* ‘ಬಯಲುಸೀಮೆ’ಯಲ್ಲಿ ನಿಮ್ಮ ಪಾತ್ರವೇನು? ಯಾವುದರ ಕುರಿತ ಕಥೆ?
ಇದೊಂದು ರಾಜಕೀಯ ಚಿತ್ರಣ ಹೊಂದಿರುವ ಉತ್ತರ ಕರ್ನಾಟಕದ ಅಪ್ಪಟ ಸಿನಿಮಾ. ಇದರಲ್ಲಿ ನೇಕಾರ ಹುಡುಗಿಯ ಪಾತ್ರ ಮಾಡಿದ್ದೇನೆ. ಬಯಲುಸೀಮೆಯ ಘಟನೆಗಳನ್ನು ಹಸಿಹಸಿಯಾಗಿಯೇ ತೋರಿಸಲಾಗಿದೆ. ರವಿಶಂಕರ್, ಟಿ.ಎಸ್. ನಾಗಾಭರಣ, ಯಶ್ ಶೆಟ್ಟಿಯಂತಹ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ನನ್ನ ಪಾತ್ರ ಹೋರಾಟ ಅಥವಾ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದಿಲ್ಲ. ನಾಯಕ ವರುಣ್ ಜೊತೆಗಿನ ಪ್ರೇಮದ ದೃಶ್ಯಗಳಿಗೆ ಮಾತ್ರ ಸೀಮಿತವಾಗಿದೆ.
* ಮೂಲತಃ ಹೊರನಾಡಿನವರಾದ ನಿಮಗೆ ಬಯಲು ಸೀಮೆಯ ಭಾಷೆ ಸವಾಲಾಗಲಿಲ್ಲವೆ?
ಚಿತ್ರಕ್ಕಾಗಿ ಜವಾರಿ ಭಾಷೆ ಕಲಿತೆ. ಸವಾಲಿನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು, ಪಾತ್ರಕ್ಕೆ ನ್ಯಾಯ ಒದಗಿಸುತ್ತ ಹೋಗುವುದೇ ನಟನೆಯಲ್ಲಿನ ಬೆಳವಣಿಗೆ. ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಚಟ್ನಿಪುಡಿಯಿಂದ ಹಿಡಿದು ಸಿನಿಮಾ ಸೆಟ್ ಒಂದು ರೀತಿ ಬಯಲುನಾಡಿನ ಮನೆಯಾಗಿತ್ತು. ನಿರ್ದೇಶಕ ವರುಣ್ ಬಹಳ ವರ್ಷ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿ, ಶ್ರಮಪಟ್ಟು ಸಿನಿಮಾ ಮಾಡಿದ್ದಾರೆ.
* ‘ಟೋಬಿ’ ಚಿತ್ರದಲ್ಲಿ ನಿಮ್ಮ ಪಾತ್ರವೇನು?
ಇದೊಂದು ಸೇಡು ತೀರಿಸಿಕೊಳ್ಳುವ ಕಥೆ. ಸಾವಿತ್ರಿ ಎಂಬ ಪಾತ್ರ ಮಾಡಿರುವೆ. ಅದರ ಬಗ್ಗೆ ಹೆಚ್ಚು ಮಾಹಿತಿ ನೀಡಲಾರೆ. ರಾಜ್ ಶೆಟ್ಟಿಯಂತಹ ಸಿನಿಮಾ ಪ್ರೀತಿ ಇರುವವರ ಜೊತೆ ಕೆಲಸ ಮಾಡುವುದು ಖುಷಿಯ ಸಂಗತಿ. ಈ ಚಿತ್ರೀಕರಣವೇ ಒಂದು ಅದ್ಭುತವಾದ ಅನುಭವ. ರಾಜ್ ಒಂದು ದಿನ ಕರೆ ಮಾಡಿ, ‘ನೀನು ಹೇಗೆ ಇದ್ದೀಯೋ ಹಾಗೆಯೇ ಇರುವ ಪಾತ್ರವಿದೆ. ಮಾಡುತ್ತೀಯಾ?’ ಎಂದರು. ಸ್ಕ್ರಿಪ್ಟ್ ಕಳುಹಿಸಿದರು. ತುಂಬ ಚೆನ್ನಾಗಿತ್ತು. ಚೂರುಪಾರು ಮೇಕಪ್ ಮಾಡಿಕೊಂಡಿದ್ದನ್ನು ಕೂಡ ತೆಗಿಸಿ ಶೂಟ್ ಮಾಡಿದರು. ಇಷ್ಟು ವರ್ಷದ ಸಿನಿಮಾ ಪಯಣದಲ್ಲಿ ಇದೊಂದು ಭಿನ್ನ ಅನುಭವ. ಮೇಕಪ್ ಇಲ್ಲದೆ ಚಿತ್ರೀಕರಣ ಮಾಡಿದ್ದು ಇದೇ ಮೊದಲು.
* ನಿಮ್ಮ ಮುಂದಿನ ಯೋಜನೆಗಳ ಕುರಿತು ಹೇಳಿ
ಕನ್ನಡ, ತಮಿಳು, ತೆಲುಗು ಸೇರಿ ಒಟ್ಟು ಈ ವರ್ಷ 7 ಸಿನಿಮಾಗಳು, 2 ವೆಬ್ ಸೀರೀಸ್ ಇವೆ. ಕೆಲವು ಈಗಾಗಲೇ ಬಿಡುಗಡೆಗೊಂಡಿವೆ. ಇನ್ನು ಕೆಲವು ಬಿಡುಗಡೆಯಾಗಬೇಕಿವೆ. ಇದರ ಹೊರತಾಗಿ ಹೊಸ ಚಿತ್ರಗಳ ಚಿತ್ರೀಕರಣ ನಡೆಯುತ್ತಿವೆ. ಅವುಗಳ ಬಗ್ಗೆ ಈಗಲೇ ಹೇಳುವುದು ಕಷ್ಟ.
* ಇಲ್ಲಿವರೆಗಿನ ನಿಮ್ಮ ಸಿನಿಮಾ ಪಯಣ ಹೇಗಿದೆ?
ಚಿತ್ರರಂಗಕ್ಕೆ ಬಂದು 10 ವರ್ಷಗಳ ಮೇಲಾಗಿದೆ. ಪ್ರತಿ ವರ್ಷ ನಾನು ನಟಿಸಿರುವ ಕನಿಷ್ಠ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. ನಾಯಕಿ ಆಗಬೇಕು ಎಂದು ನಾನು ಕನಸು ಕಂಡವಳಲ್ಲ. ದೊಡ್ಡ ನಾಯಕರ ಜೊತೆ ನಟಿಸಬೇಕು ಎಂಬ ಇರಾದೆಯೂ ಇಲ್ಲ. ಯಾವ ಪಾತ್ರ ಬಂದರೂ ಸವಾಲಾಗಿ ಸ್ವೀಕರಿಸುತ್ತೇನೆ. ಇಲ್ಲಿ ಸುದೀರ್ಘ ಕಾಲ ಉಳಿಯಲು ಅದೃಷ್ಟ, ಪ್ರತಿಭೆ ಮುಖ್ಯ ಎನ್ನುತ್ತಾರೆ. ಆದರೆ ನನ್ನ ಪ್ರಕಾರ ನಮ್ಮ ವರ್ತನೆ, ಸಿನಿಮಾ ಮೇಲಿನ ಪ್ರೀತಿ, ತಾಳ್ಮೆ ಬಹಳ ಮುಖ್ಯ. ಒಂದು ಸಿನಿಮಾದಿಂದ ನಮ್ಮ ಬದುಕು ಬದಲಾಗಿ ಬಿಡುತ್ತದೆ ಎಂಬುದು ಸುಳ್ಳು. ಸಿನಿಮಾ ಸೋಲಲಿ, ಗೆಲ್ಲಲಿ ಮರುದಿನ ಯಥಾಪ್ರಕಾರದ ಬದುಕು ಮುಂದುವರಿಯುತ್ತದೆ. ಹೀಗಾಗಿ ನಿರಂತರತೆ ಇಲ್ಲಿ ಬಲು ಮುಖ್ಯ.
* ನಿಮ್ಮ ಪ್ರಾಣಿ, ಪಕ್ಷಿಗಳ ಜಗತ್ತು ಹೇಗಿದೆ?
ಸಮಾಜಕ್ಕೆ, ನಮ್ಮ ಸುತ್ತಮುತ್ತಲಿನವರಿಗೆ ನಾವೇನು ಪ್ರೀತಿ ಕೊಡುತ್ತೇವೆ ಎಂಬುದು ಬಹಳ ಮುಖ್ಯ. ಪ್ರತಿ ಸೆಟ್‌ನಲ್ಲಿಯೂ ನಾನು ನಟನೆಯ ಹೊರತಾಗಿ ಛಾಯಾಗ್ರಹಣ, ಸೆಟ್ ಎಲ್ಲ ಕಡೆ ಆಸಕ್ತಿಯಿಂದ ಭಾಗಿಯಾಗುತ್ತೇನೆ. ಅಲ್ಲಿನ ಜನರೊಂದಿಗೆ ಬೆರೆಯುತ್ತೇನೆ. ಬಹುಶಃ ಅಮ್ಮ, ಅಜ್ಜಿಯಿಂದ ನನಗೆ ಈ ಸಂಸ್ಕಾರ, ತಾಳ್ಮೆ ಬಂದಿದ್ದು. ನನ್ನ ಸಾಮಾಜಿಕ ಮಾಧ್ಯಮದ ಪುಟಗಳನ್ನು ನೋಡಿದರೆ ನಿಮಗೆ ಅಲ್ಲಿ ಬರಿ ಪ್ರಾಣಿ, ಪಕ್ಷಿ, ಪ್ರಕೃತಿಯೇ ಸಿಗುತ್ತದೆ ಹೊರತು ರೀಲ್ಸ್ ಇಲ್ಲ, ನನ್ನ ಡ್ಯಾನ್ಸ್ ವಿಡಿಯೊ ಅಂತೂ ಇಲ್ಲವೇ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.