ನಟಿ ಪ್ರೇಮಾ ಈಗ ಹಿನ್ನೆಲೆ ಗಾಯಕಿಯಾಗಿದ್ದಾರೆ. ತಮ್ಮದೇ ನಟನೆಯ ‘ವರಾಹಚಕ್ರಂ’ ಸಿನಿಮಾದ ದೇಶಭಕ್ತಿ ಗೀತೆಯೊಂದಕ್ಕೆ ಪ್ರೇಮಾ ಧ್ವನಿಯಾಗಿದ್ದಾರೆ. ಮಂಜು ಮಸ್ಕಲ್ ಮಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಪ್ರೇಮಾ, ಸಾಯಿಕುಮಾರ್ ಮುಖ್ಯ ಪಾತ್ರದಲ್ಲಿದ್ದಾರೆ.
‘ಬೆಂಗಳೂರಿನಲ್ಲಿ ನಡೆಯುತ್ತಿರುವ ಅವ್ಯವಸ್ಥಿತ ಪದ್ಧತಿಗಳು, ಸಂಸ್ಕೃತಿಯ ಕಗ್ಗೊಲೆ, ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕಥಾಹಂದರ ಒಳಗೊಂಡ ಚಿತ್ರವಿದು. ವಾರಾಣಸಿಯಲ್ಲಿ ಚಿತ್ರೀಕರಿಸಲಾಗಿರುವ ಈ ಹಾಡು ಗಣರಾಜ್ಯೋತ್ಸವದಂದು ಬಿಡುಗಡೆಯಾಗಲಿದೆ. ಪ್ರೇಮಾ ಅವರು ಶೂಟಿಂಗ್ ವೇಳೆ ಹಾಡಿದ್ದನ್ನು ಕೇಳಿದ ಬಳಿಕ ಅವರ ಬಳಿಯೇ ಹಾಡಿಸಲು ನಿರ್ಧರಿಸಿದೆ’ ಎಂದರು ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ.
ಈ ಗೀತೆಗೆ ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಸ್ವರ ಸಂಯೋಜನೆ ಇದೆ. ಮನ್ವಂತರಿ ಮೂವಿ ಮೇಕರ್ಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಅರ್ಜುನ್ ದೇವ ಚಿತ್ರದ ನಾಯಕನಾಗಿ ನಟಿಸಿದ್ದು, ರಾಣಾ, ಇಮ್ರಾನ್ ಷರೀಫ್, ಆರ್ಯನ್, ಪ್ರತೀಕ್ ಗೌಡ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಶರತ್‌ಕುಮಾರ್ ಜಿ. ಅವರ ಛಾಯಾಗ್ರಹಣ, ಭಾರ್ಗವ ಅವರ ಸಂಕಲನವಿದ್ದು, ಬೆಂಗಳೂರು, ನೆಲ್ಲೂರು, ಪೊಲ್ಲಾಚ್ಚಿ, ಭಟ್ಕಳ, ಹಿರಿಯೂರು ಸೇರಿ ಹಲವೆಡೆ ಚಿತ್ರೀಕರಣ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.