‘ಮಾಲ್ಗುಡಿ ಡೇಸ್’, ‘ರಾಘು’, ‘ಕೇಸ್ ಆಫ್ ಕೊಂಡಾಣ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಭಿನ್ನವಾದ ಪಾತ್ರಗಳನ್ನು ಮಾಡಿರುವ ನಟ ವಿಜಯ ರಾಘವೇಂದ್ರ ಇದೀಗ ‘ರಿಪ್ಪನ್ ಸ್ವಾಮಿ’ಯಾಗಿ ತೆರೆಗೆ ಬರಲು ಸಜ್ಜಾಗಿದ್ದಾರೆ.
ಪಂಚಾನನ ಫಿಲಂಸ್ ನಿರ್ಮಾಣದ ಈ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ಈ ಹಿಂದೆ ವಿಜಯ ರಾಘವೇಂದ್ರ ನಟಿಸಿದ್ದ ‘ಮಾಲ್ಗುಡಿ ಡೇಸ್’ ಸಿನಿಮಾ ಮಾಡಿದ್ದ ಕಿಶೋರ್ ಮೂಡುಬಿದ್ರೆ ಅವರೇ ‘ರಿಪ್ಪನ್ ಸ್ವಾಮಿ’ಗೂ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತಾರಾಗಣದಲ್ಲಿ ಅಶ್ವಿನಿ ಚಂದ್ರಶೇಖರ್, ಪ್ರಕಾಶ್ ತುಮ್ಮಿನಾಡು, ವಜ್ರದೀರ್ ಜೈನ್, ಯಮುನಾ ಶ್ರೀನಿಧಿ, ಮೋಹನ್ ಶೇಣಿ, ಕೃಷ್ಣಮೂರ್ತಿ ಕವತ್ತಾರ್ ಮುಂತಾದವರು ಇದ್ದಾರೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ.
‘ಚಿತ್ರದ ಶೀರ್ಷಿಕೆ ಒಂದು ಪಾತ್ರದ ಹೆಸರು. ಸಣ್ಣಕೊಪ್ಪ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆ ಇದಾಗಿದೆ. ಮಲೆನಾಡು ಭಾಗದಲ್ಲಿರುವ ಈ ಊರಿನಲ್ಲಿ ಇರುವ ಎಸ್ಟೇಟ್‌ನಲ್ಲಿ ಕಥೆ ನಡೆಯುತ್ತದೆ. ಆ ಊರಿನಲ್ಲಿ ನಡೆಯುವ ನಿಗೂಢ ಘಟನೆಗಳ ಸುತ್ತ ಚಿತ್ರಕಥೆ ಇದೆ. ಇದೊಂದು ಥ್ರಿಲ್ಲರ್ ಮಿಸ್ಟರಿ ಸಿನಿಮಾ. ಹಾಸ್ಯದ ಲೇಪನವೂ ಇದೆ. ಇದು ವಿಜಯ ರಾಘವೇಂದ್ರ ಅವರಿಗಾಗಿಯೇ ನಾನು ಬರೆದ ಕತೆ. ಅವರನ್ನು ಬೇರೆ ಶೇಡ್‌ನಲ್ಲಿ ತೋರಿಸುವ ಕೆಲಸ ಇದರಲ್ಲಾಗಿದೆ. ಇಲ್ಲಿಯವರೆಗೂ ಈ ಶೇಡ್‌ನಲ್ಲಿ ಅವರನ್ನು ಪ್ರೇಕ್ಷಕರು ನೋಡಿಲ್ಲ. ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿದೆ. ಜೂನ್ ಅಥವಾ ಜುಲೈನಲ್ಲಿ ಸಿನಿಮಾ ತೆರೆಕಾಣಲಿದೆ’ ಎನ್ನುತ್ತಾರೆ ಕಿಶೋರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.