ತೆಲುಗಿನ ‘ಸರಿಲೇರು ನೀಕೆವ್ವರು’ ಮತ್ತು ‘ಭೀಷ್ಮ’ ಚಿತ್ರಗಳ ಗೆಲುವಿನ ಬಳಿಕ ನಟಿ ರಶ್ಮಿಕಾ ಮಂದಣ್ಣ ಅವರ ಅವಕಾಶದ ಹೆಬ್ಬಾಗಿಲು ತೆರೆದಿರುವುದು ಎಲ್ಲರಿಗೂ ಗೊತ್ತು. ಅಲ್ಲು ಅರ್ಜುನ್ ನಟನೆಯ ಹೊಸ ಚಿತ್ರದಲ್ಲಿ ಅವರು ಚಿತ್ತೂರಿನ ಹುಡುಗಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಈ ಸಿನಿಮಾಕ್ಕೆ ಸುಕುಮಾರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಕಾರ್ತಿ ನಟನೆಯ ‘ಸುಲ್ತಾನ್’ ಚಿತ್ರದ ಮೂಲಕ ಕಾಲಿವುಡ್‌ನಲ್ಲೂ ಅವರು ನಟಿಸಲು ಸಜ್ಜಾಗಿದ್ದಾರೆ. ಮತ್ತೊಂದೆಡೆ ತಮಿಳು ನಟ ವಿಜಯ್ ಅವರ 65ನೇ ಸಿನಿಮಾಕ್ಕೂ ಅವರೇ ನಾಯಕಿ ಎಂಬ ಸುದ್ದಿ ಕೂಡ ಹೊರಬಿದ್ದಿದೆ. ಈ ನಡುವೆಯೇ ನಟನೆಯಿಂದ ನಿರ್ಮಾಪಕಿಯಾಗಿ ಬಡ್ತಿ ಪಡೆಯುವ ಹಂತದಲ್ಲಿದ್ದಾರೆ ರಶ್ಮಿಕಾ.
ಇತ್ತೀಚೆಗೆ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಒಳ್ಳೆಯ ಸ್ಕ್ರಿಪ್ಟ್‌ಗಳನ್ನು ಕಳುಹಿಸಿಕೊಡುವಂತೆ ಅಭಿಮಾನಿಗಳಿಗೆ ಕೋರಿದ್ದರು. ಬಿಡುವಿನ ವೇಳೆಯಲ್ಲಿ ಎಲ್ಲವನ್ನೂ ಓದುತ್ತೇನೆ ಎಂದು ಭರವಸೆಯನ್ನೂ ನೀಡಿದ್ದರು. ಹಾಗಾಗಿ, ಒಳ್ಳೆಯ ಕಥೆಗಳಿಗೆ ಅವರೇ ಬಂಡವಾಳ ಹೂಡಲಿದ್ದಾರಂತೆ.
ನಟ, ನಟಿಯರು ಸ್ವಂತವಾಗಿ ಫಿಲ್ಮ್ ಪ್ರೊಡಕ್ಷನ್ ಹೌಸ್ ಸ್ಥಾಪಿಸಿ ಸಿನಿಮಾ ನಿರ್ಮಿಸುವುದು ಹೊಸದೇನಲ್ಲ. ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಚಿತ್ರರಂಗದಲ್ಲೂ ಹಲವು ಕಲಾವಿದರು ಪ್ರೊಡಕ್ಷನ್ ಹೌಸ್ ತೆರೆದಿದ್ದಾರೆ. ಸಿನಿಮಾಗಳ ವಿತರಣೆ ಕೂಡ ಮಾಡುತ್ತಿದ್ದಾರೆ.
ಸ್ಟಾರ್ ನಟರು ಹೊಸ ನಿರ್ದೇಶಕರು, ಪ್ರತಿಭಾವಂತ ಕಲಾವಿದರಿಗೆ ಸ್ವಂತ ಸಂಸ್ಥೆಯ ಮೂಲಕ ಚಿತ್ರರಂಗ ಪ್ರವೇಶಕ್ಕೆ ಅವಕಾಶ ನೀಡುವುದು ಉಂಟು. ಪ್ರಯೋಗಾತ್ಮಕ ಚಿತ್ರಗಳ ನಿರ್ಮಾಣಕ್ಕೂ ವಿಶೇಷ ಒತ್ತು ನೀಡುತ್ತಾರೆ. ಈಗ ರಶ್ಮಿಕಾ ಕೂಡ ಇದೇ ಹಾದಿಯಲ್ಲಿ ಪಯಣಿಸಲು ಸಜ್ಜಾಗಿದ್ದಾರೆ.
ಸಿನಿಮಾ ನಿರ್ಮಾಣ ಮತ್ತು ನಟನೆ ಎರಡರಲ್ಲೂ ತೊಡಗಿಸಿಕೊಳ್ಳುವ ಇರಾದೆ ಅವರದ್ದು. ಅವರ ಸಹವರ್ತಿಗಳ ಜೊತೆಗೆ ಚಿತ್ರ ನಿರ್ಮಾಣದ ಹಿಂದಿರುವ ಪಟ್ಟುಗಳನ್ನು ಕರಗತ ಮಾಡಿಕೊಳ್ಳು ತ್ತಿದ್ದಾರಂತೆ. ಶೀಘ್ರವೇ, ಅವರು ತಾವು ನಿರ್ಮಾಣ ಮಾಡಲಿರುವ ಹೊಸ ಚಿತ್ರವನ್ನೂ ಪ್ರಕಟಿಸುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.