ADVERTISEMENT

ಅಭಿಮಾನಿಗಳ ಜೊತೆ ಜಯನಗರ MES ಮೈದಾನದಲ್ಲಿ ಸುದೀಪ್‌ ಜನ್ಮದಿನಾಚರಣೆ: ಮನೆ ಬಳಿ ಇಲ್ಲ

ಬಿಗ್ ಬಾಸ್ ಬಗ್ಗೆ ಸುದೀಪ್ ಏನಂದ್ರು?

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 14:44 IST
Last Updated 31 ಆಗಸ್ಟ್ 2024, 14:44 IST
<div class="paragraphs"><p>ನಟ ಸುದೀಪ್</p></div>

ನಟ ಸುದೀಪ್

   

ಬೆಂಗಳೂರು: ಸೋಮವಾರ(ಸೆ.2) ನಟ ಸುದೀಪ್‌ ಅವರ 51ನೇ ಜನ್ಮದಿನ. ಈ ವರ್ಷ ಬೆಂಗಳೂರಿನ ಜಯನಗರದಲ್ಲಿರುವ ಎಂಇಎಸ್‌ ಮೈದಾನದಲ್ಲಿ ತಮ್ಮ ಜನ್ಮದಿನವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲು ಸುದೀಪ್‌ ನಿರ್ಧರಿಸಿದ್ದಾರೆ. 

ತಮ್ಮ ಮನೆಯ ಬಳಿ ಜನ್ಮದಿನದ ಆಚರಣೆಗೆ ಅವಕಾಶ ಇಲ್ಲ ಎಂದು ಸುದೀಪ್‌ ಶನಿವಾರ(ಆ.31) ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಿಯಾ ಹಾಗೂ ಸುದೀಪ್‌ ಅವರ ಸ್ನೇಹಿತರು ನಂದಿ ಲಿಂಕ್ಸ್‌ ಮೈದಾನದಲ್ಲಿ ಸುದೀಪ್‌ ಅವರ ಜನ್ಮದಿನವನ್ನು ಅದ್ಧೂರಿಯಾಗಿ ಆಯೋಜಿಸಿದ್ದರು. ಈ ವರ್ಷ ಎಂಇಎಸ್‌ ಮೈದಾನದಲ್ಲಿ ಬೆಳಗ್ಗೆ 11.30ರವರೆಗೆ ಸುದೀಪ್‌ ಇರಲಿದ್ದಾರೆ.

ADVERTISEMENT

‘ವರ್ಷಗಳು ಉರುಳಿದಂತೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ವರ್ಷದ ಸಂಭ್ರಮಾಚರಣೆ ವೇಳೆ ಸ್ವಲ್ಪ ಗೊಂದಲವಾಯ್ತು, ತೊಂದರೆಗಳಾಗಿದ್ದವು. ಮನೆಯ ಬಳಿ ಜನ್ಮದಿನಾಚರಣೆ ಆಚರಿಸದಂತೆ ಪೊಲೀಸರು ಮತ್ತು ಅಕ್ಕಪಕ್ಕ‌ದ ಮನೆಯವರು ವಿನಂತಿ ಮಾಡಿದ್ದರು. ನನ್ನಿಂದ ಯಾರಿಗೂ ತೊಂದರೆ ಆಗುವುದು ನನಗಿಷ್ಟವಿಲ್ಲ. ಈ ಬಾರಿ ಜಯನಗರದ ಎಂಇಎಸ್ ಮೈದಾನದಲ್ಲಿ ಸಿಗುತ್ತೇನೆ’ ಎಂದು ತಿಳಿಸಿದರು.

‘ಮ್ಯಾಕ್ಸ್‌’ ಸಿನಿಮಾ ಆದಷ್ಟು ಶೀಘ್ರದಲ್ಲೇ ತೆರೆಕಾಣಲಿದೆ ಎಂದು ಮಾಹಿತಿ ನೀಡಿದ ಸುದೀಪ್ ‘ಸಿನಿರಂಗದಲ್ಲಿನ ನನ್ನ ಪಯಣದ 30 ವರ್ಷ ತುಂಬಲು ಇನ್ನೊಂದು ವರ್ಷ ಬಾಕಿ ಇದೆ. ವರ್ಷಕ್ಕೆ ಎರಡು ಮೂರು ಸಿನಿಮಾ ಮಾಡಬೇಕು ಎನ್ನುವ ಆಸೆ ನನ್ನದು. ಆದರೆ ಕಾರಣಾಂತರಗಳಿಂದ ವಿಳಂಬಗಳನ್ನು ಎದುರಿಸಬೇಕಾಗುತ್ತಿದೆ. ಒಮ್ಮೆ ಒಂದು ಸಿನಿಮಾ ಮಾತ್ರ ಮಾಡುವ ನನ್ನ ನಿಯಮವನ್ನು ನಾನೇ ಮುಂದೆ ಮುರಿಯುತ್ತೇನೆ. ‘ಮ್ಯಾಕ್ಸ್‌’ ಬಳಿಕ ‘ಬಿಲ್ಲಾ ರಂಗ ಬಾಷಾ’ ಸಿನಿಮಾ ಸೆಟ್ಟೇರಲಿದೆ’ ಎಂದರು.

‘ಬಿಗ್‌ಬಾಸ್‌ ಚರ್ಚೆ ನಡೆಯುತ್ತಿದೆ ’

ಈ ಬಾರಿಯ ಬಿಗ್‌ಬಾಸ್‌ ಕಾರ್ಯಕ್ರಮವನ್ನು ಸುದೀಪ್‌ ನಡೆಸಿಕೊಡುವುದು ಅನುಮಾನ ಎನ್ನುವ ಗಾಳಿಸುದ್ದಿ ನಡುವೆ ಪ್ರತಿಕ್ರಿಯೆ ನೀಡಿರುವ ಸುದೀಪ್‌, ‘ಬಿಗ್‌ಬಾಸ್‌ ಹೊಸ ಆವೃತ್ತಿ ಬಗ್ಗೆ ಚರ್ಚೆ ನಡೆಯುತ್ತಿದೆ. ಬಿಗ್‌ಬಾಸ್‌ಗೆ ಹತ್ತು ವರ್ಷ ನನ್ನ ಜೀವನವನ್ನು ನೀಡಿದ್ದೇನೆ. ಈ ಕಾರ್ಯಕ್ರಮ ನಡೆಸಿಕೊಡುವಲ್ಲಿ ನನ್ನ ಭಾಗದಿಂದ ಹೆಚ್ಚು ಪ್ರಯತ್ನವಿದೆ. ಬಿಗ್‌ಬಾಸ್‌ ಶೋಗಳನ್ನು ಆಸ್ವಾದಿಸಿದ್ದೇನೆ, ಅದಕ್ಕೆ ಸಮಯ ನೀಡಿದ್ದೇನೆ, ಶೋ ಮಾಡಲು ಆಸಕ್ತಿಯೂ ಇದೆ. ಆದರೆ ಕೆಲವೊಮ್ಮೆ ನಾವು ಮುಂದುವರಿಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಅವರು ಹೊಸ ಮುಖ ಹುಡುಕಲಿ ಎಂದು ನಾನು ವೈಯಕ್ತಿಕವಾಗಿ ಬಯಸುತ್ತೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.