ADVERTISEMENT

ತುಳು ಡೈಲಾಗ್‌ ಹೇಳಿದ ಸಾಯಿಕುಮಾರ್‌

ಕೋಸ್ಟಲ್‌ವುಡ್‌ಗೆ ಎಂಟ್ರಿ ಕೊಟ್ಟ ‘ಡೈಲಾಗ್‌ ಕಿಂಗ್‌’

ಪ್ರದೀಶ್ ಎಚ್.ಮರೋಡಿ
Published 23 ನವೆಂಬರ್ 2018, 20:00 IST
Last Updated 23 ನವೆಂಬರ್ 2018, 20:00 IST
ಪಿ.ಸಾಯಿಕುಮಾರ್
ಪಿ.ಸಾಯಿಕುಮಾರ್   

ಸ್ಯಾಂಡಲ್‌ವುಡ್‌ನಲ್ಲಿ ‘ಡೈಲಾಗ್ ಕಿಂಗ್’ ಎಂದೇ ಪ್ರಸಿದ್ಧರಾಗಿರುವ ಪಿ.ಸಾಯಿಕುಮಾರ್ ಅವರು ಪೊಲೀಸ್ ಖದರ್‌ನಲ್ಲಿ ಕೋಸ್ಟಲ್‌ವುಡ್‌ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.

ರಮಾನಂದ್‌ ನಾಯಕ್ ನಿರ್ದೇಶನದ ಚೊಚ್ಚಲ ಚಿತ್ರ ‘ಗೋಲ್ ಮಾಲ್’ನಲ್ಲಿ ಸಾಯಿಕುಮಾರ್ ಐಜಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಯಾಂಡಲ್‌ವುಡ್‌ನ ಹಲವು ಕಲಾವಿದರು ತುಳು ಚಿತ್ರದಲ್ಲಿ ಈಗಾಗಲೇ ನಟಿಸಿದ್ದಾರೆ. ಆದರೆ, ಸಾಯಿಕುಮಾರ್ ಇದೇ ಮೊದಲ ಬಾರಿಗೆ ತುಳು ಸಿನೆಮಾದಲ್ಲಿ ಬಣ್ಣಹಚ್ಚುತ್ತಿದ್ದಾರೆ.

‘ಇದೊಂದು ಕಾಮಿಡಿ, ಥಿಲ್ಲರ್‌, ಸೆಂಟಿಮೆಂಟ್‌ ಮತ್ತು ಆ್ಯಕ್ಷನ್‌ ಚಿತ್ರ. ಮಾಸ್‌ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡ ಚಿತ್ರವನ್ನು ನಿರ್ಮಿಸಲಾಗಿದೆ. ಈ ಚಿತ್ರದಲ್ಲಿ ಬರುವ ಖಡಕ್‌ ಪೊಲೀಸ್‌ ಅಧಿಕಾರಿ ಪಾತ್ರಕ್ಕೆ ಸಾಯಿಕುಮಾರ್‌ ಅವರನ್ನು ಕೇಳಿಕೊಂಡೆವು. ಅವರಿಗೆ ತುಳು ಗೊತ್ತಿಲ್ಲದಿರುವುದರಿಂದ ಆರಂಭದಲ್ಲಿ ಹಿಂಜರಿದರೂ ಮನವೊಲಿಸಿದ ಬಳಿಕ ಒಪ್ಪಿಕೊಂಡರು. ಆರಂಭದಲ್ಲಿ ನಮ್ಮಿಂದ ‌ಸ್ಕ್ರಿಪ್ಟ್‌ ಪಡೆದು, 15 ದಿನ ಡೈಲಾಗ್‌ ಪ್ರಾಕ್ಟಿಸ್‌ ಮಾಡಿದ್ದರು’ ಎಂದು ವಿವರಿಸುತ್ತಾರೆ ನಿರ್ದೇಶಕ ರಮಾನಂದ್‌ ನಾಯಕ್‌.

ADVERTISEMENT

‘ಸಾಯಿಕುಮಾರ್‌ ಪಾತ್ರದ ದೃಶ್ಯಗಳನ್ನು ಬೆಂಗಳೂರಿನ ಐಜಿ ಕಚೇರಿಯಲ್ಲೇ ಚಿತ್ರೀಕರಣ ಮಾಡಲಾಗಿದೆ. ಒಟ್ಟು ನಾಲ್ಕು ದಿನ ಅಲ್ಲಿ ಶೂಟಿಂಗ್‌ ನಡೆದಿದ್ದು, ಅವರು ಉತ್ತಮವಾಗಿ ಸ್ಪಂದಿಸಿದ್ದಾರೆ. ಇದು ನನ್ನ ಮೊದಲ ಚಿತ್ರ ಆಗಿರುವುದರಿಂದ ಆರಂಭದಲ್ಲಿ ನನಗೂ ಭಯವಿತ್ತು. ಆದರೆ, ಸಾಯಿಕುಮಾರ್‌ ಅವರು ಮೇರುನಟನಾಗಿದ್ದರೂ ನಮ್ಮೊಂದಿಗೆ ಸಾಮಾನ್ಯರಂತೆ ಬೆರೆತು, ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ’ ಎನ್ನುತ್ತಾರೆ ಅವರು.

‘ಸ್ವತಃ ಸಾಯಿಕುಮಾರ್ ಅವರೇ ತುಳುವಿನಲ್ಲಿ ಡೈಲಾಗ್ ಹೇಳಿರುವುದು ಈ ಚಿತ್ರದ ಮತ್ತೊಂದು ವಿಶೇಷ. ಎರಡು ತಿಂಗಳ ಹಿಂದೆ ಚಿತ್ರದ ಡಬ್ಬಿಂಗ್‌ ಕೆಲಸ ಮುಗಿದಿದ್ದು, ಅವರ ಎಂದಿನ ಶೈಲಿಯಲ್ಲಿ ತುಳುವಿನಲ್ಲೇ ಪಂಚಿಂಗ್‌ ಡೈಲಾಗ್‌ ಹೇಳಿದ್ದಾರೆ. ಕೇಳುವಾಗ ರೋಮಾಂಚನವಾಗುತ್ತದೆ. ಅವರ ಜತೆ ಕೆಲಸ ಮಾಡಿರುವುದು ಹೊಸ ಅನುಭವ ಮತ್ತು ಖುಷಿ ನೀಡಿದೆ’

‘ಪಿಲಿಬೈಲ್ ಯಮುನಕ್ಕ ಖ್ಯಾತಿಯ ಪೃಥ್ವಿ ಅಂಬರ್ ಅವರು ಮಾಸ್‌ ನಾಯಕರಾಗಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ‘ಒಂದು ಮೊಟ್ಟೆ’ ಕಥೆ’ ಚಿತ್ರದಲ್ಲಿ ನಟಿಸಿದ್ದ ಶ್ರೇಯಾ ಅಂಚನ್ ನಾಯಕಿಯಾಗಿದ್ದಾರೆ. ಅಲ್ಲದೆ, ನವೀನ್‌ ಡಿ. ಪಡೀಲ್‌, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್‌, ಸುಂದರ ರೈ ಮಂದಾರ, ಸತೀಶ್‌ ಬಂದಲೆ ಮತ್ತಿತರರು ಹಾಸ್ಯದ ಹೊನಲನ್ನು ಹರಿಸಿದ್ದಾರೆ. ಚಿತ್ರಾಲಿ, ಶ್ರೇಯದಾಸ್‌ ಕೂಡ ಬಣ್ಣಹಚ್ಚಿದ್ದಾರೆ. ಚಿತ್ರದಲ್ಲಿ ಖಳನಾಯಕ ‘ಬಾಂಬೆ ಡಾನ್‌’ ಆಗಿ ತಾನೇ ಕಾಣಿಸಿಕೊಂಡಿದ್ದೇನೆ’ ಎಂದು ವಿವರಿಸಿದ್ದಾರೆ ರಮಾನಂದ್‌. ‌

ಬೆಂಗಳೂರು, ಮಂಗಳೂರು, ಕಾರ್ಕಳ ಸೇರಿದಂತೆ ಹಲವೆಡೆ ಚಿತ್ರೀಕರಣ ಕಾರ್ಯ ನಡೆದಿದ್ದು, ಚಿತ್ರದಲ್ಲಿ 2 ಸಾಹಸ ದೃಶ್ಯ, 4 ಹಾಡುಗಳಿವೆ. ಮಂಜುನಾಥ ನಾಯಕ್‌ ಮತ್ತು ಅಕ್ಷಯ ಪ್ರಭು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸುನಾದ್‌ ಗೌತಮ್‌ ಅವರು ಕ್ಯಾಮೆರಾ ಕೈಚಳಕದ ಜತೆಗೆ ಸಂಗೀತವನ್ನು ನೀಡಿದ್ದಾರೆ. ಮುಂದಿನ ಜನವರಿಯಲ್ಲಿ ಚಿತ್ರವನ್ನು ತೆರೆಗೆ ತರುವ ಹುಮ್ಮಸ್ಸಿನಲ್ಲಿದೆ ಚಿತ್ರತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.