ಹಲವು ವರ್ಷಗಳ ನಂತರ ನಿರ್ದೇಶನಕ್ಕಿಳಿದಿರುವ ನಟ ಉಪೇಂದ್ರ, ವಿಭಿನ್ನ ಕಥಾಹಂದರದ ಚಿತ್ರವನ್ನು ತೆರೆ ಮೇಲೆ ತರಲು ಸಿದ್ದತೆ ನಡೆಸುತ್ತಿದ್ದಾರೆ. ಚಿತ್ರ ಶಿರ್ಷೀಕೆ ಮೂಲಕವೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ಉಪೇಂದ್ರ, ಈಗ ‘ಯುಐ‘ ಚಿತ್ರ ಮೊದಲ ಹಾಡಾದ ‘ಟ್ರೋಲ್ ಸಾಂಗ್’ ಅನ್ನು ಬಿಡುಗಡೆ ಮಾಡಿದ್ದಾರೆ.
ಹೆಸರೇ ಹೇಳುವಂತೆ ಟ್ರೋಲ್ ಸಾಂಗ್, ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಟ್ರೋಲ್ ಆದ ವಿಷಯಗಳನ್ನು ಪೋಣಿಸಿ ರಚಿಸಿದ ಹಾಡಾಗಿದೆ. ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ‘ನಮ್ಮ ಮನಸ್ಸು ನಮಗೆ ಒಳ್ಳೆದು ಮಾಡಿದ್ರೆ...’ ಎಂಬ ಟ್ರೋಲ್‌ನಿಂದ ಹಿಡಿದು ‘ನಿಖಿಲ್ ಎಲ್ಲಿದಿಯಪ್ಪಾ..’ವರೆಗೂ ಈ ಹಾಡು ಸಾಗಿದೆ.
‘ಟ್ರೋಲ್ ಆಗುತ್ತೆ ಇದು ಟ್ರೋಲ್ ಆಗುತ್ತೆ.. ಇನ್‌ಸ್ಟಾದಲ್ಲಿ ರೀಲ್ಸ್ ಆಗುತ್ತೆ...’ ಎಂದು ಹಾಡು ಪ್ರಾರಂಭವಾಗುತ್ತದೆ. ಬೆಳ್ಳುಳ್ಳಿ ಕಬಾಬ್, ಒನ್ ಮೋರ್ ಒನ್ ಮೋರ್ ಎನ್ನಬೇಕು, ಕರೀಮಣಿ ಮಾಲಿಕ, ನಾನು ನಂದಿನಿ, ಜೋಡೆತ್ತುಗಳು ನಿಂತ್ರೆ ಅಕ್ಕ ಗೆದ್ದೆಂಗೆ, ಹೆಂಗ್ ಪುಂಗ್ ಲಿ, ಆಲ್ ರೈಟ್ ಮುಂದಕ್ಕೆ ಹೋಗೋಣ, ತಗಡು ಆಗೋಗಾ ಅವನು ಹೀಗೆ ಅನೇಕ ಟ್ರೋಲ್ ಕಂಟೆಂಟುಗಳು ಹಾಡಿನಲ್ಲಿ ಬಂದು ಹೋಗತ್ತವೆ.
ಈ ಹಾಡಿಗೆ ನರೇಶ್ ಕುಮಾರ್ ಎಚ್. ಎನ್. ಎಂಬುವವರು ಸಾಹಿತ್ಯ ಬರೆದಿದ್ದಾರೆ. ‘ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ’ ಹಾಡಿನ ಮೂಲಕ ಗುರುತಿಸಿಕೊಂಡಿದ್ದ ಐಶ್ವರ್ಯ ರಂಗರಾಜನ್ ಈ ಹಾಡನ್ನು ಹಾಡಿದ್ದಾರೆ. ಅವರೊಂದಿಗೆ ಹರ್ಷಿಕಾ ದೇವನಾಥ್, ಅನೂಪ್ ಭಂಡಾರಿ, ಬಿ. ಅಜನೀಶ್ ಲೋಕನಾಥ್ ಧ್ವನಿಗೂಡಿಸಿದ್ದಾರೆ. ಇಮ್ರಾನ್ ರೇಷ್ಮಿಯಾ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ನಟಿ ರೀಷ್ಮಾ ನಾಣಯ್ಯ ಈ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಈ ಹಾಡು ಕನ್ನಡ ಸೇರಿದಂತೆ ಮಲಯಾಳಂ, ತೆಲುಗು, ಹಿಂದಿ, ತಮಿಳಿನಲ್ಲಿ ಬಿಡುಗಡೆಯಾಗಲಿದೆ ಎಂದು ಉಪೇಂದ್ರ ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.