ಬೆಂಗಳೂರು: ರಾಜಕೀಯ ಮಹತ್ವಾಕಾಂಕ್ಷೆಯೊಂದಿಗೆ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಅವರು ತಮ್ಮ ‘ತಮಿಳಗ ವೆಟ್ರಿ ಕಳಗಂ–ಟಿವಿಕೆ’ (Tamilaga Vettri Kazhagam) ಪಕ್ಷವನ್ನು ತಮಿಳಿಗರ ಮುಂದೆ ತೆರೆದಿಟ್ಟಿದ್ದಾರೆ.
ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಸೂಪರ್ ಸ್ಟಾರ್ ‘ದಳಪತಿ ವಿಜಯ್’ (ಜೋಸೆಫ್ ವಿಜಯ್ ಚಂದ್ರಶೇಖರ್) ಅವರು ಚಿತ್ರರಂಗದಿಂದ ನಿರ್ಗಮಿಸುತ್ತಿರುವುದು ಭಾರತೀಯ ಸಿನಿಮಾ ಜಗತ್ತಿನ ಅನೇಕ ಗಣ್ಯರಿಗೆ ಕಣ್ಣು ಕಿಸಿರುವಂತೆ ಮಾಡಿದೆ.
ಟಿವಿಕೆ ಪಕ್ಷದ ಅನಾವರಣದ ಜೊತೆ ಅವರು ಚಿತ್ರರಂಗಕ್ಕೂ ಗುಡ್‌ಬೈ ಹೇಳುತ್ತಿದ್ದಾರೆ. ಈಗಾಗಲೇ ಚಾಲ್ತಿಯಲ್ಲಿರುವ ವಿಜಯ್ 69 ಸಿನಿಮಾ ಒಂದನ್ನು ಹೊರತುಪಡಿಸಿ ಇನ್ಮುಂದೆ ಅವರು ಮತ್ಯಾವತ್ತೂ ಬಣ್ಣ ಹಚ್ಚುವುದಿಲ್ಲ ಎನ್ನುವುದು ಅವರ ಕಟ್ಟಾ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.
ನಿನ್ನೆ ವಿಕ್ರವಾಂಡಿಯಲ್ಲಿ ಆಯೋಜಿಸಿದ್ದ ಪಕ್ಷದ ಮೊದಲ ರಾಜ್ಯಮಟ್ಟದ ಸಮ್ಮೇಳನವನ್ನು ತಮಿಳುನಾಡಿನ ಮಾಧ್ಯಮಗಳೂ ಸೇರಿದಂತೆ ಅನೇಕ ರಾಷ್ಟ್ರೀಯ ಮಾಧ್ಯಮಗಳು 'ಸಂಡೇ ಸ್ಫೋಟ ' (Sunday splash) ಎಂದೇ ಬಣ್ಣಿಸಿವೆ.
ಈ ಬೃಹತ್ ರಾಜಕೀಯ ಕಾರ್ಯಕ್ರಮದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಜನ ಭಾಗಿಯಾಗಿದ್ದು ಆಡಳಿತಾರೂಢ ಡಿಎಂಕೆ ಹಾಗೂ ತಮಿಳುನಾಡಿನಲ್ಲಿ ನೆಲೆ ವಿಸ್ತರಿಸಲು ಹವಣಿಸುತ್ತಿರುವ ಬಿಜೆಪಿಗೆ ಹುಬ್ಬೇರಿಸುವಂತೆ ಮಾಡಿದೆ.
ಮೂರು ದಶಕಗಳಿಂದ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡು, ದೊಡ್ಡಮಟ್ಟಕ್ಕೆ ಹೆಸರು ಮಾಡಿ, ಇದೀಗ ರಾಜಕೀಯಕ್ಕಾಗಿ ಸಿನಿಮಾ ರಂಗದಿಂದ ಹಿಂದೆ ಸರಿಯುತ್ತಿರುವ ಕುರಿತು ಎದ್ದಿರುವ ಪ್ರಶ್ನೆಗಳಿಗೂ ವಿಜಯ್ ಅವರು ಇದೇ ಸಮಾವೇಶದಲ್ಲಿ ಉತ್ತರಿಸಿದ್ದಾರೆ.
₹200 ಕೋಟಿಗೂ ಅಧಿಕ ಸಂಭಾವನೆ ಪಡೆಯುವ ನಟ!
ತಮಿಳಿನ ಖ್ಯಾತ ನಿರ್ದೇಶಕ ಎಸ್.ಎ. ಚಂದ್ರಶೇಖರ್ ಅವರ ಪುತ್ರನಾಗಿರುವ 50 ವರ್ಷ ವಯಸ್ಸಿನ ವಿಜಯ್, ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕೆಲವೇ ಕೆಲವು ನಟರ ಸಾಲಿಗೆ ಸೇರುತ್ತಾರೆ.
ಮೆರ್ಸಲ್, ಬಿಗಿಲ್, ಮಾಸ್ಟರ್, ವಾರಿಸು, ಬೀಸ್ಟ್, ಲಿಯೋ, G.O.A.T ಎಂಬ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿರುವ ವಿಜಯ್ ಅವರು, ಈ ಪ್ರತಿಯೊಂದು ಚಿತ್ರಗಳಿಗೆ ಪಡೆದಿದ್ದ ಸಂಭಾವನೆ ₹100 ಕೋಟಿಗೂ ಹೆಚ್ಚು. ಕನ್ನಡದ ಕೆವಿಎನ್ ಪ್ರೊಡಕ್ಷನ್ ನಿರ್ಮಿಸುತ್ತಿರುವ ‘ದಳಪತಿ 69’ ಸಿನಿಮಾಕ್ಕೆ ವಿಜಯ್ ಪಡೆಯುತ್ತಿರುವ ಸಂಭಾವನೆ ₹235 ಕೋಟಿ! ಎನ್ನಲಾಗಿದೆ.
'ಬದಲಾವಣೆಗಾಗಿ ನಾನು ನಿಮ್ಮನ್ನು ನಂಬಿ ಇಲ್ಲಿ ಬಂದಿದ್ದೇನೆ. ಇದಕ್ಕಾಗಿ ನನ್ನ ವೃತ್ತಿ ಜೀವನದ ಔನ್ನತ್ಯವನ್ನೇ ಎಸೆಯುತ್ತಿದ್ದೇನೆ. ಅಷ್ಟೇ ಅಲ್ಲ, ಎಲ್ಲರ ಕಣ್ಣು ಕುಕ್ಕಿಸುವ ನನ್ನ ಸಂಬಳವನ್ನೂ..' ಎಂದು ಹೇಳಿದ್ದಾರೆ.
‘ನನ್ನ ವೃತ್ತಿ ಜೀವನದ ಆರಂಭದಲ್ಲಿ ಹಲವರು ನನ್ನನ್ನು ಹೇಗೆ ನಡೆಸಿಕೊಂಡರು ಎಂಬುದು ನನಗೆ ಗೊತ್ತಿದೆ. ಅವನು ನೋಡೋಕೆ ಚೆನ್ನಾಗಿಲ್ಲ, ನಡಿಗೆ ಸರಿ ಇಲ್ಲ, ಕೂದಲು ಸರಿ ಇಲ್ಲ, ಒಂದು ಸ್ಟೈಲ್ ಸಹ ಇಲ್ಲ, ಇವನಿಂದ ಏನಾಗುತ್ತೆ ಎಂದು ಹೀಯಾಳಿಸಿದ್ದರು. ಆದರೆ, ನಾನು ಅಂತಹವುಗಳಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಮುಂದಿನದು ನಿಮಗೆ ಗೊತ್ತಿದೆ. ನಮ್ಮ ಮೇಲೆ ನಂಬಿಕೆ ಹಾಗೂ ನಾವು ಮಾಡುವ ಕೆಲಸದ ಮೇಲೆ ನಮಗೆ ಪ್ರೀತಿ ಇರಬೇಕು‘ ಎಂದು ಅವರು ತಮಗಾದ ಅವಮಾನವನ್ನು ನೆನೆದು ಭಾವುಕರಾದರು.
2026 ರ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಕಣ್ಣು
‘ರಾಜಕೀಯ ಎನ್ನುವುದು ವೃತ್ತಿಯಲ್ಲ, ಇದು ಜನರ ಸೇವೆ ಮಾಡಲು ಇರುವ ಪವಿತ್ರ ಮಾರ್ಗ’ ಎಂದು ಹೇಳಿರುವ ಅವರು, ‘ಹವ್ಯಾಸಕ್ಕಾಗಿ ಇದನ್ನು ಆಯ್ಕೆ ಮಾಡಿಕೊಂಡಿಲ್ಲ, ಪೂರ್ಣ ಮನಸ್ಸಿನಿಂದ ರಾಜಕೀಯಕ್ಕೆ ಕಾಲಿಡುತ್ತಿದ್ದೇನೆ’ ಎಂದು ಕೆಲವರ ಅನುಮಾನಗಳಿಗೆ ಮೊದಲೇ ತೆರೆ ಎಳೆದಿದ್ದಾರೆ.
‘ವಿಭಜಕ ಬಿಜೆಪಿ ನಮ್ಮ ಸೈದ್ಧಾಂತಿಕ ಮತ್ತು ಭ್ರಷ್ಟ ಡಿಎಂಕೆಯು ನಮ್ಮ ರಾಜಕೀಯ ವಿರೋಧಿಗಳು‘ ಎಂದು ಹೇಳಿರುವ ವಿಜಯ್ ಅವರು ತಮ್ಮ ರಾಜಕೀಯದಲ್ಲಿ ಟಿವಿಕೆಗೆ ‘ಟಾರ್ಗೆಟ್’ ಯಾರು? ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ವಿಶೇಷವೆಂದರೆ 2026 ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಉದ್ದೇಶದಿಂದಲೇ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು ದಳಪತಿ ರಾಜಕೀಯಕ್ಕೆ ಧುಮುಕಿದ್ದಾರೆ.
‘ತಮಿಳುನಾಡಿನ ವಿಜಯದ ಪಕ್ಷ’
1984 ರಲ್ಲಿ ವೆಟ್ರಿ ಎಂಬ ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸುವ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ವಿಜಯ್, ಇದುವರೆಗೆ 68 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ಬಹುತೇಕ ಚಿತ್ರಗಳೆಲ್ಲ ಸೂಪರ್ ಹಿಟ್ ಆಗಿದ್ದಲ್ಲದೇ ಅನೇಕ ಭಾಷೆಗಳಿಗೆ ರಿಮೇಕ್ ಆಗಿವೆ.
ಸ್ವಲ್ಪಮಟ್ಟಿಗೆ ಅವಿಭಜಿತ ಆಂಧ್ರಪ್ರದೇಶ ಹೊರತುಪಡಿಸಿದರೇ, ಭಾರತದ ಯಾವುದೇ ರಾಜ್ಯಗಳಲ್ಲಿ ಕಾಣದ ಸಿನಿಮಾ–ರಾಜಕೀಯ ಸಂಬಂಧ ತಮಿಳುನಾಡಿನಲ್ಲಿ ಗಾಢವಾಗಿ ಬೆಸೆದುಕೊಂಡಿದ್ದು, ದಿವಂಗತ ನಟರಾದ ಎಂ.ಜಿ. ರಾಮಚಂದ್ರನ್, ಜಯಲಲಿತಾ, ವಿಜಯಕಾಂತ್ ಅಲ್ಲಿನ ರಾಜಕಾರಣದಲ್ಲಿ ಯಶಸ್ಸು ಕಂಡವರು. ಪ್ರಸ್ತುತ ನಟ ಕಮಲ್ ಹಾಸನ್ ಅವರೂ ‘ಮಕ್ಕಳ ನೀದಿ ಮಯಂ’ ಪಕ್ಷ ಸ್ಥಾಪಿಸಿ ರಾಜಕಾರಣದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಅಂದಹಾಗೇ ‘ತಮಿಳಿಗ ವೆಟ್ರಿ ಕಳಗಂ’ ಎಂದರೆ ‘ತಮಿಳುನಾಡಿನ ವಿಜಯದ ಪಕ್ಷ’ ಎಂಬರ್ಥವನ್ನು ಇದು ಸೂಚಿಸುತ್ತದೆ. ವಿಜಯ್ ಅವರೇ ಇದರ ಅಧ್ಯಕ್ಷರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.