ಬೆಂಗಳೂರು: ತಮಿಳು ನಟ, ನಿರ್ಮಾಪಕ ವಿಶಾಲ್ ಅವರು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (CBFC) ವಿರುದ್ಧ ಲಂಚದ ಆರೋಪ ಮಾಡಿರುವ ಸುದ್ದಿ ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನವನ್ನುಂಟು ಮಾಡಿದೆ.
ಏತನ್ಮಧ್ಯೆ ವಿಶಾಲ್ ಅವರ ಆರೋಪಕ್ಕೆ CBFC ಯ ಮಾತೃಸಂಸ್ಥೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರತಿಕ್ರಿಯಿಸಿದ್ದು, ವಿಶಾಲ್ ಅವರು ಮಾಡಿರುವ ಆರೋಪ ದುರದೃಷ್ಟಕರವಾದದ್ದು ಎಂದಿದೆ.
ಸರ್ಕಾರವು ಲಂಚ, ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದು, ಅಂತಹದ್ದು ಏನಾದರೂ ಕಂಡು ಬಂದರೆ ಸಂಬಂಧಿಸಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು X ನಲ್ಲಿ ಮಾಹಿತಿ ಹಂಚಿಕೊಂಡಿದೆ.
ವಿಶಾಲ್ ಅವರು ಮಾಡಿರುವ ಆರೋಪದ ಕುರಿತು ತನಿಖೆ ನಡೆಸಲು ಇಲಾಖೆ ಈಗಲೇ ಒಬ್ಬ ಹಿರಿಯ ಅಧಿಕಾರಿಯನ್ನು ಮುಂಬೈಗೆ ಕಳುಹಿಸಿ ಕೊಡಲಿದೆ. ಅವರು ತನಿಖೆ ನಡೆಸಲಿದ್ದಾರೆ. CBFC ನಲ್ಲಿ ಅಥವಾ CBFC ಹೆಸರಿನಲ್ಲಿ ಯಾರಾದರೂ ಕಿರಕುಳ ನೀಡಿದ್ದರೆ jsfilms.inb@nic.in ಗೆ ದೂರು ನೀಡಿ ಎಂದು ಭರವಸೆ ನೀಡಿದೆ.
ವಿಶಾಲ್ ಮಾಡಿರುವ ಆರೋಪ ಏನು?
ಮಾರ್ಕ್ ಆ್ಯಂಟನಿ ಸಿನಿಮಾದ ಹಿಂದಿ ಅವತರಣಿಕೆ ಬಿಡುಗಡೆಗೂ ಮುನ್ನ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್‌ನಿಂದ ಸೆನ್ಸಾರ್ ಪ್ರಮಾಣ ಪತ್ರ ಪಡೆಯಲು ₹6.5 ಲಕ್ಷ ಲಂಚ ನೀಡಿರುವುದಾಗಿ ನಟ ವಿಶಾಲ್ ಹೇಳಿಕೊಂಡಿದ್ದಾರೆ.
ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ಎಲ್ಲ ಪುರಾವೆಗಳನ್ನು ಹೊಂದಿರುವುದಾಗಿ ಅವರು ಹೇಳಿದ್ದಾರೆ. ಸೆಪ್ಟೆಂಬರ್ 15ರಂದು ಬಿಡುಗಡೆಯಾದ ಮಾರ್ಕ್ ಆಂಟನಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅದರ ಹಿಂದಿ ಆವೃತ್ತಿಯು ಸೆಪ್ಟೆಂಬರ್ 28ರಂದು ತೆರೆ ಕಂಡಿತ್ತು.
ಈ ಕುರಿತಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆಯಲು ನಾನು ಇಚ್ಛಿಸುತ್ತೇನೆ. ಚಿತ್ರದ ಸೆನ್ಸಾರ್‌ಗಾಗಿ ಆನ್‌ಲೈನ್‌ನಲ್ಲಿ ನಾವು ಅರ್ಜಿ ಸಲ್ಲಿಸಿದ್ದೆವು. ಆದರೆ, ಸಿಬಿಎಫ್‌ಸಿ ಪ್ರತಿಕ್ರಿಯೆ ಕಂಡು ಬೆಚ್ಚಿಬಿದ್ದೆವು. ನಮ್ಮ ಕಡೆಯ ವ್ಯಕ್ತಿಯೊಬ್ಬರು ಕಚೇರಿಗೆ ಭೇಟಿ ಕೊಟ್ಟಾಗ ಸರ್ಟಿಫಿಕೇಟ್ ನೀಡಲು ₹6.5 ಲಕ್ಷ ಲಂಚ ಕೇಳಿದ್ದಾರೆ. ಚಿತ್ರವನ್ನು ವೀಕ್ಷಿಸಿ ಪರಿಶೀಲನೆ ನಡೆಸಲು ₹3 ಲಕ್ಷ ಮತ್ತು ಸರ್ಟಿಫಿಕೇಟ್ ನೀಡಲು ₹3.5 ಲಕ್ಷ ಕೇಳಿದರು. ಬೇರೆ ದಾರಿ ಇಲ್ಲದೆ ಹಣ ಪಾವತಿಸಿ ಸರ್ಟಿಫಿಕೇಟ್ ಪಡೆದೆ. ಬಳಿಕ, ಚಿತ್ರ ಉತ್ತರ ಭಾರತದಲ್ಲಿ ತೆರೆ ಕಂಡಿತು ಎಂದು ಅವರು ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಇದು ನಿಜಕ್ಕೂ ದುರದೃಷ್ಟಕರ. ಈ ಬಗ್ಗೆ ಉನ್ನತಾಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.