ನಟ ಉಪೇಂದ್ರ ನಟನೆಯ, ಆರ್. ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ ತೆರೆಕಂಡಿದೆ. ರಾಜ್ಯದಾದ್ಯಂತ 400ಕ್ಕೂ ಅಧಿಕ ತೆರೆಗಳು, ಹಿಂದಿ ಬೆಲ್ಟ್‌ನಲ್ಲಿ 1,800 ತೆರೆಗಳು ಸೇರಿದಂತೆ ವಿಶ್ವದಾದ್ಯಂತ 4 ಸಾವಿರಕ್ಕೂ ಅಧಿಕ ತೆರೆಗಳಲ್ಲಿ ‘ಕಬ್ಜ’ ಹವಾ ಆರಂಭವಾಗಿದೆ. ಈ ಹೊತ್ತಿನಲ್ಲಿ ‘ಕಬ್ಜ’ ಹೆಜ್ಜೆಗಳನ್ನು ನೆನಪಿಸಿಕೊಂಡಿರುವ ನಟ ಉಪೇಂದ್ರ, ಶಿವರಾಜ್‌ಕುಮಾರ್ ಅವರ ಪಾತ್ರದ ಕುರಿತ ಗುಟ್ಟೊಂದನ್ನೂ ಬಿಚ್ಚಿಟ್ಟಿದ್ದಾರೆ.
ಆರಂಭದಲ್ಲೇ ಚಿತ್ರದಲ್ಲಿರುವ ಪ್ರಮುಖ ಪಾತ್ರಗಳ ಕುರಿತು ‘ಸಿನಿಮಾ ಪುರವಣಿ’ ಜೊತೆ ಮಾತಿಗಿಳಿದ ಉಪೇಂದ್ರ, ‘ಸುದೀಪ್ ಅವರು ನಟಿಸಿರುವ ‘ಭಾರ್ಗವ ಭಕ್ಷಿ’ ಎನ್ನುವ ಪಾತ್ರ ಕಥೆಯ ಆರಂಭದಲ್ಲೇ ಇತ್ತು. ಈ ಪಾತ್ರಕ್ಕೆ ಬೇರೆ ಬೇರೆ ನಟರನ್ನು ಚಂದ್ರು ಅವರು ಅಂದುಕೊಂಡಿದ್ದರು. ಸುದೀಪ್ ಅವರನ್ನು ಸಂಪರ್ಕಿಸಿದಾಗ ಆ ಪಾತ್ರವನ್ನು ಮಾಡಲು ಅವರು ಒಪ್ಪಿಕೊಂಡರು. ಶಿವರಾಜ್‌ಕುಮಾರ್ ಅವರ ಪಾತ್ರವನ್ನು ಚಿತ್ರದ ಎರಡನೇ ಭಾಗಕ್ಕಾಗಿ ಲೀಡ್ ಆಗಿ ಕೊನೆಯಲ್ಲಿ ಸೇರ್ಪಡೆ ಮಾಡಲಾಗಿದೆ’ ಎಂದಿದ್ದಾರೆ.
‘ಕಬ್ಜ’ ಮೇಕಿಂಗ್ ಕುರಿತು ಮಾಹಿತಿ ಹಂಚಿಕೊಂಡ ರಿಯಲ್ ಸ್ಟಾರ್, ‘ಕೆಲವು ಸಿನಿಮಾಗಳು ಒನ್ ಮ್ಯಾನ್ ಶೋ. ಉದಾಹರಣೆಗೆ ‘ಉಪೇಂದ್ರ’ ಮತ್ತು ‘ರಕ್ತಕಣ್ಣೀರು’. ಈ ಸಿನಿಮಾದಲ್ಲಿ ನಿರ್ದೇಶಕ ತೆರೆ ಹಿಂದೆ ಕೆಲಸ ಮಾಡಿದ್ದರೂ, ಹೀರೊನೇ ಇಡೀ ಸಿನಿಮಾವನ್ನು ಆವರಿಸಿಕೊಂಡು ಅದನ್ನು ಎತ್ತಿಕೊಂಡು ಹೋಗುತ್ತಿರುತ್ತಾನೆ. ಆದರೆ ‘ಕಬ್ಜ’ ಒಂದು ಮೇಕಿಂಗ್ ಸಿನಿಮಾ ಅಥವಾ ತಂತ್ರಜ್ಞರ ಸಿನಿಮಾ. ‘ಕಬ್ಜ’ ಸಿನಿಮಾದಲ್ಲಿ ನನ್ನ ಪಾತ್ರದಲ್ಲಿ ಹೆಚ್ಚಿನ ಅಂಶ ಡಾನ್ ಆಗಿಯೇ ಕಾಣಿಸಿಕೊಳ್ಳುತ್ತೇನೆ’ ಎಂದಿದ್ದಾರೆ.
‘ಆರ್. ಚಂದ್ರು ಅವರು ಇಂಥ ದೃಶ್ಯವೈಭವವನ್ನು ತೆರೆಗೆ ತಂದಿರುವ ಹಿಂದೆ ಬಹುಶಃ ಕೆ.ಜಿ.ಎಫ್ ಅಥವಾ ಇನ್ಯಾವುದೋ ಸಿನಿಮಾದ ಪ್ರೇರಣೆ ಇರಬಹುದು. ಆದರೆ ನಾಲ್ಕು ವರ್ಷದಿಂದ ತಾನು ಹೆಣೆದ ಕಥೆಯಲ್ಲಿ ನಂಬಿಕೆ ಕಳೆದುಕೊಳ್ಳದೆ, ಅದ್ಭುತವಾದ ಕಾಲ್ಪನಿಕ ಲೋಕ ಸೃಷ್ಟಿಸಿ, ಒಂದೇ ಸಿನಿಮಾವನ್ನು ಇಷ್ಟು ಸಮಯ ಕೈಹಿಡಿದು ನಡೆಸಿದ್ದಾರೆ. ಸ್ವಾತಂತ್ರ್ಯಪೂರ್ವದಿಂದ ಹಿಡಿದು ಸ್ವಾತಂತ್ರ್ಯದ ನಂತರದ ನಾಲ್ಕೈದು ದಶಕಗಳನ್ನು ತನ್ನ ಕಥೆಯಲ್ಲಿ ಸೇರಿಸಿ ಆ ವಿಂಟೇಜ್ ಕಾರುಗಳು, ನೂರಾರು ಜ್ಯೂನಿಯರ್ ಕಲಾವಿದರು, ಆ ಅದ್ಧೂರಿ ಸೆಟ್‌ಗಳು..ಹೀಗೆ ಅದ್ಭುತವಾದ ಲೋಕವನ್ನೇ ಚಂದ್ರು ಇಲ್ಲಿ ಸೃಷ್ಟಿ ಮಾಡಿದ್ದಾರೆ. ಒಬ್ಬ ನಿರ್ದೇಶಕ ಈ ರೀತಿ ಕನಸು ಕಾಣುತ್ತಿರುವಾಗ ನಾವೆಲ್ಲ ಬೆಂಬಲವಾಗಿ ನಿಂತಿದ್ದೇವೆ. ಇದು ಪೂರ್ಣ ಪ್ರಮಾಣದಲ್ಲಿ ಆರ್.ಚಂದ್ರು ಹಾಗೂ ತಂತ್ರಜ್ಞರ ಸಿನಿಮಾ’ ಎನ್ನುತ್ತಾರೆ ಉಪೇಂದ್ರ.
ನಿರ್ದೇಶಕನಾಗಿ ನೀವೇನಾದರೂ ಸಲಹೆ ನೀಡಿದ್ರಾ ಎನ್ನುವ ಪ್ರಶ್ನೆಗೆ, ‘ನಾನು ನಿರ್ದೇಶಕನಾಗಿದ್ದರೂ ಈ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಒಂದು ನಯಾಪೈಸೆ ಸಲಹೆ, ಐಡಿಯಾಗಳನ್ನು ಚಂದ್ರು ಅವರಿಗೆ ನೀಡಲಿಲ್ಲ. ಆರಂಭದಲ್ಲಿ ಚಂದ್ರು ಅವರು ಬಂದು ಕಬ್ಜ ಸಿನಿಮಾ ಕಥೆಯನ್ನು ಹೇಳಿದಾಗಲೇ ನಾನು ದಂಗಾಗಿದ್ದೆ. ಇಷ್ಟು ಅದ್ಧೂರಿಯಾಗಿ, ದೃಶ್ಯವೈಭವದಿಂದ ಕೂಡಿದ ಸಿನಿಮಾ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದೆ. ಆದರೆ ಮೊದಲ ಫೋಟೊಶೂಟ್ ಬಳಿಕ ಹೋದಾಗ ಚಂದ್ರು ಅವರ ಮೇಲೆ ನನಗೆ ವಿಶ್ವಾಸ ಮೂಡಿತು. ನಂತರ ನಾನು ಅವರಿಗೆ ಬೆಂಬಲವಾಗಿ ನಿಲ್ಲಲು ನಿರ್ಧರಿಸಿದೆ.
ಮೇಕಿಂಗ್‌ನಿಂದಲೇ ಜನರನ್ನು ಸೆಳೆಯುವ ಬಗ್ಗೆ ಕೇಳಿದಾಗ, ‘ಮೇಕಿಂಗ್ ಸಿನಿಮಾದಲ್ಲಿ ಬಹಳ ಕಥೆ ಹೇಳಲು ಆಗುವುದಿಲ್ಲ. ಕಥೆ ಆಳವಾಗಿದ್ದರೆ ಮೇಕಿಂಗ್ ಬೇಕಾಗುವುದೇ ಇಲ್ಲ. ಕಥೆಯನ್ನೇ ಮುಖ್ಯವಾಗಿರಿಸಿ ಹೊರಟಾಗ ಮೇಕಿಂಗ್‌ಗೆ ಆದ್ಯತೆ ನೀಡಲು ಸಾಧ್ಯವೇ ಆಗುವುದಿಲ್ಲ. ಸಣ್ಣ ಲೈನ್ ಇಟ್ಟುಕೊಂಡು ಅದ್ಭುತವಾಗಿ ಹೆಣೆಯುವುದೇ ಮೇಕಿಂಗ್ ಸಿನಿಮಾಗಳ ಹಿಂದಿನ ಗುಟ್ಟು’ ಎಂದರು ಉಪೇಂದ್ರ.
‘ಯುಐ’ ಲೋಕ ಹೇಗಿರುತ್ತದೆ?
‘ಯುಐ’ಗೂ ‘ಕಬ್ಜ’ದ ತಾಂತ್ರಿಕ ಪ್ರೇರಣೆಯಿದೆ. ಈ ಚಿತ್ರದ ಶೂಟಿಂಗ್ ಇನ್ನೂ 45–50 ದಿನ ಬಾಕಿ ಇದೆ. ಪೋಸ್ಟ್ ಪ್ರೊಡಕ್ಷನ್ ಎಲ್ಲ ಸೇರಿದರೆ 5–6 ತಿಂಗಳು ಬೇಕು. ‘ಕಬ್ಜ’ದಂತೆ ‘ಯುಐ’ ಕೂಡಾ ಸಂಪೂರ್ಣವಾದ ಮೇಕಿಂಗ್ ಸಿನಿಮಾ’ ಎಂದರು ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.