‘ಬದುಕಲು ನೂರು ದಾರಿ, ಈ ಜೀವ ಅಂತ್ಯಗೊಳಿಸಲು ಸಾವಿನದ್ದು ಒಂದೇ ದಾರಿ.. ನನಗೆ ನೋವಾಗ್ತಿದೆ ಎನ್ನುವ ಒಂದು ಕಾರಣಕ್ಕೆ ಮುಂದೆ ಬರಲಿರುವ ನೂರು ಸಂತೋಷದ ಗಳಿಗೆಗಳನ್ನು ಮಿಸ್ ಮಾಡಿಕೊಳ್ಳಬಾರದು.. ಬದುಕಲೊಂದು ಕಾರಣವಿರುತ್ತೆ, ಅದನ್ನು ಹುಡುಕಬೇಕು’– ಹೀಗೆಂದು ಮಾತಿಗೆ ಇಳಿದವರು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ.
‘ಬದುಕಿನಲ್ಲಿ ಮೊದಲ ಬಾರಿ ಇನ್ನಿಲ್ಲದಂತೆ ಕುಗ್ಗಿಸಿದ್ದುನನ್ನತಂದೆಯ ಸಾವು. ಚಿತ್ರಕಲೆ, ಸಿನಿಮಾ ಇಂಥ ಹುಚ್ಚಾಟಗಳಿಗೆ ನನ್ನ ಜತೆ ಇದ್ದವರು ಅವರೇ. ಅವರು ಹೋದ ಮೇಲೆ ನನ್ನ ಬದುಕೇ ಮುಗಿದು ಹೋಯ್ತು ಎನ್ನುವ ಮಟ್ಟಿಗೆ ನಾನು ಮಾನಸಿಕ ಸ್ಥೈರ್ಯ ಕಳೆದುಕೊಂಡಿದ್ದೆ. ಎರಡನೇ ಬಾರಿ ನನ್ನ ‘ಹರಿವು’ ಸಿನಿಮಾ ಮುಗಿದ ಮೇಲೆಯೂ ಮುಂದೇನು?, ಇನ್ನು ಯಾವ ಅವಕಾಶ ನನಗೆ ಸಿಗುತ್ತದೆ? ಸಿನಿ ಪಯಣವೇ ಮುಗಿಯಿತೇ ಎಂಬ ಪ್ರಶ್ನೆ ನನ್ನನ್ನು ಕಾಡಿತ್ತು. ಈ ಎಲ್ಲಾ ಸಂದರ್ಭಗಳಲ್ಲಿ ನಾನು ಮೊದಲು ಹುಡುಕಿದ್ದು ಬದುಕಲು ಕಾರಣವನ್ನು. ತಾಯಿ ಮತ್ತು ಅಕ್ಕನನ್ನು ನೋಡಿಕೊಳ್ಳುವ ಜವಾಬ್ದಾರಿ ಆರು ತಿಂಗಳು ಮೂಲೆ ಸೇರಿದ್ದ ನನ್ನನ್ನು ಖಿನ್ನತೆಯಿಂದ ಹೊರಬರುವಂತೆ ಮಾಡಿತು’.
‘‘ಹಾಗೇ ‘ಹರಿವು’ ನಂತರ ಎರಡು ವರ್ಷ ಮನೆಯಲ್ಲಿ ಖಾಲಿ ಕೂತಿದ್ದೆ. ಆಗ ನಾನಿದ್ದ ಮನೆಗೆ ಸರಿಯಾಗಿ ಬೆಳಕು ಬರುತ್ತಿರಲಿಲ್ಲ. ಅದು ಮನಸ್ಸನ್ನು ಇನ್ನಷ್ಟುಜಿಗುಪ್ಸೆಗೆ ತಳ್ಳುತ್ತಿತ್ತು. ಆಗ ಮನೆ ಬದಲಾಯಿಸಿದೆ. ಇದು ನನ್ನ ಮನಸ್ಸಿನ ಬೇಸರವನ್ನು ಅರ್ಧ ಕಡಿಮೆ ಮಾಡಿತು. ನಂತರ ಚೆನ್ನಾಗಿ ಸುತ್ತಾಡಿದೆ. ಬದುಕಲೊಂದು ಕಾರಣವಿದ್ದರೆ, ಖಿನ್ನತೆಗೆ ಮನಸ್ಸಿನಲ್ಲಿ ಸ್ಥಳವಿರುವುದಿಲ್ಲ’’. ಎನ್ನುವುದು ಮಂಸೋರೆ ಅನುಭವದ ಮಾತು.
ನಟ ಸಂಚಾರಿ ವಿಜಯ್ ಕೂಡ ಹಲವು ಬಾರಿ ಇಂಥ ತೊಳಲಾಟಕ್ಕೆ ಸಿಕ್ಕವರೇ. ‘ಈ ಭಾವದಲ್ಲಿ ಸಿಕ್ಕು ನೋವು ಪಡುವುದಕ್ಕಿಂತ ಅದನ್ನು ಮೀರುವ ದಾರಿ ಹುಡುಕಬೇಕು. ದಾರಿ ಕಷ್ಟವಾದರೂ ಸರಿ, ಅಂತ್ಯ ಒಳ್ಳೆಯದು’ ಎನ್ನುತ್ತಾರೆ ಅವರು.
‘ವೃತ್ತಿ ಜೀವನದ ಆರಂಭದಲ್ಲಿ ನನ್ನ ಸಿನಿಮಾಗಳನ್ನು ಯಾರೂ ಗಮನಿಸುತ್ತಿಲ್ಲ ಎಂಬ ನೋವಿತ್ತು. ನನ್ನ ಬಗ್ಗೆ ನನಗೆ ಅನುಮಾನವಿತ್ತು. ನನ್ನಲ್ಲಿ ಅಷ್ಟು ಪ್ರತಿಭೆಯಿಲ್ಲ ಎಂಬಕೊರಗು. ಆಗ ನನಗೆ ಗೆಳೆಯ ಹಾಗೂ ಅಣ್ಣನೊಂದಿಗೆ ಮಾತನಾಡುತ್ತಿದ್ದದು ಸಹಾಯವಾಯಿತು. ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ’.
‘ನೀನು ದೊಡ್ಡ ಪ್ರತಿಭಾವಂತ, ನಿನ್ನ ಕಲೆಗೆ ಬೆಲೆ ಸಿಗುತ್ತೆ ಎಂದು ನನ್ನ ಅಣ್ಣ ಯಾವಾಗಲೂ ಹೇಳುತ್ತಿದ್ದ ಮಾತುಗಳು ನನ್ನಲ್ಲಿ ಜೀವಸತ್ವ ಚಿಗುರಿಸಿದವು. ನನ್ನ ಬದುಕಿನಲ್ಲಿ ಹೊಸ ಚೈತನ್ಯ ತುಂಬಿದ ಮತ್ತೊಂದು ಅಭ್ಯಾಸ ಎಂದರೆ ಅದು ಓದುವುದು. ಇಂಥ ಸಮಯದಲ್ಲಿ ಏಕಾಗ್ರತೆಯಿಂದ ಕೂತು ಓದಲು ಕಷ್ಟವಿದ್ದರೂ ಒತ್ತಾಯಪೂರ್ವಕವಾಗಿ ನಾವು ಮನಸ್ಸನ್ನು ಬೇರೆಡೆಗೆ ಹರಿಸಬೇಕು. ಓದುವ ಅಭ್ಯಾಸ ಕೂಡಾ ನನ್ನನ್ನು ಮಾನಸಿಕ ಖಿನ್ನತೆಯಿಂದ ಹೊರತಂದಿದೆ’ ಎಂದರು ಸಂಚಾರಿ ವಿಜಯ್.
*****
ಸಾಕಷ್ಟು ಸಿನಿಮಾಅವಕಾಶಗಳ ಬಂದರೂ ಯಾವುದೂ ಸೂಕ್ತವಾಗಿರಲಿಲ್ಲ. ಆಗ ನನಗೂ ಖಿನ್ನತೆ ಕಾಡಿತ್ತು. ಈ ಸಂದರ್ಭದಲ್ಲಿ ’11:11 Time for abundance' ಪುಸ್ತಕ ಓದಿ ಹಗುರಾದೆ. ಹಾಗೆ ನಮ್ಮನ್ನುನಾವು ಪ್ರೀತಿಸಬೇಕು ಇದೇ ಖಿನ್ನತೆಗೆ ಸೂಕ್ತ ಮದ್ದು
– ನೀತು ಶೆಟ್ಟಿ, ನಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.