ಕಲಾವಿದರ ಮಕ್ಕಳು ಕಲಾವಿದರಾಗುವುದು, ನಟರ ಮಕ್ಕಳು ನಟರಾಗುವುದು ಹೊಸತೇನಲ್ಲ. ಸಿನಿಮಾ ಕ್ಷೇತ್ರದಲ್ಲಿ ತಂದೆ–ತಾಯಿಯ ಹಾದಿ ತುಳಿದು ಅದೆಷ್ಟು ನಟರು ಮಿಂಚುತ್ತಿಲ್ಲ?
ಮಾಲಿವುಡ್‌ನಲ್ಲೂ ಈಗ ಮಕ್ಕಳ ಮಹಾತ್ಮೆ. ಹಿರಿಯ ಮತ್ತು ಹೆಸರಾಂತ 12ಕ್ಕೂ ಹೆಚ್ಚು ನಟ–ನಟಿಯರ 15ಕ್ಕೂ ಹೆಚ್ಚು ಮಕ್ಕಳು ಮಲಯಾಳಂ ಸಿನಿಮಾ ರಸಿಕರ ಮನಕ್ಕೆ ಲಗ್ಗೆ ಇರಿಸಿದ್ದಾರೆ.
ನಟ ದಂಪತಿಯಾದ ಸುಕುಮಾರನ್ ಮತ್ತು ಮಲ್ಲಿಕಾ ಅವರ ಪುತ್ರರಾದ ಇಂದ್ರಜಿತ್ ಮತ್ತು ಪೃಥ್ವಿರಾಜ್, ಭರತ್ ಅವರ ಮಗ ಸಿದ್ಧಾರ್ಥ, ನಟ–ನಿರ್ದೇಶಕ, ನಿರ್ಮಾಪಕ ಶ್ರೀನಿವಾಸನ್ ಪುತ್ರರಾದ ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್, ಮಮ್ಮುಟ್ಟಿ ಪುತ್ರ ದುಲ್ಖರ್ ಸಲ್ಮಾನ್, ಮೋಹನ್‌ಲಾಲ್ ಪುತ್ರ ಪ್ರಣವ್ ಮೋಹನ್‌ಲಾಲ್ ಅವರ ಸಾಲಿನಲ್ಲಿ ಈಗ ಸುರೇಶ್ ಗೋಪಿ ಪುತ್ರ ಗೋಕುಲ್ ಸುರೇಶ್ ಗೋಪಿ ಕೂಡ ಬೆಳ್ಳಿ ತೆರೆಯಲ್ಲಿ ಮಿಂಚುತ್ತಿದ್ದಾರೆ.
ಮಕ್ಕಳ ಸಾಲಿನಲ್ಲಿ ಮೊದಲು ಹೆಸರು ಮಾಡಿದವರು ಪೃಥ್ವಿರಾಜ್ ಮತ್ತು ಇಂದ್ರಜಿತ್. ಪೃಥ್ವಿರಾಜ್ ಮೊದಲ ಸಿನಿಮಾದಿಂದಲೇ ಯುವ ಸಮುದಾಯದ ಮನಸ್ಸಿಗೆ ಲಗ್ಗೆ ಇರಿಸಿದ ನಟ. ಇಂದ್ರಜಿತ್ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದವರು.
ಈ ನಡುವೆ ವಿನೀತ್ ಶ್ರೀನಿವಾಸನ್ ರಂಗ ಪ್ರವೇಶವಾಯಿತು. ಹಾಸ್ಯ ಮಿಶ್ರಿತ ಗಂಭೀರ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ ವಿನೀತ್ ಕೂಡ ಯುವ ಸಮುದಾಯದ ಮನಸ್ಸಿಗೆ ಬೇಗನೇ ಲಗ್ಗೆ ಇರಿಸಿದರು. ಸ್ವಲ್ಪ ಕಾಲದ ನಂತರ ಧ್ಯಾನ್ ಶ್ರೀನಿವಾಸನ್ ಅವರೂ ಬಣ್ಣ ಹಚ್ಚಿದರು. ಆದರೆ ವಿನೀತ್ ಅವರಷ್ಟು ಹೆಸರು ಮಾಡಲು ಧ್ಯಾನ್‌ಗೆ ಸಾಧ್ಯವಾಗಲಿಲ್ಲ.
ಭರತನ್ ಅವರ ಪುತ್ರ ಸಿದ್ಧಾರ್ಥ್. ಕೆಲವೇ ಸಿನಿಮಾಗಳಲ್ಲಿ ಪಾತ್ರ ಮಾಡಿದ್ದ ಸಿದ್ಧಾರ್ಥ್‌ಗೆ ಹೆಚ್ಚು ಹೆಸರು ಮಾಡಲು ಆಗಲಿಲ್ಲ.
ಪ್ರಣವ್ ಮೋಹನ್‌ಲಾಲ್‌ಗೆ ಹೋಲಿಸಿದರೆ ದುಲ್ಖರ್ ಸಲ್ಮಾನ್ ಗಮನಾರ್ಹ ಸಾಧನೆ ಮಾಡಿದ್ದಾರೆ. ಉಸ್ತಾದ್ ಹೋಟೆಲ್, ಸಿಐಎ ಮುಂತಾದ ಚಿತ್ರಗಳು ಅವರನ್ನು ಎತ್ತರಕ್ಕೇರಿಸಿವೆ. ಗೋಕುಲ್ ಸುರೇಶ್ ಗೋಪಿಗೂ ನಿರೀಕ್ಷೆಗೆ ತಕ್ಕಂತೆ ಹೆಸರು ಮಾಡಲು ಆಗಲಿಲ್ಲ. ಈ ನಡುವೆ ಜಯರಾಮ್ ಅವರ ಪುತ್ರ ಕಾಳಿದಾಸ್ ಉದಯೋನ್ಮುಖ ನಟನಾಗಿ ನಿರೀಕ್ಷೆ ಮೂಡಿಸುತ್ತಿದ್ದಾರೆ.
ನಿರ್ದೇಶಕ ಫಾಸಿಲ್ ಅವರ ಪುತ್ರ ಫಹದ್ ಫಾಸಿಲ್ ತಕ್ಕ ಮಟ್ಟಿಗೆ ಹೆಸರು ಮಾಡಿದ್ದಾರೆ. ಮಹತ್ವದ ಪ್ರಶಸ್ತಿಗಳನ್ನು ಬಗಲಿಗೆ ಹಾಕಿಕೊಂಡಿದ್ದ ಗೋಪಿ ಅವರ ಪುತ್ರ ಮುರಳಿ ಗೋಪಿ ಕೂಡ ಹೆಚ್ಚು ಮಿಂಚಲಿಲ್ಲ.ಹಿರಿಯ ನಟಿ ಮೇನಕಾ ಅವರ ಪುತ್ರಿ ಕೀರ್ತಿ ಸುರೇಶ್, ಆಗಸ್ಟಿನ್ ಅವರ ಪುತ್ರಿ ಆ್ಯನ್ ಆಗಸ್ಟಿನ್, ಜಯಭಾರತಿ ಅವರ ಮಗ ಕ್ರಿಶ್ ಸಾತಾರ್ ಮುಂತಾದವರ ಪ್ರತಿಭೆ ಈಗಷ್ಟೇ ಬೆಳಕಿಗೆ ಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.