ADVERTISEMENT

ಅಮ್ಮನ ಆರೋಗ್ಯದ ಬಗ್ಗೆ ಆತಂಕದ ನಡುವೆಯೇ ಬಿಗ್‌ ಬಾಸ್‌ ಶೋ ನಡೆಸಿದ್ದ ನಟ ಸುದೀಪ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 7:37 IST
Last Updated 21 ಅಕ್ಟೋಬರ್ 2024, 7:37 IST
<div class="paragraphs"><p>ತಾಯಿ&nbsp;ಸರೋಜಾ ಸಂಜೀವ್‌ ಅವರೊಂದಿಗೆ&nbsp;ನಟ ಸುದೀಪ್</p></div>

ತಾಯಿ ಸರೋಜಾ ಸಂಜೀವ್‌ ಅವರೊಂದಿಗೆ ನಟ ಸುದೀಪ್

   

ಬೆಂಗಳೂರು: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸುದೀಪ್‌ ಅವರ ತಾಯಿ ಸರೋಜಾ ಸಂಜೀವ್‌ ಭಾನುವಾರ ನಿಧನರಾಗಿದ್ದಾರೆ. 74 ವರ್ಷದ ಅವರಿಗೆ ಪತಿ ಹಾಗೂ ಮೂವರು ಮಕ್ಕಳಿದ್ದಾರೆ.

ಇದೀಗ ಸುದೀಪ್ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ತಾಯಿ ಸರೋಜಾ ಸಂಜೀವ್‌ ಅವರೊಂದಿಗಿನ ಬಾಂಧವ್ಯದ ಬಗ್ಗೆ ವಿವರಿಸಿದ್ದಾರೆ.

ADVERTISEMENT

ನಿಷ್ಪಕ್ಷಪಾತಿಯಾದ, ಪ್ರೀತಿಸುವ, ಕ್ಷಮಿಸುವ, ಕಾಳಜಿ ತೋರುವ ನನ್ನ ಅಮ್ಮನನ್ನು ಜೀವನದಲ್ಲಿ ನಾನು ಎಂದಿಗೂ ಸಂಭ್ರಮಿಸುತ್ತೇನೆ ಹಾಗೂ ಹೃದಯದಲ್ಲಿ ಇರಿಸಿಕೊಳ್ಳುತ್ತೇನೆ. ಅವರು ಮನುಷ್ಯನ ರೂಪದಲ್ಲಿ ನನ್ನ ಪಕ್ಕದಲ್ಲೇ ಇದ್ದ ನಿಜವಾದ ದೇವರು. ಅವರು ನನಗೆ ಸಂಭ್ರಮದಂತೆ ಇದ್ದರು, ಗುರುವಾಗಿದ್ದರು, ನನ್ನ ನಿಜವಾದ ಹಿತೈಷಿಯಾಗಿದ್ದರು. ಅದಕ್ಕಿಂತ ಮಿಗಿಲಾಗಿ ನನ್ನ ಮೊದಲ ಅಭಿಮಾನಿ. ನನ್ನ ಕೆಟ್ಟ ಸಿನಿಮಾಗಳನ್ನೂ ಪ್ರೀತಿಸಿದವರು ಅವರು. ಅವರನ್ನು ಹೃದಯದಲ್ಲಿ ಇರಿಸಿಕೊಳ್ಳುತ್ತೇನೆ ಎಂದೆನಲ್ಲ, ಅದು ಏಕೆಂದರೆ ಅವರು ಈಗೊಂದು ಸುಂದರವಾದ ನೆನಪು.        

ನನಗೀಗ ಆಗುತ್ತಿರುವ ನೋವನ್ನು ಪದದಲ್ಲಿ ಕಟ್ಟಿಕೊಡಲು ಅಸಾಧ್ಯ. ಅವರು ಇಲ್ಲದಿರುವ ವಾತಾವರಣವನ್ನು ನನಗೆ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಕಳೆದ 24 ಗಂಟೆಯಲ್ಲಿ ಎಲ್ಲವೂ ಬದಲಾಯಿತು. ಪ್ರತಿನಿತ್ಯ ಬೆಳಗ್ಗೆ 5.30ಕ್ಕೆ ‘ಗುಡ್‌ ಮಾರ್ನಿಂಗ್‌ ಕಂದಾ...’ ಎನ್ನುವ ಅವರ ಸಂದೇಶವೇ ನನ್ನ ಮೊಬೈಲ್‌ಗೆ ಬರುವ ಮೊದಲ ಸಂದೇಶವಾಗಿತ್ತು. ಅಕ್ಟೋಬರ್‌ 18ಕ್ಕೆ ಅವರ ಕೊನೆಯ ಸಂದೇಶ ನನಗೆ ಬಂದಿತ್ತು. ಬಿಗ್‌ಬಾಸ್‌ ಶೂಟಿಂಗ್‌ನಲ್ಲಿದ್ದ ಕಾರಣ ನಾನು ಈ ಸಂದೇಶವನ್ನು ಗಮನಿಸಿರಲಿಲ್ಲ. ಹಲವು ವರ್ಷಗಳಲ್ಲಿ ಹೀಗೆ ಆಗಿದ್ದು ಮೊದಲ ಬಾರಿಯಾಗಿತ್ತು. ನಾನು ಅವರಿಗೆ ಬೆಳಗ್ಗಿನ ಸಂದೇಶವನ್ನು ಕಳುಹಿಸಿರಲಿಲ್ಲ. ಅವರಿಗೆ ನೇರವಾಗಿ ಕರೆ ಮಾಡಿ ಎಲ್ಲವೂ ಸರಿಯಾಗಿದೆ ಅಲ್ಲವೇ? ಎಂದು ವಿಚಾರಿಸೋಣ ಎಂದಿದ್ದೆ. ಆದರೆ ಬಿಗ್‌ಬಾಸ್‌ನ ಶನಿವಾರದ ಸಂಚಿಕೆಯ ಚರ್ಚೆಯಲ್ಲೇ ಸಮಯ ಕಳೆದುಹೋಯಿತು. ನಾನು ಬಿಗ್‌ಬಾಸ್‌ ವೇದಿಕೆಗೆ ಇನ್ನೇನು ಏರಬೇಕು ಎನ್ನುವ ಹೊತ್ತಿನಲ್ಲಿ ತಾಯಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಕರೆ ಬಂತು. ನಾನು ತಕ್ಷಣವೇ ಆಸ್ಪತ್ರೆಯಲ್ಲಿದ್ದ ಅಕ್ಕನಿಗೆ ಕರೆ ಮಾಡಿದೆ. ವೈದ್ಯರೊಂದಿಗೆ ಮಾತನಾಡಿದ ಬಳಿಕ ಬಿಗ್‌ಬಾಸ್‌ ಕಾರ್ಯಕ್ರಮ ನಡೆಸಿಕೊಟ್ಟೆ. ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತಿರುವಾಗಲೇ ಅಮ್ಮನ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿಯನ್ನು ಅಲ್ಲಿ ಇದ್ದ ನನ್ನವರು ನನಗೆ ತಿಳಿಸಿದರು. ಇಂತಹ ಅಸಹಾಯಕತೆಯನ್ನು ನಾನು ಮೊದಲ ಬಾರಿಗೆ ಅನುಭವಿಸಿದ್ದೆ ಎಂದಿದ್ದಾರೆ.

ಮನಸ್ಸಿನಲ್ಲಿ ಅಮ್ಮನ ಆರೋಗ್ಯದ ಬಗ್ಗೆ ಭಯ ಇಟ್ಟುಕೊಂಡೇ, ಬಿಗ್‌ಬಾಸ್‌ನ ಶನಿವಾರದ ಸಂಚಿಕೆಯನ್ನು ನಡೆಸಿಕೊಡುತ್ತಾ, ಅಲ್ಲಿನ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಚರ್ಚೆ ನಡೆಸಿದೆ. ಇಷ್ಟೆಲ್ಲಾ ಗಾಬರಿ, ತಳಮಳಗಳ ನಡುವೆ ನಾನು ಇಷ್ಟೊಂದು ನಿರಾಳವಾಗಿ, ಶಾಂತವಾಗಿ ಆ ಸಂಚಿಕೆಯನ್ನು ನಡೆಸಿಕೊಟ್ಟೆ ಎಂದರೆ ಅದಕ್ಕೂ ನನ್ನ ತಾಯಿಯ ಮಾರ್ಗದರ್ಶನ ಕಾರಣ. ಎಷ್ಟೇ ತಳಮಳಗಳಿದ್ದರೂ ಒಪ್ಪಿಕೊಂಡ ಕೆಲಸವನ್ನು ಪೂರ್ಣಗೊಳಿಸುವುದು ನಮ್ಮ ಜವಾಬ್ದಾರಿ ಎಂದು ಅವರು ಕಲಿಸಿದ್ದರು. ಅದೊಂದು ಸೂತ್ರವಾಗಿತ್ತು. ಸಂಚಿಕೆ ಪೂರ್ಣಗೊಳಿಸಿದ ಕೂಡಲೇ ನಾನು ಆಸ್ಪತ್ರೆಗೆ ಧಾವಿಸಿದೆ. ನಾನು ಅಲ್ಲಿಗೆ ತಲುಪುವ ಕೆಲವು ನಿಮಿಷಗಳ ಮೊದಲು ಅವರನ್ನು ವೆಂಟಿಲೇಟರ್‌ಗೆ ವರ್ಗಾಯಿಸಿದ್ದರು. ಪ್ರಜ್ಞೆಯಲ್ಲಿ ಇರುವಾಗಲೇ ಅವರನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ. ಭಾನುವಾರ ಬೆಳಗ್ಗೆ ಅವರು ಕೊನೆಯುಸಿರು ಎಳೆಯುವವರೆಗೂ ಹೋರಾಟ ಮಾಡಿದರು. ಕೆಲವು ಗಂಟೆಗಳಲ್ಲಿ ಎಲ್ಲವೂ ಬದಲಾಯಿತು. ಅವರನ್ನು ಮತ್ತೆ ಹೇಗೆ ಪಡೆದುಕೊಳ್ಳುವುದು ಎಂದು ನನಗೆ ತಿಳಿದಿಲ್ಲ. ವಾಸ್ತವವನ್ನು ಹೇಗೆ ಸ್ವೀಕಾರ ಮಾಡುವುದೂ ಎಂದು ತಿಳಿಯುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಪ್ರತಿ ಬಾರಿ ಶೂಟಿಂಗ್‌ಗೆ ತೆರಳುವ ಮುನ್ನ ನನ್ನನ್ನು ಬಿಗಿದಪ್ಪಿ ಬೀಳ್ಕೊಡುತ್ತಿದ್ದ ಅಮ್ಮ ಇನ್ನಿಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲು ಸಮಯ ಬೇಕು. ಅವರನ್ನು ಖಂಡಿತಾ ನಾನು ಮಿಸ್‌ ಮಾಡಿಕೊಳ್ಳುತ್ತೇನೆ. ಅವರನ್ನು ಸ್ಮರಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ವೈಯಕ್ತಿಕವಾಗಿ ಸಂದೇಶದ ಕಳುಹಿಸಿದ ಎಲ್ಲರಿಗೂ ಧನ್ಯವಾದ. ಅಮ್ಮನೆಂಬ ನನ್ನ ಜೀವನದ ಅಮೂಲ್ಯವಾದ ಮುತ್ತೊಂದನ್ನು ನಾನು ಕಳೆದುಕೊಂಡಿದ್ದೇನೆ. ಅವರು ಖಂಡಿತವಾಗಿಯೂ ಶಾಂತಿ ತುಂಬಿರುವ ಪ್ರದೇಶವನ್ನು ತಲುಪಿದ್ದಾರೆ ಎನ್ನುವ ನಂಬಿಕೆ ನನ್ನದು. 

ಅಮ್ಮ... ಐ ಲವ್‌ ಯು...

ದೀಪು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.