ಕೋಸ್ಟಲ್‌ವುಡ್‌ನಿಂದ ಸ್ಯಾಂಡಲ್‌ವುಡ್‌ನತ್ತ ಬಂದ ಸೋನಲ್, ಫುಲ್ ಬ್ಯುಸಿಯಾಗಿದ್ದಾರೆ ಅಲ್ಲವೇ?
ನಾನು ಇವತ್ತು ನಟಿಯಾಗಿ ಈ ಮಟ್ಟಕ್ಕೆ ಬೆಳೆಯಬೇಕಾದರೆ ಅದಕ್ಕೆ ಮುಖ್ಯ ಕಾರಣ ತುಳು ಸಿನಿಮಾ. ಕೋಸ್ಟಲ್‌ವುಡ್‌ಗೆ ಪ್ರವೇಶಿಸುವ ಮೊದಲು ನಾನು ಮಾಡೆಲಿಂಗ್ ಮಾಡುತ್ತಿದ್ದೆ. 2013ರಲ್ಲಿ ಮಿಸ್ ಮಂಗಳೂರು ಸ್ಪರ್ಧೆಯಲ್ಲಿ ಮಿಸ್ ಬ್ಯೂಟಿಫುಲ್ ಸ್ಮೈಲ್ ಪ್ರಶಸ್ತಿಯನ್ನು ನಾನು ಪಡೆದಿದ್ದೆ. ಇದಾದ ನಂತರ ನನ್ನ ಸಿನಿಪಯಣ ಆರಂಭವಾಯಿತು. ನಾನು ಯಾವತ್ತೂ ನಟನೆಯ ತರಗತಿಗಳಿಗೆ ಹೋಗಿಲ್ಲ, ಕ್ಯಾಮೆರಾ ಮುಂದೆ ಹೇಗೆ ನಟಿಸಬೇಕು ಎನ್ನುವುದರ ಕುರಿತು ಕಿಂಚಿತ್ತೂ ಅಭ್ಯಾಸ ಇರಲಿಲ್ಲ. ನನಗೆ ಆಸಕ್ತಿ ಇದ್ದಿದ್ದು ಕ್ಲಿನಿಕಲ್ ಸೈಕಾಲಜಿಯಲ್ಲಿ. ಸಂಗೀತದಲ್ಲಿ ಅಭಿರುಚಿ ಇತ್ತು. ಆದರೆ ನಟಿಯಾಗಬೇಕು ಎನ್ನುವ ಯಾವ ಆಸೆಯೂ ಇರಲಿಲ್ಲ. ನಾನು ಸಿನಿಮಾ ಕ್ಷೇತ್ರಕ್ಕೆ ಇಳಿದಿದ್ದೇ ಅಮ್ಮನ ಒತ್ತಾಯಕ್ಕೆ. ‘ಎಕ್ಕಸಕ’ ಸಿನಿಮಾ ಮುಂಚೆ ಅಮ್ಮನ ಬಳಿ ‘ಇದೇ ನನ್ನ ಕೊನೆಯ ಸಿನಿಮಾ. ಇದು ನನ್ನ ಆಸಕ್ತಿಯ ಕ್ಷೇತ್ರವೇ ಅಲ್ಲ. ನಾನು ಸಿನಿಮಾ ಇಂಡಸ್ಟ್ರಿಗೆ ಫಿಟ್ ಅಲ್ಲ’ ಎಂದಿದ್ದೆ. ಆದರೆ ಆಗಿದ್ದೇ ಬೇರೆ. ಆ ಸಿನಿಮಾ 100 ದಿನ ಓಡಿತು. ಅಲ್ಲಿಂದ ಇಲ್ಲಿಯವರೆಗೂ ನಿತ್ಯವೂ ಬ್ಯುಸಿಯಾಗಿದ್ದೇನೆ. 15 ಸಿನಿಮಾಗಳಾಗುತ್ತಾ ಬಂತು. ಒಂದಲ್ಲಾ ಒಂದು ಆಫರ್‌ಗಳು ಬರುತ್ತಲೇ ಇವೆ.
‘ಪಂಚತಂತ್ರ’ ಹಾಗೂ ‘ರಾಬರ್ಟ್’ ಬಳಿಕ ನಿಮಗೆ ಹಲವು ನಾಮಕರಣವಾಗಿದೆಯಲ್ಲವೇ?
ಹೌದು. ‘ಪಂಚತಂತ್ರ’ದಿಂದ ಜನರಿಗೆ ಸೋನಲ್ ಮೊಂತೆರೋ ಯಾರೆಂದು ತಿಳಿಯಿತು. ಆದರೆ ಅದಕ್ಕೂ ಮುನ್ನವೇ ನಾನು ಬಹಳಷ್ಟು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದೆ. ‘ಪಂಚತಂತ್ರ’ದವರೆಗೆ ನನ್ನ ಜೀವನ ಸಾಮಾನ್ಯವಾಗಿತ್ತು. ಆದರೆ ನಂತರ ನನ್ನ ಸಿನಿಗ್ರಾಫ್ ಒಂದೇ ಸಲ ಏರಿಕೆಯಾಯಿತು. ಯೋಗರಾಜ್ ಭಟ್ ಅವರ ಸಿನಿಮಾದಲ್ಲಿ ನಟಿಸಬೇಕು ಎನ್ನುವ ಆಸೆ ಮೊದಲೇ ಇತ್ತು. ‘ಪಂಚತಂತ್ರ’ ಸಿನಿಮಾ ಬಳಿಕ ಜನರು ನನ್ನನ್ನು ಸ್ವೀಕರಿಸಿದರು. ಈ ಸಿನಿಮಾದಲ್ಲಿ ನನ್ನ ಪಾತ್ರ ಬಹಳ ಬಬ್ಲಿಯಾಗಿತ್ತು. ಶೇ100ರಷ್ಟು ಓವರ್‌ಆ್ಯಕ್ಟಿಂಗ್ ಪಾತ್ರವದು. ಜನರಿಗೆ ಆ ಪಾತ್ರ ಬಹಳ ಕನೆಕ್ಟ್ ಆಯಿತು.
ನನ್ನ ಸಿನಿಮಾ ಜೀವನಕ್ಕೆ ಮತ್ತೊಂದು ದೊಡ್ಡ ತಿರುವು ನೀಡಿದ ಸಿನಿಮಾ ‘ರಾಬರ್ಟ್’. ‘ಪಂಚತಂತ್ರ’ ಸಿನಿಮಾದಲ್ಲಿ ನಾಯಕಿಯಾಗಿದ್ದ ಕಾರಣ ಬಹಳ ನಿರೀಕ್ಷೆ ಇತ್ತು. ಆದರೆ ‘ರಾಬರ್ಟ್’ ಯಶಸ್ಸು ಅನಿರೀಕ್ಷಿತ. ‘ರಾಬರ್ಟ್’ನಲ್ಲಿ ತೆರೆಯ ಮೇಲೆ ಕೆಲವೇ ಹೊತ್ತು ಬಂದು ಹೋಗುವ ಪಾತ್ರ ನನ್ನದಾಗಿತ್ತು. ಆದರೆ ಈ ಪಾತ್ರ ನನಗೊಂದು ಪ್ರೊಫೈಲ್ ನೀಡಲಿದೆ ಎನ್ನುವ ಭರವಸೆ ನನಗಿತ್ತು. ‘ತನು’ ಪಾತ್ರವನ್ನು ಜನ ಈ ಮಟ್ಟಕ್ಕೆ ಮೆಚ್ಚುತ್ತಾರೆ ಎಂದು ದೇವರಾಣೆಗೂ ಊಹಿಸಿರಲಿಲ್ಲ. ಇದೀಗ ಹಲವು ನಾಮಕರಣಗಳಾಗಿವೆ. ‘ಸಾಹಿತ್ಯ’, ‘ಹೊಂಗೆಮರ’, ‘ನರ್ಸಮ್ಮ’, ‘ಹೊಂಗೆಹೂವು’ ಹೀಗೆ ಹಲವು ಹೆಸರುಗಳಿಂದ ಜನರು ನನ್ನನ್ನು ಕರೆಯುತ್ತಾರೆ.
ರಾಬರ್ಟ್‌ನ ‘ರಾಘವ’ ಮತ್ತು ‘ತನು’ ಜೋಡಿ ಯಾವಾಗ ಮತ್ತೆ ತೆರೆಗೆ?
‘ರಾಬರ್ಟ್’ ಸಿನಿಮಾದ ಬಳಿಕ ನಾನು ‘ತನು’ ಮಾದರಿಯ ಪಾತ್ರವನ್ನು ಹುಡುಕುತ್ತಿದ್ದೇನೆ. ನನಗೆ ನಾಯಕಿಯ ಪಾತ್ರವೇ ಬೇಕೆಂದಿಲ್ಲ. ಸಣ್ಣ ಪಾತ್ರವಾದರೂ ಸರಿ, ಜನರ ಮನಸ್ಸಿನಲ್ಲಿ ಉಳಿಯುವ ಪಾತ್ರವನ್ನು ಮಾಡಬೇಕು ಎನ್ನುವ ಅಭಿಲಾಷೆ ಇದೆ. ತೆರೆಯ ಮೇಲೆ ಐದು ನಿಮಿಷವಾದರೂ ಸರಿ ಪ್ರೇಕ್ಷಕರ ಮೇಲೆ ಪರಿಣಾಮ ಬೀರುವ ಪಾತ್ರವನ್ನು ನಿಭಾಯಿಸಬೇಕು.
‘ರಾಘವ’ ಮತ್ತು ‘ತನು’ ಜೋಡಿ ಮತ್ತೆ ತೆರೆಯ ಮೇಲೆ ಯಾವಾಗ ಎಂದು ಹೋದಲ್ಲೆಲ್ಲ ಜನ ಕೇಳುತ್ತಿದ್ದಾರೆ. ಖಂಡಿತ ಈ ಜೋಡಿ ಮತ್ತೆ ತೆರೆ ಮೇಲೆ ಬರಲಿದೆ. ಲಾಕ್‌ಡೌನ್ ಸಮಯದಲ್ಲಿ ನನಗೆ ಹಾಗೂ ವಿನೋದ್ ಪ್ರಭಾಕರ್ ಅವರಿಗೆ ಬಹಳ ಕಥೆಗಳು ಬಂದವು. ನಾನು ಒಪ್ಪಿಕೊಂಡಿದ್ದ ಹಲವು ಸಿನಿಮಾಗಳಲ್ಲೂ ನಾಯಕರನ್ನಾಗಿ ವಿನೋದ್ ಪ್ರಭಾಕರ್ ಅವರನ್ನು ಹಾಕುವ ಯೋಚನೆಯನ್ನು ನಿರ್ದೇಶಕರು ಮಾಡಿದ್ದರು. ಆದರೆ ನಾವು ಒಂದು ಅತ್ಯುತ್ತಮವಾದ, ಸೂಕ್ತ ಕಥೆಗೆ ಕಾಯುತ್ತಿದ್ದೇವೆ. ಒಂದು ಸಿನಿಮಾ ಒಪ್ಪುವುದು ದೊಡ್ಡ ವಿಷಯವಲ್ಲ. ಆದರೆ ಜನರ ನಿರೀಕ್ಷೆ ಹುಸಿಯಾಗಬಾರದು. ಈ ವಿಚಾರದಲ್ಲಿ ನಾವಿಬ್ಬರೂ ಪರಸ್ಪರ ಮಾತನಾಡಿಕೊಳ್ಳುತ್ತಿದ್ದೇವೆ.
‘ಶುಗರ್ ಫ್ಯಾಕ್ಟರಿ’ ತೆರೆದಿದ್ದೀರಿ. ಹೇಗಿದೆ ‘ಹ್ಯಾಂಗೋವರ್’?
‘ಶುಗರ್ ಫ್ಯಾಕ್ಟರಿ’ ಸಿನಿಮಾ ನಾನು ಬಹಳ ಇಷ್ಟಪಟ್ಟು ಮಾಡಿದ ಚಿತ್ರ. ನಾನು ‘ಅದಿತಿ’ ಎಂಬ ಪಾತ್ರಕ್ಕೆ ಬಣ್ಣಹಚ್ಚಿದ್ದು, ಈ ಪಾತ್ರವನ್ನು ನಾನು ಬಹಳ ಇಷ್ಟಪಡುತ್ತೇನೆ. ವಿಭಿನ್ನವಾದ ಪಾತ್ರವದು. ‘ವರ್ಕ್ ಹಾರ್ಡ್–ಪಾರ್ಟಿ ಹಾರ್ಡ್’ ಹೀಗೆ ‘ಅದಿತಿ’ಯನ್ನು ಈ ಸ್ಲೋಗನ್ ಮುಖಾಂತರ ವಿವರಿಸಬಹುದು. ಪಾರ್ಟಿ ಇಷ್ಟಪಡುವ ಹೆಣ್ಣುಮಕ್ಕಳಿಗೆ ‘ಹ್ಯಾಂಗೋವರ್’ ಹಾಡು ಬಹಳ ಇಷ್ಟವಾಗಲಿದೆ.
ಹೊಸ ಸಿನಿಮಾ ಒಪ್ಪಿಕೊಂಡಿದ್ದೀರಾ?
ಹರಿಪ್ರಸಾದ್ ಅವರ ನಿರ್ದೇಶನದ ‘ಪದವಿಪೂರ್ವ’ದಲ್ಲೂ ನನ್ನದು ವಿಶೇಷ ಪಾತ್ರ. ಈ ಚಿತ್ರದ ಚಿತ್ರೀಕರಣ ಇನ್ನಷ್ಟೇ ಆರಂಭವಾಗಬೇಕಾಗಿದೆ. ಅನೂಪ್ ಆ್ಯಂಟೋನಿ ನಿರ್ದೇಶನದ ‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೇನೆ. ‘ಬನಾರಸ್’ ಚಿತ್ರ ಈ ವರ್ಷದ ಅಂತ್ಯಕ್ಕೆ ತೆರೆ ಕಾಣುವ ಸಾಧ್ಯತೆ ಇದೆ. ‘ಶುಗರ್ ಫ್ಯಾಕ್ಟರಿ’, ‘ತಲ್ವಾರ್ ಪೇಟೆ’, ‘ನಟವರ್‌ಲಾಲ್’, ‘ಶಂಭೋ ಶಿವಶಂಕರ’, ‘ಬುದ್ಧಿವಂತ–2’ ಚಿತ್ರಗಳ ಚಿತ್ರೀಕರಣ ಬಾಕಿ ಇದೆ. ಲಾಕ್‌ಡೌನ್ ಆಗದೇ ಹೋಗಿದ್ದರೆ ಬಹುತೇಕ ಚಿತ್ರೀಕರಣ ಪೂರ್ಣಗೊಳ್ಳುತ್ತಿತ್ತು. ಹೊಸ ಸಿನಿಮಾಗಳನ್ನು ಸದ್ಯಕ್ಕೆ ಒಪ್ಪಿಕೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.