2023ರ ಸೆಪ್ಟೆಂಬರ್‌ನಲ್ಲಿ ನಟಿ ರುಕ್ಮಿಣಿ ವಸಂತ್ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಹಾಗೂ ‘ಬಾನದಾರಿಯಲ್ಲಿ’ ಎರಡು ಸಿನಿಮಾಗಳು ತಿಂಗಳ ಅಂತರದಲ್ಲಿ ಬಿಡುಗಡೆಯಾಗಿದ್ದವು. ಇದೀಗ ಮತ್ತದೇ ರೀತಿ ‘ಬಘೀರ’ ಸಿನಿಮಾ ಬಿಡುಗಡೆಗೊಂಡ ಎರಡು ವಾರದಲ್ಲೇ ‘ಭೈರತಿ ರಣಗಲ್’ ಸಿನಿಮಾ ಮೂಲಕ ಮತ್ತೆ ತೆರೆಗೆ ಬರುತ್ತಿದ್ದಾರೆ. ಈ ಎರಡೂ ಸಿನಿಮಾಗಳಲ್ಲಿ ವೈದ್ಯೆಯಾಗಿ ಕಾಣಿಸಿಕೊಂಡಿದ್ದಾರೆ. ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕ ಅವರು ತಮ್ಮ ಸಿನಿಪಯಣವನ್ನು ಮೆಲುಕು ಹಾಕಿದರು.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಮೂಲಕ ಜನರ ಪ್ರೀತಿ ನನಗೆ ದೊರಕಿತು. ನಿರೀಕ್ಷೆಗೂ ಮೀರಿ ಎಲ್ಲರೂ ಪ್ರೋತ್ಸಾಹ ನೀಡಿದರು. ಈ ಚಿತ್ರೋದ್ಯಮದಲ್ಲಿ ಹೀಗೇ ಆಗುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನುವುದನ್ನು ‘ಬೀರ್‌ಬಲ್’ ಬಳಿಕ ತಿಳಿದುಕೊಂಡೆ. ಇಷ್ಟಪಟ್ಟು ಸಿನಿಮಾ ಮಾಡಬೇಕು. ಉಳಿದುವುದನ್ನು ಪ್ರೇಕ್ಷಕರಿಗೆ ಬಿಡಬೇಕು. ಮಿತಿಮೀರಿದ ನಿರೀಕ್ಷೆ ಇಟ್ಟುಕೊಳ್ಳಬಾರದು ಎನ್ನುವುದನ್ನು ಕಲಿತುಕೊಂಡಿದ್ದೆ. ಆದರೆ ‘ಸಪ್ತ..’ ಬಳಿಕ ಕನ್ನಡ ಜನರಿಂದ ಸಿಗುತ್ತಿರುವ ಪ್ರೀತಿಯನ್ನು ನಾನೆಂದೂ ಊಹಿಸಿರಲಿಲ್ಲ. ಇದು ನನಗೆ ಆತ್ಮವಿಶ್ವಾಸ ತುಂಬಿದೆ. ಎರಡನೇ ಸಿನಿಮಾಗೇ ಈ ರೀತಿಯ ಜನ ಬೆಂಬಲ ಸಿಕ್ಕಿರುವುದಕ್ಕೆ ಪಯಣ ಮುಂದುವರಿದಿದೆ. ನನ್ನ ಸಾಮರ್ಥ್ಯದ ಕುರಿತು ನನ್ನೊಳಗಿದ್ದ ಅನುಮಾನಗಳೆಲ್ಲವೂ ಸದ್ಯಕ್ಕೆ ಸುಮ್ಮನಾಗಿವೆ’ ಎಂದು ಆರಂಭಿಕ ಹೆಜ್ಜೆಗಳನ್ನು ನೆನಪಿಸಿಕೊಂಡರು ರುಕ್ಮಿಣಿ.
‘ಬಿಡುಗಡೆಗೊಂಡಿರುವ ‘ಬಘೀರ’ ಹಾಗೂ ‘ಭೈರತಿ ರಣಗಲ್’ ಸಿನಿಮಾದಲ್ಲಿ ವೈದ್ಯೆಯ ಪಾತ್ರಕ್ಕೆ ಬಣ್ಣಹಚ್ಚಿದ್ದೇನೆ. ಇದು ಪಾತ್ರದ ವೃತ್ತಿಯಾಗಿದೆಯಷ್ಟೇ. ಆದರೆ ಎರಡೂ ಕಥೆಗಳು ಭಿನ್ನ. ಕಥೆಗೆ ಈ ಪಾತ್ರಗಳು ಬೇರೆಯೇ ರೀತಿ ಪರಿಣಾಮ ಬೀರಿವೆ. ಇನ್ನು ಮುಂದೆ ಜನರು ನನ್ನನ್ನು ‘ಡಾ.ಪುಟ್ಟಿ’ ಎನ್ನಬಹುದು’ ಎನ್ನುತ್ತಾ ರುಕ್ಮಣಿ ನಕ್ಕರು.
‘ನಿರ್ಮಾಪಕರಾದ ಗೀತಾ ಶಿವರಾಜ್‌ಕುಮಾರ್ ನನಗೆ ಹೊಸ ರೀತಿಯ ಪ್ರೇರಣೆ. ಪ್ರತಿನಿತ್ಯ ಸೆಟ್‌ಗೆ ಬರುತ್ತಿದ್ದರು. ತಾವೇ ಜವಾಬ್ದಾರಿವಹಿಸಿಕೊಂಡು ಮೇಲ್ವಿಚಾರಣೆ ನಡೆಸುತ್ತಿದ್ದರು. ಜೊತೆಗೆ ಪ್ರತಿಯೊಬ್ಬರಿಗೂ ಅವರ ಕೈಯಾರೆ ಮಾಡಿದ ಊಟ ತೆಗೆದುಕೊಂಡು ಬರುತ್ತಿದ್ದರು. ದೊಡ್ಡ ದೊಡ್ಡ ಡಬ್ಬಿಗಳಲ್ಲಿ ಊಟ ತಂದು, ಹಂಚಿ ನಮಗೆಲ್ಲರಿಗೂ ಮನೆಯ ಪ್ರೀತಿ ನೀಡಿದರು. ಎಲ್ಲರೂ ಶಿವಣ್ಣನ ಎನರ್ಜಿ ಬಗ್ಗೆ ಹೇಳುತ್ತೇವೆ. ಶಿವಣ್ಣನಷ್ಟೇ ಎನರ್ಜಿ, ಗೀತಾ ಶಿವರಾಜ್‌ಕುಮಾರ್ ಅವರಿಗೂ ಇದೆ. ಜೊತೆಗೆ ತಮ್ಮ ಈ ಶಕ್ತಿಯನ್ನು ಪ್ರೀತಿಯಿಂದ ಎಲ್ಲರಿಗೂ ಅವರು ಹಂಚುತ್ತಿದ್ದರು’ ಎನ್ನುತ್ತಾರೆ ರುಕ್ಮಿಣಿ.
‘ಸಿನಿಮಾಗೆ ಯಾವ ರೀತಿಯ ತೊಡಕುಗಳು ಬರಲು ಶಿವರಾಜ್‌ಕುಮಾರ್ ಅವರು ಬಿಡುವುದಿಲ್ಲ. ಬಹಳ ಪ್ರೀತಿಯಿಂದ ಅಷ್ಟೇ ಎನರ್ಜಿ ಇಟ್ಟುಕೊಂಡು ‘ಭೈರತಿ ರಣಗಲ್’ ಸಿನಿಮಾವನ್ನು ಅವರು ಎಲ್ಲರಿಗೂ ತಲುಪಿಸುತ್ತಿದ್ದಾರೆ. ಅವರೊಬ್ಬ ಸಿನಿಮಾವನ್ನು ಪ್ರೀತಿಸುವ ಶ್ರಮಜೀವಿ. ಅವರೊಂದಿಗೆ ಕೆಲಸ ಮಾಡುತ್ತಾ ಇದನ್ನು ನಾನು ಕಂಡಿದ್ದೇನೆ. ಹಲವು ವಿಷಯಗಳನ್ನು ಕಲಿತಿದ್ದೇನೆ. ಅವರ ಅನುಭವ ಅಗಾಧ. ಹೀಗಿದ್ದರೂ ನನ್ನನ್ನಾಗಲಿ ಅಥವಾ ಇತರೆ ಕಲಾವಿದರ ನಟನೆಯನ್ನು ಬದಲಾಯಿಸಲು ಹೋಗಿಲ್ಲ. ನಾವು ನಟಿಸುವಾಗ ರಾಜ್‌ಕುಮಾರ್ ಅವರ ಸಿನಿಮಾಗಳ ದೃಶ್ಯಗಳಿಗೆ ಹೋಲಿಕೆ ಕಂಡುಬಂದಲ್ಲಿ ಅದರ ಕುರಿತು ಹೇಳುತ್ತಿದ್ದರು. ಅವರ ಜೊತೆ ತೆರೆಹಂಚಿಕೊಂಡಿರುವುದು ಹೆಮ್ಮೆಯ ವಿಷಯ’ ಎಂದರು.
‘ವಿಜಯ್ ಸೇತುಪತಿ ಅವರ ಜೊತೆಗಿನ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಮುಂದಿನ ವರ್ಷ ಇದು ಬಿಡುಗಡೆಯಾಗಲಿದೆ. ಇದನ್ನು ಹೊರತುಪಡಿಸಿ ಮುರುಗದಾಸ್ ನಿರ್ದೇಶನದ, ಶಿವಕಾರ್ತಿಕೇಯನ್ ನಾಯಕರಾಗಿ ನಟಿಸಿರುವ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಕನ್ನಡದಲ್ಲಿ ಹೊಸ ಕಥೆಗಳನ್ನು ಕೇಳುತ್ತಿದ್ದೇನೆ, ಮಾತುಕತೆ ನಡೆಯುತ್ತಿದೆ’ ಎಂದು ಮಾತಿಗೆ ವಿರಾಮವಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.