ಐದು ವರ್ಷದ ಹಿಂದೆ ತೆರೆಕಂಡ ‘ಅಧ್ಯಕ್ಷ’ ನಟ ಶರಣ್ ಅವರನ್ನು ಚಿತ್ರರಂಗದಲ್ಲಿ ನಾಯಕ ನಟನಾಗಿ ಗಟ್ಟಿಯಾಗಿ ಸ್ಥಿರಗೊಳಿಸಿದ ಚಿತ್ರ. ಈಗ ಮತ್ತೆ ಅವರು ಅಧ್ಯಕ್ಷನಾಗಿ ಆಳ್ವಿಕೆ ನಡೆಸಲು ಸಿದ್ಧರಾಗಿದ್ದಾರೆ. ಅವರು ನಾಯಕ ನಟನಾಗಿರುವ ‘ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರ ಅಕ್ಟೋಬರ್ 4ರಂದು ತೆರೆಕಾಣುತ್ತಿದೆ. ಇದರ ಬಹುಪಾಲು ಚಿತ್ರೀಕರಣ ನಡೆದಿರುವುದು ಅಮೆರಿಕದಲ್ಲಿ.
ಇದು ಮಲಯಾಳದ ‘ಟು ಕಂಟ್ರೀಸ್’ ಚಿತ್ರದ ಕನ್ನಡ ಅವತರಣಿಕೆ. ಪತಿ ಮತ್ತು ಪತ್ನಿ ನಡುವಿನ ಬಾಂಧವ್ಯ ಕಥನ ಇದು. ಮೂಲ ಸಿನಿಮಾಕ್ಕೂ, ಇದಕ್ಕೂ ಸಾಕಷ್ಟು ವ್ಯತ್ಯಾಸವಿದೆಯಂತೆ. ಕೌಟುಂಬಿಕ ಪ್ರೇಕ್ಷಕರಿಗೆ ಇದೊಂದು ಒಳ್ಳೆಯ ಮನರಂಜನೆಯ ಪ್ಯಾಕೇಜ್ ಎನ್ನುವುದು ಚಿತ್ರತಂಡದ ಹೇಳಿಕೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಡಿ ವಿಶ್ವಪ್ರಸಾದ್ ಟಿ.ಜಿ. ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ.
ಯೋಗಾನಂದ್ ಮುದ್ದಾನ್ ಈ ಚಿತ್ರ ನಿರ್ದೇಶಿಸಿದ್ದಾರೆ. ಜೊತೆಗೆ ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ. ರಾಗಿಣಿ ದ್ವಿವೇದಿ ಇದರ ನಾಯಕಿ. ದಿಶಾ ಪಾಂಡೆ, ಅಶೋಕ್, ಅವಿನಾಶ್, ಪ್ರಕಾಶ್ ಬೆಳವಾಡಿ, ಶಿವರಾಜ್ ಕೆ.ಆರ್. ಪೇಟೆ, ಚಿತ್ರಾ ಶೆಣೈ, ಪದ್ಮಜಾ ರಾವ್, ತಬಲ ನಾಣಿ, ಮಕರಂದ್ ದೇಶಪಾಂಡೆ, ತಾರಕ್ ಪೊನ್ನಪ್ಪ, ಸಾಧುಕೋಕಿಲ, ರಂಗಾಯಣ ರಘು, ರಾಕ್‍ಲೈನ್ ಸುಧಾಕರ್, ಅಂಥೋಣಿ ಕಮಲ್, ಸುಂದರ್ ತಾರಾಗಣದಲ್ಲಿದ್ದಾರೆ.
ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಸುಧಾಕರ್ ಎಸ್. ರಾಜ್, ಸಿದ್ಧಾರ್ಥ್ ರಾಮಸ್ವಾಮಿ, ಅನೀಶ್ ತರುಣ್ ಕುಮಾರ್ ಅವರ ಛಾಯಾಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.