ನವದೆಹಲಿ: ಶಾರುಖ್ ಖಾನ್ ನಟನೆಯ ಜವಾನ್ ಚಿತ್ರದಲ್ಲಿ ನಟಿಸಿದ್ದ ನಯನತಾರಾ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾದ ಬೆನ್ನಲ್ಲೇ ಅವರು ಇದೀಗ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ.
ತಮ್ಮದೇ ಆದ ತ್ವಚೆ ಆರೈಕೆ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಕುರಿತು ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ಚಿತ್ರಗಳು ಹೇಳುತ್ತಿವೆ. ‘ತ್ವಚೆಯ ಸ್ವಂತ ಆರೈಕೆಯಲ್ಲಿ ಶುದ್ಧ ಪದಾರ್ಥಗಳಿರಲಿ ಎಂದು ನಾವೆಲ್ಲರೂ ಬಯಸುತ್ತೇವೆ. ಇನ್ನಷ್ಟು ಮಾಹಿತಿಗಾಗಿ ನಿರೀಕ್ಷಿಸಿ’ ಎಂದು ಬರೆದುಕೊಂಡಿದ್ದಾರೆ.
‘9 ಸ್ಕಿನ್’ ಎಂಬ ಶೀರ್ಷಿಕೆಯ ತ್ವಚೆ ಆರೈಕೆ ಉತ್ಪನ್ನಗಳನ್ನು ಘೋಷಿಸಿರುವ ನಯನತಾರಾ, ಅದನ್ನು ಸೆ. 29ರಂದು ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ.
‘ಕಳೆದ ಆರು ವರ್ಷಗಳ ನಿರಂತರ ಪ್ರಯತ್ನದ ಹಾಗೂ ಪ್ರೀತಿಯ ಫಲವನ್ನು ಘೋಷಿಸಲು ಕುತೂಹಲಭರಿತನಾಗಿದ್ದೇನೆ. ಈ ಉತ್ಪನ್ನಗಳನ್ನು ಸಿದ್ಧಪಡಿಸುವಲ್ಲಿ ನಾವು ನಮ್ಮ ಹೃದಯಾಳದ ಪ್ರೀತಿಯನ್ನೇ ಎರೆದಿದ್ದೇವೆ. ಆಧುನಿಕ ವಿಜ್ಞಾನ ಮತ್ತು ನೈಸರ್ಗಿಕ ಉತ್ಪನ್ನಗಳ ಬಳಕೆಯಿಂದಾಗಿ ಇದೊಂದು ಅದ್ಭುತ ತ್ವಚೆ ಆರೈಕೆಯ ಉತ್ಪನ್ನವಾಗಿದೆ. ಇದರಲ್ಲಿ ನ್ಯಾನೊ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳಲಾಗಿದೆ. ಈ ಉತ್ಪನ್ನ ಬಳಸಿದಲ್ಲಿ ನಿಮ್ಮ ತ್ವಚೆಯ ಮೋಹಿಗಳು ನೀವೇ ಆಗುತ್ತೀರಿ’ ಎಂದು ಬರೆದುಕೊಂಡಿದ್ದಾರೆ.
ತಮ್ಮ ಉತ್ಪನ್ನಕ್ಕೆ ತಾವೇ ರೂಪದರ್ಶಿಯಾಗಿ ಫೋಟೊಶೂಟ್ ಮಾಡಿಸಿಕೊಂಡಿರುವ ನಯನತಾರಾ, ಅದನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಶೀಘ್ರದಲ್ಲಿ ಹೊಸತೊಂದು ವಿಶೇಷ ಸುದ್ದಿ ನೀಡುವುದಾಗಿ ಕೆಲ ದಿನಗಳ ಹಿಂದೆ ತಮ್ಮ ಒಂದು ಪೋಸ್ಟ್‌ನಲ್ಲಿ ಅವರು ಬರೆದುಕೊಂಡಿದ್ದರು. ಇದು ಅವರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿತ್ತು.
ಜವಾನ್ ಚಿತ್ರದ ಮೂಲಕ ಇನ್‌ಸ್ಟಾಗ್ರಾಮ್ ಪ್ರವೇಶಿಸಿರುವ ನಯನತಾರಾ ಅವರು, ಅದೇ ಚಿತ್ರದ ಹಾಡನ್ನು ಗುನುಗುತ್ತಾ ತನ್ನ ಇಬ್ಬರು ಮಕ್ಕಳು ಉಯಿರ್ ಮತ್ತು ಉಲಗಂ ಜತೆ ಪ್ರವೇಶ ಪಡೆಯುವ ವಿಡಿಯೊ ಸಾಕಷ್ಟು ಸದ್ದು ಮಾಡಿತ್ತು. ‘ನಾನು ಬಂದಿದ್ದೀನಿ ಎಂದು ಹೇಳಿ’ ಎಂಬ ಒಕ್ಕಣೆಯೂ ಅದರೊಂದಿಗಿತ್ತು.
ಈವಾರದ ಐಎಂಡಿಬಿ ಪಟ್ಟಿಯಲ್ಲಿ ಭಾರತದ ಸೆಲೆಬ್ರೆಟಿಗಳಲ್ಲಿ ನಯನತಾರಾ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಶಾರುಖ್ ಖಾನ್ ಹಾಗೂ ನಿರ್ದೇಶಕ ಅಟ್ಲಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.