ಬೆಂಗಳೂರು:2009ರಲ್ಲಿ ಬಿಡುಗಡೆಯಾಗಿದ್ದ ಜೇಮ್ಸ್ ಕೆಮರೂನ್ ಅವರ 'ಅವತಾರ್', ಸಿನಿಮಾ ವೀಕ್ಷಣೆಯ ಅನುಭವಕ್ಕೆ ಹೊಸ ಭಾಷ್ಯ ಬರೆದಿತ್ತು.
ಇದೀಗ ಆ ಸರಣಿಯ ಮತ್ತೊಂದು ಸಿನಿಮಾ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ.ಜೇಮ್ಸ್ ಕೆಮರೂನ್ ಅವರ ‘ಅವತಾರ್– ದಿ ವೇ ಆಫ್ ವಾಟರ್’ ಇದೇ ಡಿಸೆಂಬರ್ 16 ರಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸುತ್ತಿದೆ.
ಕಳೆದ ಬುಧವಾರ ಈ ಚಿತ್ರದ ಪ್ರೀಮಿಯರ್ ಶೋವನ್ನು, ಬಾಲಿವುಡ್ ನಟ ನಟಿಯರಿಗಾಗಿ, ತಂತ್ರಜ್ಞರಿಗಾಗಿ ಮುಂಬೈನಲ್ಲಿ ಆಯೋಜಿಸಲಾಗಿತ್ತು. ಶೋ ನೋಡಲು ಅಕ್ಷಯ್ ಕುಮಾರ್, ಕಾರ್ತಿಕ್ ಆರ್ಯನ್, ಬಾಬಿ ಡಿಯೋಲ್ ಸೇರಿದಂತೆ ಅನೇಕರು ಹೋಗಿದ್ದರು. ಬಾಲಿವುಡ್ ನಿರ್ದೇಶಕ ಓಂ ರಾವುತ್ ಕೂಡ ಹೋಗಿದ್ದರು.
ಅಂದ ಹಾಗೇ ಈ ಓಂ ರಾವುತ್ ಅವರು ಪ್ರಭಾಸ್ ಹಾಗೂ ಸೈಫ್ ಅಲಿಖಾನ್, ಕೃತಿ ಸನೋನ್ ತಾರಾಗಣದಲ್ಲಿ ರಾಮಾಯಣದ ಕಥೆ ಆಧರಿಸಿ ‘ಆದಿಪುರುಷ’ ಎಂಬ 3ಡಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಮಧ್ಯದಲ್ಲಿ ‘ಅವತಾರ್–ದಿ ವೇ ಆಫ್ ವಾಟರ್’ 3ಡಿ ಸಿನಿಮಾದ ಪ್ರೀಮಿಯರ್ ಶೋ ನೋಡಿ ಬಂದ ರಾವುತ್, ‘ಇದೊಂದು ಅದ್ಭುತ ಸಿನಿಮಾ’ ಎಂದು ಬಣ್ಣಿಸಿದ್ದರು.
ಈ ವಿಡಿಯೊ ಕೂಡ ವೈರಲ್ ಆಗಿತ್ತು. ವಿಡಿಯೊಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ‘ಇನ್ನಾದರೂ ಕಾರ್ಟೂನ್‌ಗಳಿಗೂ, ವಿಎಫ್‌ಎಕ್ಸ್‌ಗೂ ಇರುವ ವ್ಯತ್ಯಾಸ ತಿಳಿದುಕೊಳ್ಳಿ ರಾವುತ್ ಅವರೇ’ ಎಂದು ಕಿಚಾಯಿಸಿದ್ದಾರೆ.
ಏಕೆಂದರೆ, ರಾವುತ್ ನಿರ್ದೇಶಿಸುತ್ತಿರುವ ‘ಆದಿಪುರುಷ’ ಸಿನಿಮಾದ ಟೀಸರ್ ವ್ಯಾಪಕ ಟೀಕೆಗೆ ಒಳಗಾಗಿತ್ತು. ವಿಎಫ್‌ಎಕ್ಸ್ ಸಿನಿಮಾ ಎಂದು ಹೇಳಲಾದ ಆದಿಪುರುಷ ಟೀಸರ್‌ನಲ್ಲಿ ಪಾತ್ರಗಳನ್ನು ಕಾರ್ಟೂನ್ ರೀತಿ ಚಿತ್ರಿಸಲಾಗಿದೆ’ ಎಂದು ಟ್ರೋಲ್ ಮಾಡಲಾಗಿತ್ತು.
‘ಅಲ್ಲದೇ ರಾವಣನ ಪಾತ್ರವನ್ನು ಸ್ಪೈಕ್ ಕಟ್ ಮಾಡಿಸಿ ವಿಚಿತ್ರವಾಗಿ ತೋರಿಸಲಾಗಿದೆ. ರಾಮನ ಪಾತ್ರಕ್ಕೆ ಮೀಸೆ ಹಚ್ಚಲಾಗಿದೆ. ಜಾಂಬವಂತ, ಆಂಜನೇಯ ಸೇನೆಯನ್ನು ಕಾರ್ಟೂನ್ ಕೋತಿಗಳ ರೀತಿ ತೋರಿಸಲಾಗಿದೆ. ನೈಜತೆ ಎಲ್ಲಿದೆ?’ ಎಂದು ಟೀಕಿಸಲಾಗಿತ್ತು.
ದೀಪಾವಳಿ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಬಿಡುಗಡೆಯಾಗಿದ್ದ ‘ಆದಿಪುರುಷ’ ಸಿನಿಮಾ ಟ್ರೇಲರ್ ಮೇಲೆ ಹೇಳಲಾದ ಕಾರಣಗಳಿಂದ ವ್ಯಾಪಕ ಟ್ರೋಲ್‌ಗೆ ತುತ್ತಾಗಿತ್ತು.
ಇದೀಗ ‘ಅವತಾರ್– ದಿ ವೇ ಆಫ್ ವಾಟರ್’ ಸಿನಿಮಾದಲ್ಲಿ ವಿಎಫ್‌ಎಕ್ಸ್ ತಂತ್ರಜ್ಞಾನವನ್ನು ಅತ್ಯಂತ ಉನ್ನತವಾಗಿ, ಶ್ರೇಷ್ಠವಾಗಿ ತೋರಿಸಲಾಗಿದೆ. ನೈಜತೆ ಎದ್ದು ಕಾಣುವಂತೆ ಅತ್ಯಂತ ಪರಿಶ್ರಮದಿಂದ ಸಿನಿಮಾವನ್ನು ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಹೊರತಂದಿದ್ದಾರೆ’ ಎಂದು ಮೆಚ್ಚುಗೆಗಳು ಕೇಳಿ ಬರುತ್ತಿವೆ.
3 ಗಂಟೆ 11 ನಿಮಿಷ ಇರುವಈ ಚಿತ್ರ ಭಾರತದಲ್ಲಿ ಸುಮಾರು 3,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. 4ಡಿಎಕ್ಸ್ಆರ್3ಡಿ ಶೋಗಳಒಂದು ಟಿಕೆಟ್ ದರ ಮಲ್ಟಿಪೆಕ್ಸ್‌ಗಳಲ್ಲಿ ₹2,500ರವರೆಗೆ ಇದೆ. 3ಡಿ ಶೋಗಳ ದರ ಕೂಡ ₹1500ರವರಗೆ ಇವೆ.‘20th ಸೆಂಚುರಿ ಸ್ಟುಡಿಯೋಸ್ ಇಂಡಿಯಾ’ ಕಂಪನಿ ಭಾರತದಲ್ಲಿ ಈ ಚಿತ್ರವನ್ನು ಹಂಚಿಕೆ ಮಾಡುತ್ತಿದೆ.
ಇಷ್ಟು ದೊಡ್ಡಮೊತ್ತದ ಬಂಡವಾಳ ಹಾಕಿರುವ ನಿರ್ಮಾಪಕರು ಚಿತ್ರಕ್ಕೆ ಹೇಗೆ ಪ್ರತಿಕ್ರಿಯೆ ಸಿಗುತ್ತದೆ ಎಂದು ಎದುರು ನೋಡುತ್ತಿದ್ದಾರೆ. ನಿರ್ದೇಶಕ ಕೆಮರೂನ್ ಕೂಡ ಈ ಚಿತ್ರಕ್ಕೆ ಸಹನಿರ್ಮಾಪಕರಾಗಿದ್ದಾರೆ.
ನಟರಾದ ವರ್ಥಿಂಗ್‌ಟನ್, ಜೋ ಸಲ್ಡಾನಾ, ಸ್ಟೀಪನ್ ಲಾಂಗ್, ಮಿಚಲ್ ರೋಡ್ರಿಗಜ್, ಸಿಗೋರನಿ ವೇವರ್, ಕೇಟ್ ವಿನ್ಸ್‌ಲೆಟ್ ಸೇರಿದಂತೆ ಹಲವರು ಮುಖ್ಯ ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.