಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದೇನೆ. ನಾನು 4 ಸಾವಿರ ಚಿತ್ರಕ್ಕೆ ಡಬ್ಬಿಂಗ್‌ ಮಾಡಿದ್ದೇನೆ. ಡಬ್ಬಿಂಗ್‌ನಲ್ಲಿ ನಾನು ತುಂಬಾ ಸ್ಪೀಡ್‌. ಇತರೆ ನಟರ ಪಾತ್ರಕ್ಕೆ ನಾಲ್ಕೈದು ಗಂಟೆಗಳಲ್ಲಿ ಡಬ್ಬಿಂಗ್‌ ಮುಗಿಸಿಬಿಡುತ್ತೇನೆ. ನಾನೇ ನಟಿಸಿದ್ದರೆ ಎರಡು ಗಂಟೆ ಅಷ್ಟೇ. ಆದರೆ, ಈ ಚಿತ್ರದ ಡಬ್ಬಿಂಗ್‌ಗೆ ನಾಲ್ಕೈದು ದಿನ ಬೇಕು ಎಂದಿದ್ದೇನೆ. ಉತ್ತರ ಕರ್ನಾಟಕ ಭಾಷೆಗೆ ಡಬ್ಬಿಂಗ್‌ ಬಹಳ ಕಷ್ಟ’ ಎಂದರು.

‘ಸಾಹೂರಾವ್‌ ಶಿಂಧೆ' ಎಂಬ ಶ್ರೀಮಂತ ವ್ಯಕ್ತಿಯ ಸುತ್ತ ಬಯಲುಸೀಮೆಯ ಕಥೆ ಚಲಿಸುತ್ತದೆ. ಗಜೇಂದ್ರಗಡ ಕೋಟೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬೀಳಗಿ ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆದಿದೆ’ ಎಂದರು ವರುಣ್‌.ಸಂಯುಕ್ತ ಹೊರನಾಡು, ಯಶ್‌ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಭವಾನಿ ಪ್ರಕಾಶ್‌, ಲಕ್ಷ್ಮಿ ನಾಡಗೌಡರ್‌ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಸಿನಿಮಾಗೆ ಸುಜಯ್‌ ಕುಮಾರ್‌ ಬಾವಿಕಟ್ಟೆ ಛಾಯಾಗ್ರಹಣ, ಮಾನಸಾ ಹೊಳ್ಳ ಸಂಗೀತ ನಿರ್ದೇಶನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.