ADVERTISEMENT

ಚೌತಿಗೆ ಶಿವರಾಜ್‌ಕುಮಾರ್‌ 131ನೇ ಸಿನಿಮಾ ಶೀರ್ಷಿಕೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 23:20 IST
Last Updated 19 ಆಗಸ್ಟ್ 2024, 23:20 IST
   

ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ತಮ್ಮ 131ನೇ ಸಿನಿಮಾದ ಚಿತ್ರೀಕರಣಕ್ಕೆ ಧುಮುಕಿದ್ದಾರೆ. ಎಚ್‌ಎಂಟಿ ಮೈದಾನದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಕಾರ್ತಿಕ್‌ ಅದ್ವೈತ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಸಿನಿಮಾದ ಶೀರ್ಷಿಕೆ ಚೌತಿಯಂದು ಗೊತ್ತಾಗಲಿದೆ.

ಖಳನಟನಾಗಿ ನವೀನ್‌ ಶಂಕರ್‌ ಬಣ್ಣಹಚ್ಚಲಿದ್ದಾರೆ. 2 ವರ್ಷದ ಹಿಂದೆಯೇ ಶಿವರಾಜ್‌ಕುಮಾರ್‌ ಒಪ್ಪಿಕೊಂಡಿದ್ದ ಈ ಸಿನಿಮಾದ ಮುಹೂರ್ತ ಕಳೆದ ಶುಕ್ರವಾರ (ಆ.16) ಬೆಂಗಳೂರಿನ ಕಂಠೀವರ ಸ್ಟುಡಿಯೊದಲ್ಲಿ ನಡೆಯಿತು.

‘2 ವರ್ಷಗಳ ಹಿಂದೆ ಚಿತ್ರತಂಡ ಕಥೆ ಹೇಳಿತ್ತು. ಸಿನಿಮಾ ಸೆಟ್ಟೇರಲು ಯಾಕೆ ಇಷ್ಟು ತಡ ಎಂದು ಕೇಳಬೇಡಿ. ಮೊದಲ ಬಾರಿಗೆ ಸ್ಕ್ರಿಪ್ಟ್‌ ಕೇಳಿದಾಗ ತುಂಬಾ ಚೆನ್ನಾಗಿ ಇತ್ತು. ಮನಸ್ಸಿಗೆ ಕೂತುಬಿಟ್ಟಿತ್ತು. ಆದರೆ ಅಲ್ಲಿ ಏನೋ ಬೇಕು ಎಂದು ನಿರ್ದೇಶಕರಿಗೆ ಹೇಳುತ್ತಿದ್ದೆ. ಈ ಸ್ಕ್ರಿಪ್ಟ್‌ನಲ್ಲಿ ಚಿತ್ರತಂಡ ಎಲ್ಲರಿಗೂ ಕೆಲಸವಿದೆ. ಒಂದು ಸಿನಿಮಾವೆಂದರೆ ಒಂದೋ ತಂತ್ರಜ್ಞರ ಸಿನಿಮಾ ಇಲ್ಲಾ ಕಲಾವಿದರ ಸಿನಿಮಾ ಎನ್ನುತ್ತಾರೆ. ಆದರೆ ಇದು ಹಾಗಲ್ಲ. ಇದು ಎಲ್ಲರ ಸಿನಿಮಾ. ಹೊಸ ನಿರ್ದೇಶಕರ ಮೇಲೆ ನಂಬಿಕೆ ಇಡಬೇಕು. ವ್ಯವಹಾರವಷ್ಟೇ ಮುಖ್ಯವಲ್ಲ. ಕೆಲವೊಮ್ಮೆ ಮನುಷ್ಯನೊಬ್ಬನನ್ನು ದೇವರಾಗಿ ನಂಬುತ್ತಾರೆ. ಆದರೆ ಆ ದೇವರಿಗೂ ದೇವರು ಬೇಕೇ ಬೇಕು. ಇದೊಂದು ಗ್ಯಾಂಗ್‌ಸ್ಟರ್‌ ಸಿನಿಮಾ ಆದರೂ ಭಿನ್ನವಾಗಿದೆ. ಗ್ಯಾಂಗ್‌ಸ್ಟರ್‌ ಸಿನಿಮಾವನ್ನಷ್ಟೇ ನಾನು ಮಾಡುತ್ತಿಲ್ಲ. ಮುಂದಿನ ವರ್ಷ ತಮಿಳು ನಿರ್ದೇಶಕರೊಬ್ಬರು ನಿರ್ದೇಶನ ಮಾಡಿರುವ ನನ್ನ ಲವ್‌ಸ್ಟೋರಿ ಸಿನಿಮಾವೊಂದು ಬಿಡುಗಡೆಯಾಗಲಿದೆ. ಇದು ಎಲ್ಲರಿಗೂ ಸರ್ಪ್ರೈಸ್‌. ನಾನು ನಟಿಸಿರುವ ‘ಭೈರತಿ ರಣಗಲ್‌’ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ‘45’ ಸಿನಿಮಾದ ಕ್ಲೈಮ್ಯಾಕ್ಸ್‌ ಶೂಟಿಂಗ್‌ ಮುಂದಿನ ತಿಂಗಳು ನಡೆಯಲಿದೆ. ಇದಕ್ಕೆ ನಾನು, ಉಪೇಂದ್ರ ಹಾಗೂ ರಾಜ್‌ ಬಿ.ಶೆಟ್ಟಿ ಜೊತೆಯಾಗಬೇಕು. ‘ಉತ್ತರಕಾಂಡ’ ಚಿತ್ರೀಕರಣವೂ ಪ್ರಾರಂಭವಾಗಲಿದೆ. ಡಿಸೆಂಬರ್‌ನಲ್ಲಿ ‘ಭೈರವನ ಕೊನೆ ಪಾಠ’ ಚಿತ್ರೀಕರಣ ಆರಂಭವಾಗಲಿದೆ’ ಎಂದರು ಶಿವರಾಜ್‌ಕುಮಾರ್.

ADVERTISEMENT

‘ಶಿವರಾಜ್‌ಕುಮಾರ್‌ ಅವರ ಜೊತೆ ನಟಿಸಬೇಕು ಎನ್ನುವ ಆಸೆ ಬಹಳ ದಿನಗಳಿಂದ ಇತ್ತು. ಈ ಆಸೆ ಪೂರ್ಣವಾಗುತ್ತಿದೆ. ನಾನು ಇದುವರೆಗೂ ಮಾಡಿದ ಪಾತ್ರಗಳಿಗಿಂತ ಭಿನ್ನವಾದ ಪಾತ್ರ ಈ ಸಿನಿಮಾದಲ್ಲಿದೆ’ ಎನ್ನುತ್ತಾರೆ ನವೀನ್‌ ಶಂಕರ್. ಸ್ಯಾಮ್ ಸಿ.ಎಸ್ ಸಂಗೀತ, ಎ.ಜೆ ಶೆಟ್ಟಿ ಛಾಯಾಚಿತ್ರಗ್ರಹಣ ಸಿನಿಮಾಗೆ ಇದೆ. ದೀಪು ಎಸ್. ಕುಮಾರ್ ಸಂಕಲನ ಹಾಗೂ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ. ಭುವನೇಶ್ವರಿ ಪ್ರೊಡಕ್ಷನ್‌ನಡಿ ಎಸ್.ಎನ್. ರೆಡ್ಡಿ ಹಾಗೂ ಸುಧೀರ್ ಪಿ. ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.