‘ಕ್ರೇಜಿ ಬಾಯ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ಆಶಿಕಾ ರಂಗನಾಥ್. ಅವರು ಬಣ್ಣದಲೋಕ ಪ್ರವೇಶಿಸಿದ ಹಿಂದೆ ಒಂದು ಕುತೂಹಲದ ಕಥೆಯಿದೆ. ಬೆಂಗಳೂರಿನಲ್ಲಿ ನಡೆದ ‘ಫ್ರೆಶ್‌ಫೇಸ್’ ಸ್ಪರ್ಧೆಯಲ್ಲಿ ಅವರು ರನ್ನರ್‌ಅಫ್ ಆಗಿದ್ದರು. ಅವರ ಫೋಟೊಗಳು ಹೇಗೊ ನಿರ್ದೇಶಕರಿಗೆ ತಲುಪಿದವಂತೆ. ಆಗ ಅವರು ಸಿನಿಮಾದಲ್ಲಿ ನಟಿಸಲು ಆಶಿಕಾ ಮುಂದೆ ಕೋರಿಕೆ ಮುಂದಿಟ್ಟರಂತೆ.
ಪ್ರಸ್ತುತ ಅವರ ಕೈಯಲ್ಲಿ ರಾಶಿ ರಾಶಿ ಸಿನಿಮಾಗಳಿವೆ. ‘ಗರುಡ’, ‘ಅವತಾರ ಪುರುಷ’, ‘ರೆಮೊ’ ಮತ್ತು ‘ರಂಗಮಂದಿರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಹೆಸರಿಡದೆ ಪಿ.ಸಿ. ಶೇಖರ್ ನಿರ್ದೇಶನದ ಹೊಸ ಚಿತ್ರಕ್ಕೂ ಅವರೇ ನಾಯಕಿ.
ಈ ನಡುವೆಯೇ ‘ಹೆಸರಾಂತ ಸ್ಟಾರ್‌ನಟಿಯೊಬ್ಬರು ನಮ್ಮ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆ ನಟಿ ಯಾರಿರಬಹುದೆಂದು ಊಹಿಸಿ’ ಎಂದು ಹೀರೊಯಿನ್ ಮುಖ ಕಾಣದಂತೆ ಹಿಂದಿನಿಂದ ಕ್ಲಿಕ್ಕಿಸಿದ ಫೋಟೊ ಇರುವ ಪೋಸ್ಟರ್ ಅನ್ನು ‘ಮದಗಜ’ ಚಿತ್ರದ ನಿರ್ದೇಶಕ ಎಸ್. ಮಹೇಶ್‌ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟರ್ ವೈರಲ್ ಆಗಿತ್ತು.
ನಟನೆಯಲ್ಲಿ ಸಾಕಷ್ಟು ಪಳಗಿರುವ ಆಶಿಕಾ ಅವರಿಗೆ ನಟ ಶ್ರೀಮರಳಿ ನಾಯಕನಾಗಿರುವ ‘ಮದಗಜ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಒಲಿದುಬಂದಿದೆ. ರಚಿತಾ ರಾಮ್, ಅನುಪಮಾ ಪರಮೇಶ್ವರನ್ ಮತ್ತು ಶ್ರೀನಿಧಿ ಶೆಟ್ಟಿ ಅವರನ್ನು ಹಿಂದಿಕ್ಕೆ ಆಶಿಕಾ ‘ಮದಗಜ’ನಿಗೆ ಮದನಾರಿಯಾಗಿ ಒಲಿದಿದ್ದಾರೆ. ಫೆ. 20ರಂದು ವಾರಾಣಸಿಯಲ್ಲಿ ಚಿತ್ರ ಸೆಟ್ಟೇರಲಿದೆ. ಮಾರನೇ ದಿನವಾದ ಶಿವರಾತ್ರಿಯಂದು ಮೊದಲ ಹಂತದ ಶೂಟಿಂಗ್ ಶುರುವಾಗಲಿದೆ.
ಆಶಿಕಾ ಸಂಪ್ರದಾಯಸ್ಥ ಹುಡುಗಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ, ಶರಣ್ ಜೊತೆಗೆ ನಟಿಸಿದ ‘ರ‍್ಯಾಂಬೊ 2’ ಚಿತ್ರದಲ್ಲಿನ ಅವರ ಬೋಲ್ಡ್ ಹುಡುಗಿಯ ಅವತಾರ ಪಡ್ಡೆಹುಡುಗರ ನಿದ್ದೆಕೆಡಿಸಿತ್ತು. ಇದರಲ್ಲಿ ಅವರು ಕಾಸ್ಟೂಮ್‌ನಿಂದ ಹಿಡಿದು ನಟನೆವರೆಗೂ ಬದಲಾವಣೆ ಮಾಡಿಕೊಂಡಿದ್ದರು.
‘ಮದಗಜ’ ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ನಿರ್ದೇಶಕರು ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ದಾವಣಿ ತೊಟ್ಟು, ಹೆಗಲ ಮೇಲೆ ಸಲಿಕೆ ಹಿಡಿದು ಅಶಿಕಾ ನೀಡಿರುವ ಭಂಗಿಯಂತೂ ಸೊಗಸಾಗಿದೆ. ಶ್ರೀಮುರಳಿ ಮತ್ತು ಈ ಮೂಗುತಿ ಸುಂದರಿಯ ಕೆಮಿಸ್ಟ್ರಿ ತೆರೆಯ ಮೇಲೆ ಹೇಗೆಲ್ಲಾ ಇರಲಿದೆ ಎಂಬ ಲೆಕ್ಕಾಚಾರದಲ್ಲಿ ಅವರ ಅಭಿಮಾನಿಗಳು ಮುಳುಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.