ADVERTISEMENT

ಲಾಕ್‌ಡೌನ್‌ನಲ್ಲಿ ಸದ್ದಿಲ್ಲದೇ ವಿವಾಹವಾದ ನಟಿ ಪ್ರಣೀತಾ

ಏಜೆನ್ಸೀಸ್
Published 31 ಮೇ 2021, 9:59 IST
Last Updated 31 ಮೇ 2021, 9:59 IST
ಪ್ರಣೀತಾ ಸುಭಾಷ್- ನಿತಿನ್ ರಾಜು. ಚಿತ್ರ: mr._gvs Instagram
ಪ್ರಣೀತಾ ಸುಭಾಷ್- ನಿತಿನ್ ರಾಜು. ಚಿತ್ರ: mr._gvs Instagram   

ಬೆಂಗಳೂರು: ತೆಲುಗಿನ ‘ಪೊಕರಿ’ ಚಿತ್ರದ ಕನ್ನಡ ಅವತರಣಿಕೆ ‘ಪೊರ್ಕಿ’ ಚಿತ್ರದ ಮುಖಾಂತರ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರಿಗೆ ನಾಯಕಿಯಾಗಿ ಚಂದನವನಕ್ಕೆ ಕಾಲಿಟ್ಟಿದ್ದ ನಟಿ ಪ್ರಣೀತಾ ಸುಭಾಷ್‌, ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಭಾನುವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಉದ್ಯಮಿ ನಿತಿನ್ ರಾಜು ಅವರ ಜೊತೆ ಹಸೆಮಣೆ ಏರಿದ್ದಾರೆ. ಬೆಂಗಳೂರು ಹೊರವಲಯದಲ್ಲಿನ ರೆಸಾರ್ಟ್‌ ಒಂದರಲ್ಲಿ ಮದುವೆ ಸಮಾರಂಭ ನಡೆದಿದ್ದು, ಕುಟುಂಬದ ಆಪ್ತರು ಹಾಗೂ ಆಪ್ತ ಸ್ನೇಹಿತರಷ್ಟೇ ಭಾಗವಹಿಸಿದ್ದರು. ಮದುವೆಯ ನಂತರ ಈ ವಿಚಾರವನ್ನು ಸ್ವತಃ ಪ್ರಣೀತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರುವ ಪ್ರಣೀತಾ, ‘ನಾನು ಹಾಗೂ ನಿತಿನ್‌ ಮೇ 30ರಂದು ಕುಟುಂಬದ ತೀರಾ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದೇವೆ ಎನ್ನುವುದನ್ನು ತಿಳಿಸಲು ಸಂತೋಷಪಡುತ್ತೇನೆ. ನಮ್ಮ ಮದುವೆಯ ದಿನಾಂಕವನ್ನು ತಿಳಿಸದೇ ಇದ್ದ ಕಾರಣಕ್ಕೆ ನಿಮ್ಮ ಕ್ಷಮೆ ಕೋರುತ್ತೇವೆ. ಏಕೆಂದರೆ, ಪ್ರಸ್ತುತ ಇರುವಂತಹ ಕೋವಿಡ್‌ನ ಈ ನಿರ್ಬಂಧದ ಪರಿಸ್ಥಿತಿಯಲ್ಲಿ ಮದುವೆಯ ಹಿಂದಿನ ದಿನದವರೆಗೂ ಯಾವಾಗ ಮದುವೆ ನಡೆಯುತ್ತದೆ ಎನ್ನುವುದು ನಮಗೇ ತಿಳಿದಿರಲಿಲ್ಲ. ನಮ್ಮ ಮದುವೆ ದಿನಾಂಕದ ಬಗ್ಗೆ ಸುದೀರ್ಘವಾದ ಅನಿಶ್ಚಿತತೆಯಲ್ಲಿ ನಿಮ್ಮನ್ನು ಇರಿಸಲು ನಮಗೆ ಇಷ್ಟವಿರಲಿಲ್ಲ. ಈ ವಿಶೇಷ ದಿನದಂದು ನಮ್ಮ ಪ್ರೀತಿಪಾತ್ರರೆಲ್ಲರೂ ನಮ್ಮ ಜೊತೆಗೆ ಇರಬೇಕಿತ್ತು ಎನ್ನುವ ಆಸೆ ನಮಗೂ ಇತ್ತು. ಆದರೆ ಕ್ಷಮೆ ಇರಲಿ. ಕೋವಿಡ್‌ನ ಈ ಪರಿಸ್ಥಿತಿ ತಿಳಿಯಾದ ಬಳಿಕ ನಿಮ್ಮೆಲ್ಲರ ಜೊತೆಗೂಡಿ ಸಂಭ್ರಮವನ್ನು ಆಚರಿಸೋಣ’ ಎಂದು ಹೇಳಿದ್ದಾರೆ.

ADVERTISEMENT

ಪ್ರಣೀತಾಗೆ ನಟಿ ರಮ್ಯಾ ಸೇರಿದಂತೆ ಸಾವಿರಾರು ಜನರು ಶುಭಕೋರಿದ್ದಾರೆ. ಚಂದನವನದಲ್ಲಿ ತಮ್ಮ ಬಣ್ಣದ ಲೋಕದ ಪಯಣ ಆರಂಭಿಸಿದ್ದ ನಟಿ ಮಿಂಚಿದ್ದು ಮಾತ್ರ ಟಾಲಿವುಡ್‌ನಲ್ಲಿ. 2010ರಲ್ಲಿ ಟಾಲಿವುಡ್‌ಗೆ ಕಾಲಿಟ್ಟ ಪ್ರಣೀತಾ, 2011ರಲ್ಲಿ ಕಾಲಿವುಡ್‌ಗೂ ಪ್ರವೇಶಿಸಿದ್ದರು. ಪವನ್‌ ಕಲ್ಯಾಣ್ ಅವರ ಜೊತೆ ನಟಿಸಿದ ‘ಅತ್ತಾರೆಂಟಿಕಿ ದಾರೇದಿ’ ಪ್ರಣೀತಾಗೆ ಮತ್ತಷ್ಟು ಖ್ಯಾತಿ ತಂದಿತ್ತು. ‘ಉದಯನ್‌’ ಚಿತ್ರದ ಮೂಲಕ ತಮಿಳಿಗೂ ಲಗ್ಗೆಯಿಟ್ಟರು. ಕನ್ನಡದಲ್ಲಿ ‘ಜರಾಸಂಧ’, ‘ಬ್ರಹ್ಮ’, ‘ಭೀಮಾ ತೀರದಲ್ಲಿ’, ‘ಮಾಸ್‌ ಲೀಡರ್‌’ ಮುಂತಾದವು ಪ್ರಣೀತಾ ನಟನೆಯ ಪ್ರಮುಖ ಚಿತ್ರಗಳು. ಹೀಗೆ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಅವರು ನಿರಂತರವಾಗಿ ನಟಿಸುತ್ತಲೇ ಬಂದಿದ್ದಾರೆ. ಕಳೆದ ವರ್ಷ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿರುವ ಪ್ರಣೀತಾ,‘ಹಂಗಾಮ’ ಚಿತ್ರದ ಸರಣಿಯಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಾಗಿದೆ.

‘ಮಸ್ಸೂ ಎಂಗಿರಾ ಮಸಿಲಮಣಿ’, ‘ಏಂ ಪಿಲ್ಲೋ ಏನ್‌ ಪಿಲ್ಲಾಡೋ’, ‘ಏನಕ್ಕು ವೈಥಾ ಅದಿಮೈಗಲ್‌’, ‘ಸಾಗುನಿ’, ‘ಹಲೋ ಗುರು ಪ್ರೇಮಕೋಸಮೆ’, ‘ಪಾಂಡವುಲು ಪಾಂಡವುಲು ತುಮ್ಮೇದ’, ‘ರಭಸ’, ‘ಮಾಸ್’, ‘ಬ್ರಹ್ಮೋತ್ಸವಂ’ ಹೀಗೆ ಟಾಲಿವುಡ್‌, ಕಾಲಿವುಡ್‌ನಲ್ಲಿ ಪ್ರಣೀತಾ ನಟಿಸಿದ ಸಿನಿಮಾಗಳ ಪಟ್ಟಿ ನೋಡಿದರೆ ಅವರಿಗಿರುವ ಬೇಡಿಕೆ ತಿಳಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.