ಮುಂಬೈ: ನಟಿ ಸ್ವರಾ ಭಾಸ್ಕರ್ ಅವರು ಮಹಾರಾಷ್ಟ್ರದ ರಾಜಕಾರಣಿ ಫಹಾದ್ ಅಹ್ಮದ್ ಎಂಬುವವರನ್ನು ವಿವಾಹವಾಗಿದ್ದಾರೆ.
ಸಮಾಜವಾದಿ ಪಕ್ಷದ ಯುವ ಘಟಕ ‘ಸಮಾಜವಾದಿ ಯುವಜನ ಸಭಾ’ದ ಮಹಾರಾಷ್ಟ್ರ ರಾಜ್ಯ ಘಟಕದ ಅಧ್ಯಕ್ಷ ಫಹಾದ್ ಅಹ್ಮದ್ ಅವರನ್ನು ವಿವಾಹವಾಗಿರುವ ವಿಷಯವನ್ನು ಸ್ವರಾ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾರೆ.
ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಸ್ವರಾ ಅದಕ್ಕೆ ಒಂದು ಒಕ್ಕಣೆಯನ್ನೂ ಬರೆದಿದ್ದಾರೆ. 'ನಮಗೆ ಬೇಕಾದ ಕೆಲವನ್ನು ನಮ್ಮ ಪಕ್ಕದಲ್ಲೇ ಇಟ್ಟುಕೊಂಡು ಎಲೆಲ್ಲೋ ಹುಡುಕುತ್ತಿರುತ್ತೇವೆ. ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು. ನಾವು ಮೊದಲು ಸ್ನೇಹವನ್ನು ಕಂಡುಕೊಂಡೆವು. ತದನಂತರ ನಾವು ಒಬ್ಬರನ್ನೊಬ್ಬರು ಕಂಡುಕೊಂಡೆವು! ನನ್ನ ಹೃದಯಕ್ಕೆ ಸುಸ್ವಾಗತ ಫಹಾದ್ ಅಹ್ಮದ್. ಹೃದಯ ಗಲಿಬಿಲಿಗೊಂಡಿದೆ, ಆದರೆ ಅದು ನಿನ್ನದೇ!’ ಎಂದು ಸ್ವರಾ ಬರೆದಿದ್ದಾರೆ.
ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿಕೊಂಡಿರುವ ಫಹಾದ್ ಅಹ್ಮದ್, ‘ಈ ಗಲಿಬಿಲಿಯೂ ಇಷ್ಟು ಸುಂದರವಾಗಿರುತ್ತದೆ ಎಂದು ನನಗೆ ತಿಳಿದಿರಲಿಲ್ಲ. ನನ್ನ ಕೈ ಹಿಡಿದಿದ್ದಕ್ಕಾಗಿ ನಿನಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ಸ್ವರಾ ಭಾಸ್ಕರ್ ಕೊನೆಯ ಬಾರಿಗೆ ‘ಜಹಾನ್ ಚಾರ್ ಯಾರ್’ (2022) ಎಂಬ ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
'ಅನಾರ್ಕಲಿ ಆಫ್ ಆರಾಹ್', 'ವೀರೆ ದಿ ವೆಡ್ಡಿಂಗ್', 'ನಿಲ್ ಬತ್ತೆ ಸನ್ನತಾ' ಮತ್ತು 'ರಾಂಜನಾ' ಸೇರಿದಂತೆ ಹಲವು ಚಿತ್ರಗಳಲ್ಲಿ ಸ್ವರಾ ಭಾಸ್ಕರ್ ಅಭಿನಯಿಸಿದ್ದಾರೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.