ಚಿತ್ರ: ‘ರಂಗನಾಯಕಿ ವಾಲ್ಯೂಮ್ 1 -ವರ್ಜಿನಿಟಿ’
ನಿರ್ಮಾಣ: ಎಸ್.ವಿ. ನಾರಾಯಣ್
ನಿರ್ದೇಶನ: ದಯಾಳ್ ಪದ್ಮನಾಭನ್
ತಾರಾಗಣ: ಅದಿತಿ ಪ್ರಭುದೇವ, ಶ್ರೀನಿ, ತ್ರಿವಿಕ್ರಮ್, ಸುಚೇಂದ್ರಪ್ರಸಾದ್, ಸುಂದರ್‌ರಾಜ್
ಪರಿಚಿತರು, ನೆರೆಹೊರೆಯವರು, ಬಂಧುಗಳಿಂದಲೇ ಮಹಿಳೆಯರು ಅತ್ಯಾಚಾರಕ್ಕೆ ಹೆಚ್ಚಾಗಿ ತುತ್ತಾಗುತ್ತಾರೆ. ಬಹುತೇಕ ಸಂತ್ರಸ್ತೆಯರಿಗೆ ತಮಗಿರುವ ಹಕ್ಕುಗಳ ಬಗ್ಗೆ ತಿಳಿದಿರುವುದಿಲ್ಲ. ಅಂತಹವರ ಒಡಲಾಳದ ಬೇಗೆ ಅವ್ಯಕ್ತ ಚರಿತ್ರೆಯಾಗಿಯೇ ಉಳಿಯುತ್ತದೆ. ‘ರಂಗನಾಯಕಿ ವಾಲ್ಯೂಮ್ 1 -ವರ್ಜಿನಿಟಿ’ ಚಿತ್ರದಲ್ಲಿ ಸ್ತ್ರೀ ಹಾಗೂ ಸ್ತ್ರೀತನವನ್ನು ಆರಾಧಿಸುವ ಮೂಲಕ ಆತ್ಮಗೌರವ ವೃದ್ಧಿಸಿಕೊಳ್ಳುವ ಸಂದೇಶ ಬಿತ್ತಿದ್ದಾರೆ ನಿರ್ದೇಶಕ ದಯಾಳ್ ಪದ್ಮನಾಭನ್.
ಪ್ರತಿದಿನ ಪುರುಷರ ಕ್ರೌರ್ಯಕ್ಕೆ ಸಿಲುಕುವ ಮಹಿಳೆಯರ ಸಂಕಟಗಳಿಗೆ ಕೊನೆ ಎಂಬುದಿಲ್ಲ. ಈ ಕೊನೆಮೊದಲಿಲ್ಲದ ಕಥೆಯನ್ನು ತೆರೆಯ ಮೇಲೆ ಸಾವಧಾನವಾಗಿ ಕಟ್ಟಿದ್ದಾರೆ. ಒಳಿತು, ಕೆಡುಕಿನ ಈ ಸಂಘರ್ಷಕ್ಕೆ ಕಾನೂನಿನ ಚೌಕಟ್ಟಿಯಲ್ಲಿಯೇ ಪರಿಹಾರ ಕಂಡುಕೊಳ್ಳುವ ಸಂದೇಶ ಸಾರಿದ್ದಾರೆ. ಪರದೆ ಮೇಲೆ ರಂಗನಾಯಕಿ(ಅದಿತಿ ಪ್ರಭುದೇವ) ಒಂದು ಕಥೆಯಾಗಿ ಉಳಿಯುವುದಿಲ್ಲ. ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಎಣೆಯಿಲ್ಲದ ಸಂಕಟಗಳಿಗೆ ಕನ್ನಡಿ ಹಿಡಿಯುತ್ತಾಳೆ.
ಚಿತ್ರದಲ್ಲೊಂದು ದೃಶ್ಯವಿದೆ. ಪ್ರಿಯಕರನ ಕುಟುಂಬದ ಸದಸ್ಯರಿಗೆ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ರಂಗನಾಯಕಿ ತಿಳಿಸುತ್ತಾಳೆ. ಆಕೆಯ ದಿಟ್ಟ ಧೈರ್ಯ ಅವರಿಗೆ ಅಪಥ್ಯವಾಗುತ್ತದೆ. ಬಳಿಕ ಆಕೆ ಶಾಲೆಗೆ ಬರುತ್ತಾಳೆ. ಅಲ್ಲಿ ಲೈಂಗಿಕ ದೌರ್ಜನ್ಯ ಎದುರಿಸಲಾರದೆ ಆಕೆಯ ಸ್ನೇಹಿತೆ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಅಂತಹ ಅಸಹಾಯಕ ಸ್ಥಿತಿಯಲ್ಲೂ ಆಕೆಯದು ದಣಿವರಿಯದ ಹೋರಾಟ.
ರಂಗನಾಯಕಿ ಸಂಗೀತ ಶಿಕ್ಷಕಿ. ಅಪಾರ್ಟ್‌ಮೆಂಟ್‌ನಲ್ಲಿ ಅವಳ ವಾಸ. ಅಲ್ಲಿ ತನ್ನ ಸಹೋದರರು ಎಂದು ನಂಬಿದ ನಾಲ್ವರು ಹುಡುಗರಿಂದಲೇ ಅತ್ಯಾಚಾರಕ್ಕೆ ತುತ್ತಾಗುತ್ತಾಳೆ. ಕೊನೆಗೆ, ಸಮಾಜದಲ್ಲಿ ಹೇಗೆ ಬದುಕು ಕಟ್ಟಿಕೊಳ್ಳುತ್ತಾಳೆ ಎನ್ನುವುದೇ ಸಿನಿಮಾದ ಹೂರಣ.
ಚಿತ್ರದ ಮೊದಲಾರ್ಧ ಪಾತ್ರಗಳ ಪರಿಚಯಕ್ಕಷ್ಟೇ ಮೀಸಲು. ಕಥೆಯು ಧಾರಾವಾಹಿಯ ನಿರೂಪಣಾ ಶೈಲಿ ಪಡೆದು ನೋಡುಗರ ಸಹನೆಯನ್ನೂ ಪರೀಕ್ಷೆಗೊಡ್ಡುತ್ತದೆ. ದ್ವಿತೀಯಾರ್ಧದಲ್ಲಿ ರಂಗನಾಯಕಿ ಹೋರಾಟಕ್ಕಿಳಿದಾಗ ಕಥೆಗೊಂದು ಲಯ ಸಿಗುತ್ತದೆ.
ತಾನು ನಂಬಿದವರಿಂದಲೇ ಅತ್ಯಾಚಾರಕ್ಕೆ ತುತ್ತಾದ ಬಗೆಯನ್ನು ರಂಗನಾಯಕಿ ತೆರೆದಿಡುವುದು ಸಹೃದಯರನ್ನು ತಲ್ಲಣಗೊಳಿಸುವಂತಿದೆ. ನಮ್ಮನ್ನೂ ಒಳಗೊಂಡ ಸಮಾಜದ ಕರಾಳಮುಖ ಕಂಡಾಗ ಅಸಹನೀಯವಾಗುತ್ತದೆ. ಮಾದಕ ದ್ರವ್ಯವು ಸಮಾಜಕ್ಕೆ ಒಡ್ಡುತ್ತಿರುವ ಸವಾಲಿನ ಕಥೆಯೂ ಇಲ್ಲಿದೆ. ಮಕ್ಕಳ ಮೇಲೆ ವಾತ್ಸಲ್ಯವನ್ನಷ್ಟೇ ಬೆಳೆಸಿಕೊಂಡು ಜವಾಬ್ದಾರಿ ಮರೆತ ಪೋಷಕರ ಮುಖವಾಡವನ್ನು ಚಿತ್ರ ಬಿಚ್ಚಿಡುತ್ತದೆ.
ಅದಿತಿ ಪ್ರಭುದೇವ,ಶ್ರೀನಿ, ತ್ರಿವಿಕ್ರಮ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯ ಒಂದು ಹಾಡು ಗುನುಗುವಂತಿದೆ. ರಾಕೇಶ್ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೇ ಸಹನೀಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.