ಬೆಂಗಳೂರು: ನಟಿ, ನಿರೂಪಕಿ ಅಪರ್ಣಾ ವಸ್ತಾರೆ(57) ಗುರುವಾರ ರಾತ್ರಿ ನಿಧನರಾದರು. ಅವರಿಗೆ ಪತಿ ನಾಗರಾಜ ವಸ್ತಾರೆ ಇದ್ದಾರೆ.
ಕಳೆದ ಎರಡು ವರ್ಷದ ಹಿಂದೆ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ದೃಢಪಟ್ಟಿತ್ತು. ಇದೇ ಫೆಬ್ರುವರಿ ಬಳಿಕ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.
ಸಿನಿಮಾ ತಾರೆಯಾಗಿ ವೃತ್ತಿ ಬದುಕು ಆರಂಭಿಸಿದ್ದ ಅಪರ್ಣಾ ನಿರೂಪಣೆಯಲ್ಲಿ ಪ್ರಸಿದ್ಧಿ ಪಡೆದಿದ್ದರು.
‘ಮಸಣದ ಹೂವು’ ಚಿತ್ರದ ಮುಖಾಂತರ ಬೆಳ್ಳಿತೆರೆಗೆ ಕಾಲಿಟ್ಟ ಅಪರ್ಣಾ ‘ಇನ್‌ಸ್ಪೆಕ್ಟರ್ ವಿಕ್ರಂ’ ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.
‘ಮೂಡಲಮನೆ’, ‘ಮುಕ್ತ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಅಪರ್ಣಾ, ಕಿರುತೆರೆಯಲ್ಲಿ ನಿರೂಪಕಿಯಾಗಿ ಮಿಂಚಿದವರು. ರೇಡಿಯೊಗಳಲ್ಲಿ ಹಲವು ಕಾರ್ಯಕ್ರಮಗಳಿಗೆ ಧ್ವನಿಯಾಗಿದ್ದ ಅಪರ್ಣಾ, ನಮ್ಮ ಮೆಟ್ರೋ ರೈಲಿನಲ್ಲಿ ಬರುವ ಘೋಷಣೆಗಳಿಗೂ ಧ್ವನಿಯಾಗಿದ್ದಾರೆ. 2013ರಲ್ಲಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿದ್ದ ಅವರು, ‘ಮಜಾ ಟಾಕೀಸ್’ ಎಂಬ ಕಿರುತೆರೆ ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದರು.
ಸ್ಪಷ್ಟ ಕನ್ನಡದಲ್ಲಿ ನಿರೂಪಣೆ ಮಾಡುವ ಮೂಲಕ ಅಪರ್ಣಾ ಎಲ್ಲರ ಮನಗೆಲ್ಲುತ್ತಿದ್ದರು. ಚಂದನ ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳನ್ನೂ ಅಪರ್ಣಾ ನಿರೂಪಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಾಲ್ಯ ಕಳೆದ ಅಪರ್ಣಾ, ಕುಮಾರಪಾರ್ಕ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಎಂಇಎಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು.
ಶಿಕ್ಷಣ ಪಡೆಯುವ ವೇಳೆಗೆ ಅಪರ್ಣಾ ಅವರಿಗೆ ಸಿನಿಮಾದಲ್ಲಿ ಅವಕಾಶ ಲಭಿಸಿತ್ತು. ಅಪರ್ಣಾ ಅವರ ತಂದೆ ಕೆ.ಎಸ್.ನಾರಾಯಣ ಸ್ವಾಮಿ ಸಿನಿಮಾ ಪತ್ರಕರ್ತರಾಗಿದ್ದರು. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ನಾರಾಯಣಸ್ವಾಮಿ ಅವರ ಬಳಿ ಬಂದು ಅಪರ್ಣಾಗೆ ನಾಯಕಿಯ ಪಾತ್ರ ನೀಡುವುದಾಗಿ ಹೇಳಿದ್ದರಂತೆ. ಹೀಗೆ ಅಪರ್ಣಾ ಅವರಿಗೆ ‘ಮಸಣದ ಹೂವು’ ಚಿತ್ರದಲ್ಲಿ ಅವಕಾಶ ದೊರಕಿತ್ತು.
1993ರಿಂದ 2010ರವರೆಗೆ ಆಕಾಶವಾಣಿ, ಎಫ್‌ಎಂನಲ್ಲಿ ಉದ್ಘೋಷಕಿಯಾಗಿ, ಆರ್‌ಜೆಯಾಗಿ ಕೆಲಸ ಮಾಡಿದ್ದ ಅಪರ್ಣಾ, ಟಿ.ಎನ್.ಸೀತಾರಾಂ ಅವರ ‘ಮುಕ್ತ’ ಧಾರಾವಾಹಿಯ ಶೀಲಾ ದೀಕ್ಷಿತ್ ಪಾತ್ರದಿಂದ ನಟಿಯಾಗಿ ಜನರ ಮನಸ್ಸಿನಲ್ಲಿ ಉಳಿದರು. ಸಿನಿಮಾ, ಧಾರಾವಾಹಿ, ದೂರದರ್ಶನ ನಿರೂಪಣೆ, ಆಕಾಶವಾಣಿ, ವೇದಿಕೆ ಕಾರ್ಯಕ್ರಮ ಹೀಗೆ ಎಲ್ಲ ಮಾಧ್ಯಮಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದರು ಅಪರ್ಣಾ.
‘ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗನೇ ಅಗಲಿರುವುದು ದುಃಖದ ಸಂಗತಿ. ಅಪರ್ಣಾ ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ‘ಎಕ್ಸ್’ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.