ADVERTISEMENT

ಬ್ಯೂಟಿ ಸೀಕ್ರೆಟ್‌ ಬಿಚ್ಚಿಟ್ಟ ‘ಚಿನ್ನು’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 19:30 IST
Last Updated 19 ಏಪ್ರಿಲ್ 2020, 19:30 IST
ನಟಿ ಕವಿತಾ ಗೌಡ
ನಟಿ ಕವಿತಾ ಗೌಡ   

ಸಹಜ ನಟನೆಯಿಂದ ಕಿರುತೆರೆ ವೀಕ್ಷಕರ ಮನಗೆದ್ದಿದ್ದ ನಟಿ ಕವಿತಾಗೌಡ ಚಿತ್ರರಂಗದಲ್ಲೂ ಅದೇ ಮೋಡಿ ಮುಂದುವರಿಸುವ ಭರವಸೆಯಲ್ಲಿದ್ದಾರೆ.

‘ಲಕ್ಷ್ಮಿ ಬಾರಮ್ಮ’ ಮತ್ತು ‘ವಿದ್ಯಾ ವಿನಾಯಕ’ ಧಾರಾವಾಹಿ ನೋಡುತ್ತಿದ್ದವರಿಗೆ ಕವಿತಾ ‘ಚಿನ್ನು’ ಆಗಿ ಚಿರಪರಿಚಿತೆ.ಸಹಸ ಸೌಂದರ್ಯ ಮತ್ತು ನೀಳಕೇಶರಾಶಿಯಿಂದಲೂ ಈ ‘ಚಿನ್ನು’ ಫ್ಯಾಷನ್‌ಪ್ರಿಯ ಮಹಿಳಾಮಣಿಯರಿಗೂ ಕಣ್ಮಣಿ.

ಕವಿತಾಗೌಡ ತಮ್ಮ ಬ್ಯೂಟಿ ಮತ್ತು ವರ್ಕೌಟ್‌ ಸೀಕ್ರೆಟ್‌ ಬಗ್ಗೆ ‘ಪ್ರಜಾಪ್ಲಸ್‌‘ ಜತೆಗೆ ಹಲವು ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

‘ಎಲ್ಲರೂ ನನ್ನ ಮುಖದ ಕಾಂತಿಮತ್ತು ಕೇಶರಾಶಿಯ ಬಗ್ಗೆಯೇ ಕೇಳುತ್ತಾರೆ.ದೇವರ ದಯೆಯಿಂದ ಅದು ಸಿಕ್ಕಿದೆ. ನನ್ನ ಆರೋಗ್ಯ ಮತ್ತು ಊಟದ ಬಗ್ಗೆ ಅಮ್ಮ ಕಾಳಜಿ ವಹಿಸುತ್ತಾರೆ.ಊಟ ಸರಿಯಾಗಿ ತಿಂದರೆ ಆರೋಗ್ಯ ಚೆನ್ನಾಗಿರುತ್ತದೆ ಎನ್ನುವುದು ನನ್ನ ನಂಬಿಕೆ’ ಎಂದು ಅವರು ಮಾತು ವಿಸ್ತರಿಸಿದರು.

‘ನನಗೂ ಕಾಲೇಜು ದಿನಗಳಲ್ಲಿ ಮುಖದ ತುಂಬಾ ಪಿಂಪಲ್ಸ್‌ ಆಗಿ, ಕಾಲೇಜಿಗೆ ಹೋಗುವುದಿಲ್ಲವೆಂದು ಹಠಹಿಡಿದಿದ್ದೆ. ಹರೆಯಕ್ಕೆ ಕಾಲಿಟ್ಟಾಗ ಪಿಂಪಲ್ಸ್‌ ಸಹಜವೆಂದುನಮ್ಮ ಕುಟುಂಬದ ಡಾಕ್ಟರ್‌ ಒಂದೆರಡು ಕ್ರೀಮ್‌ ಕೊಟ್ಟರು. ಆ ನಂತರ ಆ ಸಮಸ್ಯೆ ಸರಿಹೋಯಿತು.ನನ್ನದು ಡ್ರೈ ಸ್ಕಿನ್‌.ನಾರ್ಮಲ್‌ ಆಗಿ ಮುಖ ತೊಳೆಯುತ್ತೇನೆ. ಕ್ರೀಮ್‌ ಹಚ್ಚುತ್ತೇನೆ ಅಷ್ಟೆ. ಇನ್ನು ನಾನು ಮಾತ್ರೆ ಸೇವಿಸುವುದಿಲ್ಲ. ಅದು ಮಾತ್ರೆ ತೆಗೆದುಕೊಂಡರೆ ತಲೆ ನೋವಿಗೆ ಮಾತ್ರ. ಜ್ವರ, ನೆಗಡಿ, ಬಾಡಿ ಪೇನ್‌ ಅನ್ನು ಮಾತ್ರೆ ತೆಗೆದುಕೊಳ್ಳದೆ ನೈಸರ್ಗಿಕವಾಗಿಯೇ ಗುಣಪಡಿಸಿಕೊಳ್ಳುತ್ತೇನೆ’ ಎಂದು ಸೌಂದರ್ಯ ಮತ್ತು ಆರೋಗ್ಯದ ಸೀಕ್ರೆಟ್‌ ಬಿಚ್ಚಿಟ್ಟರು.

ಫಿಟ್ನೆಸ್‌ ಬಗ್ಗೆ ಮಾತು ತಿರುಗಿದಾಗ, ‘ಮನೆಯಲ್ಲಿ ಫಿಟ್ನೆಸ್‌ ಸಾಧಿಸುವುದು ಕಷ್ಟ. ಈಗಿನ ಸಂದರ್ಭದಲ್ಲಿ ಮುಕ್ಕಾಲು ಗಂಟೆ ಜುಂಬಾ ಮಾಡಿದರೆ, ಒಂದು ಗಂಟೆ ಮ್ಯಾಟ್‌ ಮೇಲೆ ವರ್ಕೌಟ್‌ ಮಾಡುತ್ತೇನೆ. ಮಧ್ಯೆ ಮಧ್ಯೆ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ಈಗ ಅನಿಮಲ್‌ ವರ್ಕೌಟ್‌ (ಯೂಟ್ಯೂಬ್‌ನಲ್ಲಿ ವಿಡಿಯೊ ಸಿಗುತ್ತವೆ) ಆರಂಭಿಸಿದ್ದೇನೆ. ಇದು ದೇಹ ಸದೃಢಗೊಳಿಸಿಕೊಳ್ಳಲು ತುಂಬಾ ಸಹಕಾರಿ.ಇದು ತುಂಬಾ ಕಷ್ಟದ ವರ್ಕೌಟ್‌. ಆದರೆ, ತುಂಬಾ ಚೆನ್ನಾಗಿದೆ. ತೋಳ್ಬಲ ಹೆಚ್ಚಿಸಲು ಉಪಯುಕ್ತ’ ಎನ್ನುವುದು ಅವರ ಅನಿಸಿಕೆ.

ಇನ್ನು ಕಳೆದ ವರ್ಷ ತೆರೆಕಂಡ ‘ಗುಬ್ಬಿಮೇಲೆ ಬ್ರಹ್ಮಾಸ್ತ್ರ’ ಚಿತ್ರದಲ್ಲಿ ರಾಜ್‌ಶೆಟ್ಟಿಗೆ ನಾಯಕಿಯಾಗಿ ನಟಿಸಿದ್ದ ಇವರು ಪ್ರೇಕ್ಷಕರನ್ನು ರಂಜಿಸುವಲ್ಲಿ ಹಿಂದೆ ಬೀಳಲಿಲ್ಲ.ದಿಗಂತ್‌ ನಾಯಕನಾಗಿ ನಟಿಸಿರುವ‘ಹುಟ್ಟುಹಬ್ಬದ ಶುಭಾಷಯಗಳು’ ಮತ್ತು ಸುಮಂತ್‌ ಶೈಲೇಂದ್ರ ನಾಯಕನಾಗಿರುವ ‘ಗೋವಿಂದ ಗೋವಿಂದ’ ಚಿತ್ರಗಳಲ್ಲಿ ಕವಿತಾ ನಾಯಕಿಯಾಗಿ ನಟಿಸಿದ್ದಾರೆ.ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ಬಿಡುಗಡೆ ವಿಳಂಬವಾಗಿವೆ.

ಕನ್ನಡದಲ್ಲಿ ಇನ್ನೊಂದು ಹೆಸರಿಡದ ಹೊಸ ಚಿತ್ರದಲ್ಲಿ ಕವಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ನಿರ್ದೇಶಕರು ಮತ್ತು ನಾಯಕ ಇಬ್ಬರೂ ಹೊಸಬರೇ. ಚಿತ್ರದ ಕಥೆ ನಾಯಕನದೇ. ಚಿತ್ರದ ಅರ್ಧಭಾಗ ಈಗಾಗಲೇ ಚಿತ್ರೀಕರಣವಾಗಿದೆ. ಲಾಕ್‌ಡೌನ್‌ನಿಂದಾಗಿ ಉಳಿದರ್ಧ ಚಿತ್ರೀಕರಣ ಸ್ಥಗಿತಗೊಂಡಿದೆ.

ಸೀರಿಯಲ್‌ಗೆ ಮತ್ತೆ ಬರಲ್ವಾ ಎಂದರೆ, ‘ನನಗೆ ನಟನೆ ಎಂದರೆ ತುಂಬಾ ಇಷ್ಟ. ಎಲ್ಲಿದ್ದರೂ ನಾನು ನಟಿಯೇ. ಧಾರಾವಾಹಿಗೆ ತುಂಬಾ ಸಮಯ ಕೊಡಬೇಕಾಗುತ್ತದೆ. ಸಮಯ ಕೊಡಲು ಆಗದೆ, ನಾನು ಸೀರಿಯಲ್‌ ಮಾಡುತ್ತಿಲ್ಲ ಅಷ್ಟೇ’ ಎಂದರು.

ಕ್ವಾರಂಟೈನ್‌ ಕಡೆಗೆ ಮಾತು ಹೊರಳಿದಾಗ, ‘ವರ್ಕೌಟ್‌, ಅಡುಗೆ ತಯಾರಿ, ಸ್ಕ್ರಿಪ್ಟ್‌ ಓದು ಹಾಗೂ ಕುಟುಂಬದ ಜತೆ ಸಮಯ ಕಳೆಯುತ್ತಿದ್ದೇನೆ’ ಎನ್ನಲು ಅವರು ಮರೆಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.