‘ಲೂಸ್ ಮಾದ’ ಖ್ಯಾತಿಯ ನಟ ಯೋಗೇಶ್ ಸ್ವಲ್ಪ ಬಿಡುವಿನ ಬಳಿಕ ಚಂದನವನದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಅವರ ನಟನೆಯ ‘ಲಂಕೆ’ ಇದೇ 10ರಂದು ಬಿಡುಗಡೆಯಾಗುತ್ತಿದ್ದು, ಪ್ರಸ್ತುತ ಭೂಗತಲೋಕದ ಕಥಾಹಂದರ ಹೊಂದಿರುವ ‘ಹೆಡ್‌ಬುಷ್’ನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿರುವ ಅವರು ಹಲವು ಬಿಗ್ ಪ್ರೊಜೆಕ್ಟ್‌ಗಳನ್ನು ಒಪ್ಪಿಕೊಂಡಿದ್ದಾರೆ. ಇದರಲ್ಲಿ ‘ಸಿದ್ಲಿಂಗು–2’ ಕೂಡಾ ಸೇರಿದೆ. ಈ ಪಯಣದ ಬಗ್ಗೆ ‘ಸಿನಿಮಾ ಪುರವಣಿ’ ಜೊತೆ ಯೋಗೇಶ್ ಮಾತಿಗಿಳಿದಿದ್ದು ಹೀಗೆ...
***
*ಚಂದನವನದಿಂದ ಯೋಗೇಶ್ ಸ್ವಲ್ಪ ಸಮಯ ದೂರ ಉಳಿದಿದ್ದರ ಹಿಂದಿನ ಕಾರಣವೇನು?
-ನನಗೂ ಸಾಕಾಗಿತ್ತು. ಸಾಲು ಸಾಲು ಸಿನಿಮಾಗಳನ್ನು ನಾನು ಮಾಡಿದ್ದೆ. ಕೆಲವೊಮ್ಮೆ ವರ್ಷಕ್ಕೆ ನಾಲ್ಕೈದು ಸಿನಿಮಾ ಮಾಡಿದ್ದೇನೆ. ಒಂದೇ ರೀತಿಯ ಸಿನಿಮಾಗಳನ್ನು ಮಾಡಿದರೆ ಪ್ರೇಕ್ಷಕರಿಗೂ ಇಷ್ಟವಾಗುವುದಿಲ್ಲ. ಹೀಗಾಗಿ ಸ್ವಲ್ಪ ಬಿಡುವು ತೆಗೆದುಕೊಂಡು ‘ಲಂಕೆ’ ಚಿತ್ರ ಒಪ್ಪಿಕೊಂಡಿದ್ದೆ. ಇನ್ನು ಮುಂದೆ ಸಮಯ ತೆಗೆದುಕೊಂಡು ಸಿನಿಮಾ ಮಾಡಬೇಕು ಎಂದು ನಿರ್ಧರಿಸಿದ್ದೇನೆ. ನಾನು ಎಲ್ಲ ರೀತಿಯ ಪಾತ್ರಗಳನ್ನೂ ಮಾಡಿದೆ. ಖಳನಾಯಕನಾಗಿ, ಹೀರೋ ಆಗಿ, ಕಾಮಿಡಿ ಪಾತ್ರಕ್ಕೂ ಬಣ್ಣಹಚ್ಚಿದೆ. ಎಲ್ಲ ರೀತಿಯ ಪಾತ್ರ ಮಾಡಿದ್ದೇನೆ, ಇನ್ನೇನು ಬಾಕಿ ಇದೆ ಎನ್ನುವ ಪ್ರಶ್ನೆ ನನಗೇ ಹುಟ್ಟಿಕೊಂಡಿತ್ತು. ಈ ಗೊಂದಲದಲ್ಲಿದ್ದಾಗ ಕಮರ್ಷಿಯಲ್ ಸಿನಿಮಾ ಮಾಡಬೇಕು ಎಂದು ನಿರ್ಧರಿಸಿದೆ.
ಈ ಸಂದರ್ಭದಲ್ಲಿ ನಿರ್ದೇಶಕ ರಾಮ್‌ಪ್ರಸಾದ್ ಅವರು ‘ಒಂದು ಕಥೆ ಇದೆ. ನಿಮಗೆ ಹೇಳಬೇಕು’ ಎಂದರು. ಅವರು ಬಂದು ಕಥೆ ಹೇಳಿದರು. ನನಗೂ ಕಥೆ ಇಷ್ಟವಾಯಿತು. ನಾನೂ ಕಮರ್ಷಿಯಲ್ ಸಿನಿಮಾ ಮಾಡಿ ಬಹಳ ವರ್ಷಗಳಾಗಿತ್ತು. ಹೀಗಾಗಿ ‘ಲಂಕೆ’ಯನ್ನು ಒಪ್ಪಿಕೊಂಡೆ. ಇಂಪಾದ ಹಾಡು, ಫೈಟ್ಸ್, ಕಾಮಿಡಿ, ಭಾವನೆಗಳಿಂದ ತುಂಬಿಕೊಂಡಿರುವ ಕಂಪ್ಲೀಟ್ ಪ್ಯಾಕೇಜ್ ಸಿನಿಮಾ ಇದು.
*ಚಿತ್ರಮಂದಿರಗಳಲ್ಲಿ ಶೇ 50 ಪ್ರೇಕ್ಷಕರಿಗಷ್ಟೇ ಅವಕಾಶವಿರುವಾಗ ಚಿತ್ರ ಬಿಡುಗಡೆಗೆ ನಿರ್ಧರಿಸಿದ್ದೇಕೆ?
-ಇದು ಸಂಪೂರ್ಣವಾಗಿ ನಮ್ಮ ನಿರ್ಮಾಪಕರ ನಿರ್ಧಾರ. ನಾನೂ ಅವರ ಧೈರ್ಯದ ಮೇಲೆ ನಿಂತಿದ್ದೇನೆ. ಏಕೆಂದರೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿರುತ್ತಾರೆ. ಹೀಗಿದ್ದರೂ ಚಿತ್ರಮಂದಿರಗಳಲ್ಲಿ ಕೇವಲ ಶೇ 50 ಪ್ರೇಕ್ಷಕರ ಭರ್ತಿಗೆ ಅವಕಾಶವಿದ್ದರೂ ನಾವು ಚಿತ್ರ ಬಿಡುಗಡೆ ಮಾಡುತ್ತೇವೆ ಎಂದು ಅವರು ನಿರ್ಧರಿಸಿದರೆ ಅವರ ಧೈರ್ಯ ಮೆಚ್ಚಬೇಕು. ಅವರ ನಂಬಿಕೆಯಲ್ಲಿ ನಾವು ವಿಶ್ವಾಸವಿಟ್ಟಿದ್ದೇವೆ. ‘ಈ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಬೇಡ. ಸ್ವಲ್ಪ ಯೋಚನೆ ಮಾಡಿ’ ಎಂದಷ್ಟೇ ನಾವು ಹೇಳಬಹುದು. ಆದರೆ ಆದೇಶಿಸಲು ಸಾಧ್ಯವಿಲ್ಲ. ಅವರ ನಿರ್ಧಾರಕ್ಕೆ ನನ್ನ ಅಭ್ಯಂತರವೇನಿಲ್ಲ. ವಾರಾಂತ್ಯದ ಲಾಕ್‌ಡೌನ್ ಹಾಗೂ ರಾತ್ರಿ ಕರ್ಫ್ಯೂ ಇಲ್ಲದೇ ಹೋಗಿದ್ದರೆ ಆಗಸ್ಟ್ 20ಕ್ಕೇ ಚಿತ್ರ ಬಿಡುಗಡೆಯಾಗುತ್ತಿತ್ತು.
*‘ಲಂಕೆ’ಯಲ್ಲಿನ ನಿಮ್ಮ ಪಾತ್ರದ ಬಗ್ಗೆ?
-ಪ್ರತಿಯೊಬ್ಬ ಮನುಷ್ಯನಲ್ಲೂ ರಾಮನ ಗುಣ ಇದ್ದೇ ಇರುತ್ತದೆ. ಅದೇ ರೀತಿ ರಾವಣನ ಗುಣವೂ ಇರುತ್ತದೆ. ಏಕೆ ಎಂದರೆ ಪ್ರತಿಯೊಬ್ಬರಿಗೂ ಕೋಪ ಬರುತ್ತದೆ, ಆತನೂ ಮೌನವಾಗಿರುತ್ತಾನೆ. ಆತ ಪ್ರೀತಿ ಮಾಡುವುದೂ ಸಹಜ. ಈ ಅಂಶವನ್ನೇ ಚಿತ್ರದಲ್ಲಿ ನನ್ನ ಪಾತ್ರ ಹೊಂದಿದೆ.
*‘ಹೆಡ್‌ಬುಷ್’ ಚಿತ್ರತಂಡಕ್ಕೆ ಸೇರಿಕೊಂಡಿದ್ದೀರಿ. ಇಲ್ಲಿ ಹೊಸ ಯೋಗೇಶ್ ಕಾಣಿಸಿಕೊಳ್ಳುವರೇ?
-‘ಹೆಡ್‌ಬುಷ್’ ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಾನು ಹೇಳಿದರೆ ಯಾರೂ ನಂಬುವುದಿಲ್ಲ. ಈ ಸಿನಿಮಾಗಾಗಿಯೇ ನಾನು 6–7 ಕೆ.ಜಿ.ತೂಕ ಹೆಚ್ಚಿಸಿಕೊಂಡಿದ್ದೇನೆ. ತೆರೆಯ ಮೇಲೆ ನೋಡಿದಾಗ ಅದು ಜನರ ಅನುಭವಕ್ಕೆ ಬರುತ್ತದೆ. ಪಾತ್ರದ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ. ಈಗಷ್ಟೇ ಇದರ ಚಿತ್ರೀಕರಣ ಆರಂಭವಾಗಿದೆ. ‘ಈ ಯೋಗಿಯನ್ನು ಇಷ್ಟು ವರ್ಷ ಮಿಸ್ ಮಾಡ್ಕೊಂಡಿದ್ವಿ ಗುರೂ’ ಎಂದು ಪ್ರೇಕ್ಷಕರು ಹೇಳಬೇಕು. ಆ ರೀತಿ ಈ ಚಿತ್ರದಲ್ಲಿ ನನ್ನ ಪಾತ್ರವಿದೆ. ‘ಈ ರೀತಿ ಪಾತ್ರಗಳನ್ನು ಯೋಗಿ ಮಾಡಬೇಕು’ ಎಂದು ಜನ ಹೇಳಬೇಕು. ಹಾಗಿದೆ ಈ ಪಾತ್ರ. ‘ಯೋಗಿಗೆ ತುಂಬಾ ಸಾಮರ್ಥ್ಯವಿದೆ. ಆದರೆ ಯಾರೂ ಇದನ್ನು ಉಪಯೋಗಿಸಿಕೊಂಡಿಲ್ಲ’ ಎಂದು ಎಲ್ಲರೂ ಹೇಳುತ್ತಾರೆ. ಈ ಸಿನಿಮಾದಲ್ಲಿ ನನ್ನ ಸಾಮರ್ಥ್ಯವನ್ನು ಶೇ 100ಕ್ಕೆ ನೂರು ಉಪಯೋಗಿಸಿಕೊಂಡಿದ್ದಾರೆ. ‘ಯೋಗಿ ಈ ಪಾತ್ರ ಮಾಡಿದರೆ ಹೈಲೈಟ್ ಆಗುತ್ತೆ’ ಎಂದುನಿರ್ದೇಶಕ ಶೂನ್ಯ ಹಾಗೂ ಚಿತ್ರಕಥೆ ಬರೆದ ಅಗ್ನಿ ಶ್ರೀಧರ್ ಅವರ ಮನಸ್ಸಿಗೆ ಬಂದಿದ್ದು ನನಗೆ ಖುಷಿ ನೀಡಿದೆ. ‘ಹೆಡ್‌ಬುಷ್’ ದೊಡ್ಡ ಪ್ರೊಜೆಕ್ಟ್. ಧನಂಜಯ್ ಅವರೇ ಇದರ ನಿರ್ಮಾಣ ಮಾಡುತ್ತಿದ್ದಾರೆ.
‘ದುನಿಯಾ’ದ ಲೂಸ್ ಮಾದನಿಗೂ ಈಗಿನ ಯೋಗೇಶ್‌ಗೂ ಬಹಳ ವ್ಯತ್ಯಾಸವಿದೆ. ಆಗಿನ್ನೂ ನನಗೆ 16 ವರ್ಷ. ಬಹಳ ಬಾಲಿಶವಾಗಿ ನಾನು ನಟನೆ ಮಾಡಿದ್ದೆ. ಆದರೆ ಇದೇ ಜನಕ್ಕೆ ಇಷ್ಟವಾಗಿತ್ತು. ಇದೀಗ ಹೆಡ್‌ಬುಷ್‌ನಲ್ಲಿ ನನ್ನ ನಟನೆಯ ಸಾಮರ್ಥ್ಯ ಬಹಳ ಹೆಚ್ಚಿದೆ. ಪ್ರತಿಯೊಂದು ಸಿನಿಮಾ ಮಾಡುತ್ತಾ ನಾನು ಬೆಳೆದಿದ್ದೇನೆ, ಕಲಿತಿದ್ದೇನೆ.
*ಯೋಗೇಶ್ ಅವರ ಮುಂದಿನ ಪ್ರೊಜೆಕ್ಟ್‌ಗಳು?
‘ಲಂಕೆ’ ಬಿಟ್ಟು ಮೂರು ಸಿನಿಮಾಗಳು ಬಿಡುಗಡೆಗೆ ಸಿದ್ಧ ಇವೆ. ‘ಕಿರಿಕ್ ಶಂಕರ್’, ‘ನಾನು ಅದು ಮತ್ತು ಸರೋಜ’ ಹಾಗೂ ದಯಾಳ್ ಅವರ ‘ಒಂಬತ್ತನೇ ದಿಕ್ಕು’ ಚಿತ್ರೀಕರಣ ಪೂರ್ಣಗೊಂಡಿದೆ. ವಿನೋದ್ ಪ್ರಭಾಕರ್ ಅವರ ಜೊತೆಗೆ ‘ಲಂಕಾಸುರ’ ಎನ್ನುವ ಸಿನಿಮಾ ಮಾಡುತ್ತಿದ್ದೇನೆ. ಜೊತೆಗೆ ‘ಕಂಸ’ ಎನ್ನುವ ಸಿನಿಮಾ ಒಪ್ಪಿಕೊಂಡಿದ್ದು, ಅದು ಮುಂದಿನ ವರ್ಷ ಪೂರ್ಣಗೊಳ್ಳಲಿದೆ. ಇದು ದೊಡ್ಡ ಪ್ರೊಜೆಕ್ಟ್. ಇದಲ್ಲದೇ ‘ಸಿದ್ಲಿಂಗು–2’ ಪ್ಲ್ಯಾನಿಂಗ್ ನಡೆಯುತ್ತಿದೆ. ಇದು ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಸೆಟ್ಟೇರಬಹುದು. ಆ ‘ಸಿದ್ಲಿಂಗು’ ಈ ‘ಸಿದ್ಲಿಂಗು’ ಬೇರೆಯೇ ರೀತಿ ಇರಲಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.