ADVERTISEMENT

ಡೈಲಾಗ್‌ ಮರೆತರೂ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಸಂಚಾರಿ ವಿಜಯ್‌

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 9:44 IST
Last Updated 15 ಜೂನ್ 2021, 9:44 IST
ನಟ ಸಂಚಾರಿ ವಿಜಯ್‌ ಮತ್ತು ರಿಷಿ
ನಟ ಸಂಚಾರಿ ವಿಜಯ್‌ ಮತ್ತು ರಿಷಿ   

ಬೆಂಗಳೂರು: ಚಂದನವನಕ್ಕೂ ಪ್ರವೇಶಿಸುವ ಮುನ್ನ ರಂಗಭೂಮಿಯಲ್ಲಿ ಹೆಸರು ಮಾಡಿದವರು ನಟ ಸಂಚಾರಿ ವಿಜಯ್‌. ಇದೇ ರೀತಿ ರಂಗಭೂಮಿ ಹಿನ್ನೆಲೆಯಿಂದಲೇ ಚಂದನವನ ಪ್ರವೇಶಿಸಿರುವ ನಟ ರಿಷಿ, ವಿಜಯ್‌ ಜೊತೆಗೆ ನಾಟಕವೊಂದರಲ್ಲಿ ವೇದಿಕೆ ಹಂಚಿಕೊಂಡಾಗ ಆದಂತಹ ಘಟನೆಯ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಉಲ್ಲೇಖಿಸಿದ್ದಾರೆ.

‘ವಿಜಯ್‌ ಎಂತಹ ಅದ್ಭುತ ಕಲಾವಿದ ಎನ್ನುವುದು ನಮಗೆಲ್ಲರಿಗೂ ತಿಳಿದೆದೆ. 13 ಮರ್ಗೋಸಾ ಮಹಲ್‌ ನಾಟಕದ ಸಂದರ್ಭದಲ್ಲಿ ನಾವಿಬ್ಬರೂ ವೇದಿಕೆಯಲ್ಲಿ ಜೊತೆಯಾಗಿದ್ದಾಗ ನಡೆದ ಘಟನೆಯೊಂದನ್ನು ನಾನು ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ. ವಿಜಯ್‌ ಒಮ್ಮೆ ವೇದಿಕೆಯಲ್ಲಿರುವಾಗ ನಾಟಕದ ಸಂಭಾಷಣೆ ಮರೆತಿದ್ದ. ಸಭಾಂಗಣದಲ್ಲಿ ತುಂಬಿದ್ದ ಪ್ರೇಕ್ಷಕರ ಎದುರು ಹೇಳುವ ಡೈಲಾಗ್‌ ಮರೆತ ಸಂದರ್ಭದಲ್ಲಿ ಆಗುವಂತಹ ಭಯ ಆ ನಟನಿಗೆ ಮಾತ್ರ ಗೊತ್ತು. ಆದರೆ ವಿಜಯ್‌ ಭಯಪಟ್ಟಿರಲಿಲ್ಲ. ಬದಲಾಗಿ, ತಕ್ಷಣದಲ್ಲೇ ಹಿಂದಿನ ದೃಶ್ಯದಲ್ಲಿ ತನ್ನದೇ ನಟನೆಯನ್ನು ಅಣಕು ಮಾಡಿ, ಹಾವಭಾವಗಳಿಂದಲೇ ನಟಿಸಿದ್ದರು. ಅವರ ನಟನೆ ಎಷ್ಟು ಅದ್ಭುತವಾಗಿತ್ತೆಂದರೆ, ಒಂದು ನಿಮಿಷ ಯಾವುದೇ ಮಾತುಗಳಿಲ್ಲದೆ ಪ್ರೇಕ್ಷಕರನ್ನೆಲ್ಲಾ ಹಿಡಿದಿಟ್ಟುಕೊಂಡಿದ್ದರು. ಒಂದು ಪದವನ್ನು ಹೇಳದೇ ಇದ್ದರೂ, ಅವರ ನಟನೆಗೆ ಇಡೀ ಪ್ರೇಕ್ಷಕ ವರ್ಗ ಚಪ್ಪಾಳೆಯ ಸುರಿಮಳೆಗೈದಿತ್ತು. ಈ ಸಂದರ್ಭವನ್ನೆ ಉಪಯೋಗಿಸಿಕೊಂಡು ನನಗೆ ಹಾಗೂ ನನ್ನ ಜೊತೆಗಿದ್ದ ಮತ್ತೋರ್ವ ಕಲಾವಿದರಿಗೆ ‘ನಾನು ಸಂಭಾಷಣೆ ಮರೆತಿದ್ದೇನೆ’ ಎನ್ನುವ ಸಂಕೇತ ನೀಡಿದ್ದರು. ದೃಶ್ಯದಲ್ಲಿ ಇಲ್ಲದ ಹಾವಭಾವ ಈಗೇಕೆ ಮಾಡಿದರು ಎನ್ನುವುದು ಆಗಷ್ಟೇ ನಮಗೆ ಅರಿವಾಯಿತು’

ಆ ದಿನ ವಿಜಯ್‌ ಅವರಿಗೆ ನಾನು ಎರಡು ವಿಚಾರ ಕಲಿತೆ. ಮೊದಲನೇಯದು, ಯಾವುದೇ ವಿಷಯ ನಿಮ್ಮ ಯೋಜನೆಗೆ ತಕ್ಕ ಆಗದೇ ಇದ್ದರೆ, ಅದನ್ನು ಸುಧಾರಣೆ ಮಾಡಿ ನಿಮ್ಮ ಉಪಯೋಗಕ್ಕೆ ಅದನ್ನು ಬಳಸಿಕೊಳ್ಳಿ. ಎರಡನೇಯದು,ನಿಮ್ಮ ಸಹಕಲಾವಿದರ ಬಗ್ಗೆ ಗೌರವವಿರಲಿ ಹಾಗೂ ಅವರಿಗೆ ಸಹಾಯ ಮಾಡಿ. ಇದರಿಂದ ನಿಮಗೂ ಸಹಾಯ ದೊರೆಯಲಿದೆ. ಅವರಿಗೆ ರಾಷ್ಟ್ರಪ್ರಶಸ್ತಿ ಬಂದಾಗ ಕನ್ನಡ ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರಕ್ಕೆ ಹೆಮ್ಮೆ ತಂದಿದ್ದರು. ನಾವಿಬ್ಬರೂ ಜೊತೆಯಾಗಿ ನಟಿಸಬೇಕು ಎನ್ನುವ ಕನಸಿನ ಬಗ್ಗೆ ಚರ್ಚೆ ನಡೆಸಿದ್ದೆವು. ಆದರೆ ಅದು ಕನಸಾಗಿಯೇ ಉಳಿಯಲಿದೆ’ ಎಂದು ರಿಷಿ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.