‘ತುಂಬಾ ಜೋರಾಗಿಯೇ ಇದ್ದೆ. ಅಷ್ಟೇ ಜೋರಾಗಿಯೇ ಕೆಳಗೆ ಬಿದ್ದೆ. ಜನರು ಮತ್ತೆ ಅವರ ಹೃದಯದಲ್ಲಿ ನನಗೊಂದು ಗಟ್ಟಿಯಾದ ಸ್ಥಾನ ನೀಡಿದ್ದಾರೆ. ಮುದ್ದು ಮಾಡಿ ಸ್ವೀಕರಿಸಿದ್ದಾರೆ. ಬೆಲೆ ಕಟ್ಟಲಾಗದ ಅನುಭವ ಅದು. ಪ್ರೀತಿ, ಖುಷಿಯಿಂದ ಆ ಸ್ಥಾನ ಉಳಿಸಿಕೊಂಡು ಸಾಗುವುದೇ ನನ್ನ ಜೀವನದ ಗುರಿ’
ನಟ ಶ್ರೀಮುರಳಿ ಒಂದೂವರೆ ದಶಕ ಪೂರೈಸಿದ ತಮ್ಮ ವೃತ್ತಿಬದುಕಿನ ಕ್ಷಣಗಳನ್ನು ಮೆಲುಕು ಹಾಕಿದ್ದು ಹೀಗೆ. ‘ಉಗ್ರಂ’, ‘ರಥಾವರ’ ಮತ್ತು ‘ಮಫ್ತಿ’ ಚಿತ್ರಗಳ ಯಶಸ್ಸಿನ ಬಳಿಕ ಅವರ ನಟನೆಯ ‘ಭರಾಟೆ’ ಸಿನಿಮಾವೂ ಜೋರಾಗಿಯೇ ಸದ್ದು ಮಾಡುತ್ತಿದೆ. ಈ ಮೂರು ಚಿತ್ರಗಳಲ್ಲಿ ರಗಡ್ ಲುಕ್‌ನಲ್ಲಿಯೇ ಕಾಣಿಸಿಕೊಂಡಿದ್ದ ಅವರದು ‘ಭರಾಟೆ’ಯಲ್ಲಿ ಪಕ್ಕದ ಮನೆ ಹುಡುಗನ ವರಸೆ.
‘ಹಿಂದಿನ ಚಿತ್ರಗಳಲ್ಲಿ ಆ್ಯಕ್ಷನ್ ಜಾನರ್‌ನಲ್ಲಿ ನಟಿಸಿದ್ದೆ. ಭರಾಟೆಯಲ್ಲಿ ಮನೆ ಮಗನಂತಹ ಪಾತ್ರ. ಇದರಲ್ಲಿ ನಾನು ಹೇಗೆ ಕಾಣಿಸಿಕೊಂಡಿರುವೆ, ಜನರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ನನ್ನಲ್ಲೂ ಮಡುಗಟ್ಟಿದೆ. ನಿರ್ದೇಶಕ ಚೇತನ್ ಕುಮಾರ್ ತೆರೆಯ ಮೇಲೆ ನನ್ನನ್ನು ಮುದ್ದು ಮುದ್ದಾಗಿ ತೋರಿಸಲು ಪ್ರಯತ್ನಿಸಿದ್ದಾರೆ. ಪಾತ್ರಕ್ಕೆ ತಕ್ಕಂತೆ ಕಾಸ್ಟ್ಯೂಮ್ ಇದೆ’ ಎಂದು ತಮ್ಮ ಪಾತ್ರದ ಕುರಿತು ವಿವರಿಸುತ್ತಾರೆ.
‘ಈ ಚಿತ್ರದಲ್ಲಿ ನನ್ನದು ವಿಭಿನ್ನವಾದ ಪಾತ್ರ. ಇತ್ತೀಚಿನ ಚಿತ್ರಗಳಲ್ಲಿ ಇಂತಹ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಕಥೆಯೇ ವಿಶೇಷವಾಗಿದೆ. ಒಳ್ಳೆಯ ಸಂದೇಶ ಇದೆ. ಅನ್ಯಾಯ ಗೆಲ್ಲುತ್ತದೆಯೋ, ನ್ಯಾಯ ಗೆಲ್ಲುತ್ತದೆಯೋ ಎನ್ನುವುದೇ ಇದರ ತಿರುಳು’ ಎಂದು ಮಾಹಿತಿ ನೀಡುತ್ತಾರೆ.
‘ಪಾತ್ರದ ಬಗ್ಗೆ ನನಗೆ ಕ್ಲಾರಿಟಿ ಇತ್ತು. ನಿರ್ದೇಶಕರ ಮನಸ್ಸಿನಲ್ಲೂ ನನ್ನ ಪಾತ್ರ ಹೇಗಿರಬೇಕೆಂಬ ಕಲ್ಪನೆಯಿತ್ತು. ಅದಕ್ಕೆ ತಕ್ಕಂತೆ ಜಿಮ್‌ನಲ್ಲಿ ಕಸರತ್ತು ನಡೆಸಿದೆ. ಸಂಭಾಷಣೆಯನ್ನು ಒಪ್ಪಿಸುವುದರಿಂದ ಹಿಡಿದು ಚಿತ್ರದ ಎಲ್ಲಾ ಹಂತದ ಶೂಟಿಂಗ್‌ಗೂ ಮೊದಲು ಕಾರ್ಯಾಗಾರ ನಡೆಸಿಯೇ ಅಖಾಡಕ್ಕೆ ಇಳಿದಿದ್ದೇವೆ. ಅಚ್ಚುಕಟ್ಟಾಗಿ ನನ್ನ ಕೆಲಸ ನಿರ್ವಹಿಸಿರುವ ತೃಪ್ತಿಯಿದೆ’ ಎನ್ನುವುದು ಅವರ ವಿವರಣೆ.
‘ಭರಾಟೆ’ಯ ಮೊದಲು ಹಾಡು ಬಿಡುಗಡೆಗೊಂಡಿದ್ದು ಸ್ವಿಡ್ಜರ್ಲೆಂಡ್‌ನಲ್ಲಿ. ಶ್ರೀಮುರಳಿ ಅವರೇ ಈ ಹಾಡಿಗೆ ಧ್ವನಿಯಾಗಿದ್ದಾರೆ. ಡಿಫ್ರೆಷನ್‌ಗೆ ಒಳಗಾದವರಿಗೆ ಈ ಹಾಡನ್ನು ಅರ್ಪಿಸಿದ್ದಾರೆ. ‘ಜೀವನದಲ್ಲಿ ಎಲ್ಲರೂ ಖಿನ್ನತೆಯ ಸನ್ನಿವೇಶಕ್ಕೆ ಸಿಲುಕುತ್ತಾರೆ. ನಾನೂ ಒಂದು ವಿಚಾರದಲ್ಲಿ ಖಿನ್ನತೆಗೆ ಒಳಗಾಗಿದ್ದು ಉಂಟು. ಅದನ್ನು ಡಿಫ್ರೆಷನ್ ಅನ್ನುವುದಕ್ಕಿಂತ ನನಗೆ ಆ ವೇಳೆ ‘ಯಾಕಪ್ಪ ಹೀಗೆ’ ಎನ್ನುವ ಪ್ರಶ್ನೆ ಕಾಡುತ್ತಿತ್ತು. ಅದಕ್ಕೆ ಯಾರೂ ಉತ್ತರ ಕೊಡಲಿಲ್ಲ. ಕೊನೆಗೆ, ನಾನೇ ಉತ್ತರ ಕಂಡುಕೊಂಡೆ. ದೇವರ ದಯೆ, ಅಭಿಮಾನಿಗಳ ಪ್ರೀತಿ, ಸ್ನೇಹಿತರ ಸಹಕಾರದಿಂದ ಮತ್ತೆ ಬದುಕುವ ಅವಕಾಶ ಸಿಕ್ಕಿತು’ ಎಂದು ಸ್ಮರಿಸುತ್ತಾರೆ.
‘ನಾನು ಯಾವತ್ತೂ ಜೀವನವನ್ನು ಬಿಟ್ಟುಕೊಟ್ಟಿರಲಿಲ್ಲ. ಬದುಕಬೇಕೆಂಬ ಹಟವಿತ್ತು. ಮತ್ತೊಂದೆಡೆ ಜೀವನದ ಬಗ್ಗೆ ಉತ್ಕಟ ಪ್ರೀತಿ, ಕಾಳಜಿ ಇತ್ತು. ಸಂಸಾರ, ಮಕ್ಕಳು, ತಂದೆ–ತಾಯಿ, ನನ್ನನ್ನು ನಂಬಿದ ಹುಡುಗರು, ಅಭಿಮಾನಿಗಳ ಪ್ರೀತಿ ಈಡೇರಿಸುವ ದೊಡ್ಡ ಜವಾಬ್ದಾರಿ ನನ್ನ ಹೆಗಲೇರಿತ್ತು. ಅವರೆಲ್ಲರನ್ನೂ ಮತ್ತೆ ತೃಪ್ತಿಪಡಿಸಬೇಕು ಎಂಬ ಛಲ ಹುಟ್ಟಿತು. ಆ ಛಲ, ಪ್ರೀತಿಯ ಮೂಲಕವೇ ನೋವಿನಿಂದ ಹೊರಬಂದೆ. ಸಾಧನೆಗೆ ಕೊನೆ ಎಂಬುದಿಲ್ಲ. ಪ್ರೀತಿಯಿಂದಲೇ ಸಾಧನೆಯಲ್ಲಿ ಸಾಗಿರುವೆ’ ಎಂದು ನೆನಪಿಸಿಕೊಳ್ಳುತ್ತಾರೆ.
ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾದಲ್ಲಿ ನಟಿಸುವ ಬಗ್ಗೆ ಅವರು ಹೇಳುವುದು ಹೀಗೆ: ‘ಇಂತಹ ಚಿತ್ರಗಳಲ್ಲಿ ನಟಿಸುವ ಆಸೆಯಂತೂ ಇದೆ. ಒಳ್ಳೆಯ ಕಥೆಗಾಗಿ ಕಾಯುತ್ತಿರುವೆ. ಜೊತೆಗೆ, ಉತ್ತಮ ಪಾತ್ರ ಸಿಗಬೇಕು. ಅದು ಸವಾಲಿನಿಂದ ಕೂಡಿರಬೇಕು. ನಾವು ಅಂದುಕೊಂಡ ಕಥೆಯನ್ನು ಪರದೆ ಮೇಲೆ ಅಚ್ಚುಕಟ್ಟಾಗಿ ನಿರೂಪಿಸುವ ನಿರ್ದೇಶಕ, ಅದಕ್ಕೆ ಬಂಡವಾಳ ಹೂಡುವ ನಿರ್ಮಾಪಕರೂ ಬೇಕು. ಈ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಅಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುವ ಕಾತರವೂ ನನ್ನಲ್ಲಿದೆ’ ಎನ್ನುತ್ತಾರೆ.
ಚಿತ್ರರಂಗದಲ್ಲಿ ಈಗ ಹೊಸಬರ ಪರ್ವ. ಅವರ ಪ್ರತಿಭೆ ಬಗ್ಗೆ ಶ್ರೀಮುರಳಿ ಅವರಿಗೂ ಹೆಮ್ಮೆಯಿದೆ. ‘ಬಹಳಷ್ಟು ಪ್ರತಿಭಾವಂತರು ಬರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಪ್ರತಿಯೊಂದು ವಿಭಾಗದಲ್ಲೂ ಸಾಧನೆ ಮಾಡಬೇಕು. ಕೇವಲ ನಟನೆಗಷ್ಟೇ ಸೀಮಿತವಾಗಬಾರದು. ನಿರ್ದೇಶನ, ಛಾಯಾಗ್ರಹಣದಿಂದ ಹಿಡಿದು ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಬೇಕು. ಇಲ್ಲಿ ಊಟ ಸಿಗುತ್ತದೆ. ಬದುಕುವ ಸೌಲಭ್ಯಗಳಿವೆ. ಅದನ್ನು ನಾವು ಹುಡುಕಿಕೊಳ್ಳಬೇಕು ಅಷ್ಟೇ. ಸಿನಿಮಾ ಗೌರವಯುತ ಕ್ಷೇತ್ರ. ಪ್ರೀತಿ, ಗೌರವದಿಂದ ಇಲ್ಲಿ ಕಾಯಕ ಮಾಡಬೇಕು. ಆಗಷ್ಟೇ ಬಹುಕಾಲದವರೆಗೆ ಇಲ್ಲಿರಬಹುದು’ ಎಂದು ಯಶಸ್ಸಿನ ಗುಟ್ಟು ಹೇಳುತ್ತಾರೆ.
ಅಣ್ಣ ವಿಜಯ್ ರಾಘವೇಂದ್ರ ಅವರೊಟ್ಟಿಗೆ ನಟಿಸುವ ಆಸೆಯೂ ಅವರಿಗೆ ಇದೆಯಂತೆ. ‘ನಾನು ಮತ್ತು ಅಣ್ಣ ‘ಮಿಂಚಿನ ಓಟ’ ಚಿತ್ರದಲ್ಲಿ ನಟಿಸಿದ್ದೇವೆ. ಅವರು ಅವರದ್ದೇ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ನಾನು ನನ್ನ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವೆ. ಒಳ್ಳೆಯ ಕಥೆ ಬಂದರೆ ಒಟ್ಟಾಗಿ ನಟಿಸುತ್ತೇವೆ. ಸದ್ಯಕ್ಕಂತೂ ಆ ತರಹ ಪ್ಲಾನ್ ಇಲ್ಲ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.