ADVERTISEMENT

ಯಾರನ್ನೋ ಮೆಚ್ಚಿಸುವವ ನಾನಲ್ಲ: ನಟ ಶಿವರಾಜ್ ಕುಮಾರ್ ಸಂದರ್ಶನ

ವಿನಾಯಕ ಕೆ.ಎಸ್.
Published 14 ನವೆಂಬರ್ 2024, 22:00 IST
Last Updated 14 ನವೆಂಬರ್ 2024, 22:00 IST
ಶಿವರಾಜ್‌ಕುಮಾರ್‌
ಶಿವರಾಜ್‌ಕುಮಾರ್‌   

ನರ್ತನ್‌ ನಿರ್ದೇಶಿಸಿ, ಶಿವರಾಜ್‌ಕುಮಾರ್‌ ನಟಿಸಿರುವ ‘ಭೈರತಿ ರಣಗಲ್‌’ ಇಂದು (ನ.15) ತೆರೆ ಕಾಣುತ್ತಿದೆ. ತಮ್ಮದೇ ಗೀತಾ ಪಿಕ್ಚರ್ಸ್‌ ನಿರ್ಮಾಣದ ಸಿನಿಮಾ ಹಾಗೂ ಪಾತ್ರದ ಕುರಿತು ಅವರು ಮಾತನಾಡಿದ್ದಾರೆ.

ಈಗಾಗಲೇ ಗೊತ್ತಿರುವಂತೆ ಇದು ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್‌. ಆ ಚಿತ್ರದಲ್ಲಿ ಜನ ಮೆಚ್ಚಿದ ಪಾತ್ರ ‘ಭೈರತಿ ರಣಗಲ್‌’. ಶ್ರೀಮುರಳಿ ಚಿತ್ರದ ನಾಯಕನಾಗಿದ್ದರೂ ನನ್ನ ಪಾತ್ರಕ್ಕೆ ಜನ ಕಾಯುವಂತೆ ನಿರ್ದೇಶಕರು ಕಥೆ ಮಾಡಿದ್ದರು. ಸಿನಿಮಾ ಚೆನ್ನಾಗಿ ಹೋಗಬೇಕು ಎಂಬ ಕಾರಣಕ್ಕೆ ಆಗ ಒಪ್ಪಿಕೊಂಡೆ. ‘ಮಫ್ತಿ’ ಚೆನ್ನಾಗಿ ವರ್ಕ್‌ ಆಯ್ತು. ಶ್ರೀಮುರಳಿ ತುಂಬ ಚೆನ್ನಾಗಿ ನಟಿಸಿದ್ದರು. ಅಲ್ಲಿಂದ ಈ ಚಿತ್ರದ ಪಯಣ ಶುರುವಾಯ್ತು.

ಗೀತಾ ಪಿಕ್ಚರ್ಸ್ ನಿರ್ಮಾಣದ ಎರಡನೇ ಸಿನಿಮಾ ಇದು. ನಿರ್ದೇಶಕ ನರ್ತನ್‌ ಕಥೆ ಹೇಳಿದಾಗ ಈ ಸಿನಿಮಾವನ್ನು ನಮ್ಮ ನಿರ್ಮಾಣ ಸಂಸ್ಥೆಯಿಂದಲೇ ಮಾಡಬೇಕೆಂದು ನಿರ್ಧಾರ ಮಾಡಿದೆವು. ನಾರ್ಮಲ್‌ ರಿವೇಂಜ್‌ ಸ್ಟೋರಿ, ಆ್ಯಕ್ಷನ್‌ ಸ್ಟೋರಿ ಅಲ್ಲ. ರಣಗಲ್‌ ಪಾತ್ರಕ್ಕೆ ಒಂದು ನಿಯತ್ತಿದೆ. ಆತ ಲಾಯರ್‌ ಆದಾಗ ವೈಟ್‌ ಆಗಿರ್ತಾನೆ. ಹೀರೊ ಆದಾಗ ಬ್ಲಾಕ್‌ ಶೇಡ್‌ ತಾಳುತ್ತಾನೆ. 

ADVERTISEMENT

ಬಳ್ಳಾರಿ, ಸಂಡೂರು, ಮೈಸೂರು ಮತ್ತು ಬೆಂಗಳೂರಲ್ಲಿ ಸೆಟ್‌ ಹಾಕಿ ಚಿತ್ರೀಕರಣ ಮಾಡಿದ್ದೇವೆ. ಬಹುತೇಕ ‘ಮಫ್ತಿ’ ಕಲಾವಿದರು ಮತ್ತು ತಾಂತ್ರಿಕ ತಂಡವನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಇದರಲ್ಲಿಯೂ ಶ್ರೀಮುರಳಿ ಒಂದು ಸರ್ಪ್ರೈಸ್‌ ಪಾತ್ರದಲ್ಲಿ ಬರುತ್ತಾರೆ. 

ನಾನು ಯಾವಾಗಲೂ ಸ್ಟ್ರೈಟ್‌ ಫಾವರ್ಡ್‌ ವ್ಯಕ್ತಿ. ಪ್ರತಿ ಮನುಷ್ಯನನ್ನೂ ಗೌರವಿಸಬೇಕು. ಅಭಿಮಾನಿಯನ್ನು ಸ್ನೇಹಿತನ ರೀತಿ ನೋಡಬೇಕು. ಇಂಡಸ್ಟ್ರಿಯಲ್ಲಿ ಇದು 39 ನೇ ವರ್ಷ. ಶಿವಣ್ಣ, ಶಿವಣ್ಣ ಎಂದು ಅಭಿಮಾನಿಗಳು ಪ್ರೋತ್ಸಾಹಿಸುವುದೇ ನನಗೆ ಎನರ್ಜಿ. ಹಾಗಾಗಿಯೇ ಈಗಲೂ ಅದೇ ರೀತಿ ಇದ್ದೇನೆ. ಯಾರನ್ನೋ ಮೆಚ್ಚಿಸಲು ಮಾಡಲು ನಾನು ಕೆಲಸ ಮಾಡಲ್ಲ. ನನಗೆ ಏನೂ ಅನ್ನಿಸುತ್ತದೆಯೋ ಅದನ್ನೇ ಮಾಡುತ್ತೇನೆ. ಯಾರೂ ಎಂಟರ್‌ಟೈನ್‌ ಮಾಡ್ತಾರೋ ಅವರೇ ರಿಯಲ್‌ ಹೀರೊ. 

‘ಜನುಮದ ಜೋಡಿ’ ಕೂಡ ಇದೇ ದಿನ ಬಿಡುಗಡೆಯಾಗಿತ್ತು. ಪಾರ್ವತಮ್ಮ ನಿರ್ಮಾಣ ಮಾಡಿದ್ದರು. ಆ ತಾಯಿ ಸ್ಥಾನವನ್ನು ತುಂಬಿದ ಗೀತಾ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. 1986ರಿಂದ ಸಿನಿಮಾ ಮಾಡ್ತಾ ಇದೀನಿ. ಮಾಡಿದೀನಿ ಅನ್ನೋದಕ್ಕಿಂತ ಮಾಡಿಸಿಕೊಂಡು ಹೋಗಿದ್ದಾರೆ.

ನಮ್ಮ ನಿರ್ಮಾಣ ಸಂಸ್ಥೆಯಿಂದ ಬೇರೆಯವರ ಸಿನಿಮಾಗಳನ್ನು ಮಾಡುತ್ತೇವೆ. ಬೇರೆ ನಟರು ನಮ್ಮ ಬ್ಯಾನರ್‌ನಲ್ಲಿ ನಟಿಸುತ್ತಾರೆ. ಮಗಳು ನಿವೇದಿತಾ ‘ಶ್ರೀ ಮುತ್ತು’ ನಿರ್ಮಾಣ ಸಂಸ್ಥೆಯಿಂದ ‘ಫೈರ್‌ಪ್ಲೈ’ ಚಿತ್ರ ನಿರ್ಮಾಣ ಮಾಡಿದ್ದಾಳೆ. ಇನ್ನಷ್ಟು ಹೊಸಬರ ಸಿನಿಮಾಗಳನ್ನು ಕೂಡ ಮಾಡುತ್ತೇವೆ. 

ಚಕಿತ್ಸೆ ಪಡೆಯುತ್ತಿರುವೆ

ಆರೋಗ್ಯ ಸಮಸ್ಯೆ ಆಗಿರುವುದು ನಿಜ. ಚಿತ್ರರಂಗದ ಬಹುತೇಕರು ಆರೋಗ್ಯ ವಿಚಾರಿಸಿದ್ದಾರೆ. ಆತಂಕಪಡುವಂಥದ್ದೇನಿಲ್ಲ. ಚಿಕಿತ್ಸೆ ಪಡೆಯುತ್ತಿರುವೆ. ಎಂದಿನಂತೆ ಸಿನಿಮಾ ಚಟುವಟಿಕೆಗಳು ಮುಂದುವರಿಯುತ್ತದೆ. ‘45’ ಚಿತ್ರೀಕರಣ ಮುಗಿದಿದೆ. ‘ಉತ್ತರಕಾಂಡ’ ಚಿತ್ರದಲ್ಲಿ ಭಾಗಿಯಾಗಿರುವೆ. ತಮಿಳಿನಲ್ಲಿ ಎರಡು ಸಿನಿಮಾ ಇದೆ. ರಾಮ್‌ಚರಣ್‌ ಜೊತೆ ಒಂದು ಸಿನಿಮಾ ಮಾಡಬೇಕಿದೆ. ‘ಭೈರತಿ’ ಬಿಡುಗಡೆ ಬಳಿಕ ಚಿಕಿತ್ಸೆಗಾಗಿ ಸಣ್ಣ ವಿರಾಮ ಪಡೆಯುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.