ADVERTISEMENT

ಅ.3ಕ್ಕೆ ನಟಿ ರಾಧಿಕಾ ಕುಮಾರಸ್ವಾಮಿ ನಟನೆಯ ‘ಭೈರಾದೇವಿ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 19:48 IST
Last Updated 16 ಸೆಪ್ಟೆಂಬರ್ 2024, 19:48 IST
ಭೈರಾದೇವಿ ಪೋಸ್ಟರ್‌ 
ಭೈರಾದೇವಿ ಪೋಸ್ಟರ್‌    

ನಟಿ ರಾಧಿಕಾ ಕುಮಾರಸ್ವಾಮಿ ತೆರೆ ಮೇಲೆ ಕಾಣಿಸಿಕೊಳ್ಳದೆ ವರ್ಷಗಳೇ ಉರುಳಿವೆ. ಇದೀಗ ಅವರು ನಟಿಸಿರುವ ‘ಭೈರಾದೇವಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಸಿನಿಮಾ ಅ.3ರಂದು ತೆರೆಕಾಣುತ್ತಿದೆ. 

2022ರಲ್ಲಿ ತೆರೆಕಂಡ ‘ರವಿ ಬೋಪಣ್ಣ’ ಸಿನಿಮಾದಲ್ಲಿ ಕೊನೆಯದಾಗಿ ರಾಧಿಕಾ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಇದೀಗ ಶಮಿಕ ಎಂಟರ್‌ಪ್ರೈಸಸ್ ಲಾಂಛನದಲ್ಲಿ ರಾಧಿಕಾ ಕುಮಾರಸ್ವಾಮಿ ಅವರೇ ‘ಭೈರಾದೇವಿ’ ಸಿನಿಮಾ ನಿರ್ಮಿಸಿದ್ದಾರೆ. ‘ಭೈರಾದೇವಿ’ ಸಿನಿಮಾದ ಪ್ರಚಾರ ಕಾರ್ಯಕ್ಕೆ ಇತ್ತೀಚೆಗೆ ಚಾಲನೆ ದೊರಕಿತು. ಪ್ರಚಾರದ ಮೊದಲ ಹೆಜ್ಜೆಯಾಗಿ ಟ್ಯಾಬ್ಲೊ ಹಾಗೂ ಆಟೊ ಪ್ರಚಾರಕ್ಕೆ ರಾಧಿಕಾ ಚಾಲನೆ ನೀಡಿದರು. ರಾಧಿಕಾ ಕುಮಾರಸ್ವಾಮಿ ಅವರೇ ಆಟೊ ಚಾಲನೆ ಮಾಡಿದ್ದು ವಿಶೇಷವಾಗಿತ್ತು. ಶ್ರೀಜೈ ಅವರು ನಿರ್ದೇಶಿಸಿರುವ ಈ ಚಿತ್ರಕ್ಕೆ ರವಿರಾಜ್ ಹಾಗೂ ಯಾದವ್ ಅವರ ಸಹ ನಿರ್ಮಾಣವಿದೆ. ಚಿತ್ರದಲ್ಲಿ ರಮೇಶ್‌ ಅರವಿಂದ್‌ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ. 

ಜೆ.ಎಸ್.ವಾಲಿ ಛಾಯಾಚಿತ್ರಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರವಿಚಂದ್ರನ್ ಅವರ ಸಂಕಲನ ಚಿತ್ರಕ್ಕಿದೆ. ರವಿಶಂಕರ್, ರಂಗಾಯಣ ರಘು ಮುಂತಾದವರು ತಾರಾಬಳಗದಲ್ಲಿದ್ದಾರೆ. ‘ಭೈರಾದೇವಿ’ ನಂತರ ಬಾಲಿವುಡ್‌ ನಟ ಶ್ರೇಯಸ್‌ ತಲ್ಪಡೆ ಜೊತೆ ರಾಧಿಕಾ ನಟಿಸಿರುವ ‘ಅಜಾಗ್ರತ’ ಬಿಡುಗಡೆಯಾಗಲಿದೆ. ರಾಧಿಕಾ ಸಹೋದರ ರವಿರಾಜ್‌ ಅವರೇ ಈ ಸಿನಿಮಾ ನಿರ್ಮಿಸುತ್ತಿದ್ದು, ಎಂ.ಶಶಿಧರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.