ತನುಶ್ರೀ ದತ್ತಾ ಸೇರಿದಂತೆ ಹಲವು ನಟಿಯರು ಹಾಗೂ ಯುವತಿಯರು ಬಾಲಿವುಡ್‌ನಲ್ಲಿ ತಮಗಾದ ಕೆಟ್ಟ ಅನುಭವಗಳ ಬಗ್ಗೆ ಮಿ–ಟೂ ಅಭಿಯಾನದಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರಿಕೊಂಡವರು ಸ್ಟಾರ್ ನಟಿ ಅದಿತಿ ರಾವ್ ಹೈದರಿ ಅವರು.
‘ನಾನು ಆಗಷ್ಟೇ ಸಿನಿಮಾ ಕ್ಷೇತ್ರಕ್ಕೆ ಹೊಸದಾಗಿ ಕಾಲಿಟ್ಟಿದ್ದೆ. ಅವಕಾಶಕ್ಕಾಗಿ ಕಷ್ಟಪಡುತ್ತಿದ್ದ ಸಮಯದಲ್ಲಿ ನನಗೊಂದು ಕಟ್ಟ ಅನುಭವವಾಯಿತು. ‘ನನ್ನ ಆಸೆ ಈಡೇರಿಸಿದ್ರೆ ನಿನಗೆ ಮೂರು ಸಿನಿಮಾಗಳಲ್ಲಿ ಅವಕಾಶ ಕೊಡುತ್ತೇನೆ’ ಎಂದು ಗಣ್ಯ ವ್ಯಕ್ತಿಯೊಬ್ಬರು ಹೇಳಿದ್ದರು. ಅದಕ್ಕೆ ಒಪ್ಪದೇ ನಾನುತಕ್ಷಣ ವಾಪಸ್ ಬಂದೆ’ ಎಂದು ಅದಿತಿ ಹೇಳಿಕೊಂಡಿದ್ದಾರೆ.
‘ನಾನು ಇಂಡಸ್ಟ್ರಿಗೆ ಹೊಸಬಳು. ಆದರೆ, ಇಂತಹ ಒಪ್ಪಂದಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವಂತಹ ವಾತಾವರಣದಲ್ಲಿ ಬೆಳೆದವಳಲ್ಲ. ಅಂಥವರಿಗೆ ಬಗ್ಗದೆ ನನ್ನ ಆತ್ಮರಕ್ಷಣೆ ಮಾಡಿಕೊಂಡು ಮುಂದೆ ಸಾಗಿದೆ. ಸಿನಿಮಾಗಳಲ್ಲಿ ಒಳ್ಳೆಯ ಅವಕಾಶಗಳು ಸಿಕ್ಕವು. ಸಿನಿಮಾ ರಂಗಕ್ಕೆ ಹೊಸದಾಗಿ ಬಂದವರು ಬೆಳೆಯುವುದು ತುಂಬಾ ಕಷ್ಟ. ಹಾಗಂತ ಅದು ಅಸಾಧ್ಯವಾದ ಕೆಲಸವೇನೂ ಅಲ್ಲ. ಅದಕ್ಕೆ ನಾನೇ ಉದಾಹರಣೆ. ನಮಗೆ ಎದುರಾಗುವ ಕೆಲ ಕೆಟ್ಟ ಪರಿಸ್ಥಿತಿಗಳನ್ನು ನಾವು ಹೇಗೆ ಡೀಲ್ ಮಾಡುತ್ತೇವೆ ಎನ್ನುವುದರ ಮೇಲೆ ನಮ್ಮ ವೃತ್ತಿ ಜೀವನ ನಿರ್ಧಾರವಾಗುತ್ತದೆ’ ಎಂದಿದ್ದಾರೆ.
‘ ಎಲ್ಲ ಕ್ಷೇತ್ರಗಳಲ್ಲಿಯೂ ಇಂತಹ ಜನರು ಇರುತ್ತಾರೆ’ ಎನ್ನುವ ಅವರು ಚಿತ್ರರಂಗ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ವಾದವನ್ನು ಒಪ್ಪುವುದಿಲ್ಲ. ‘ಸಿನಿಮಾ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಬೇರೆ ಬೇರೆ ಮನಸ್ಥಿತಿವುಳ್ಳ ವ್ಯಕ್ತಿಗಳಿರುತ್ತಾರೆ. ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ’ ಅನ್ನುತ್ತಾರೆ ಅವರು.
ಮಿ–ಟೂ ಅಭಿಯಾನ ಇತ್ತೀಚೆಗೆ ಬಾಲಿವುಡ್‌ನಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಲೈಂಗಿಕ ಕಿರುಕುಳ ಆರೋಪ ಮಾಡಿದ ಬಳಿಕ ಬಾಲಿವುಡ್‌ನಲ್ಲಿ ಅಂತಹದ್ದೇ ಹಲವಾರು ಆರೋಪಗಳು ಕೇಳಿಬರುತ್ತಿವೆ.ದೊಡ್ಡ ದೊಡ್ಡ ನಟ, ನಿರ್ದೇಶಕ, ನಿರ್ಮಾಪಕ, ಗಾಯಕರಂತಹ ಘಟಾನುಘಟಿಗಳ ವಿರುದ್ಧವೂ ಲೈಂಗಿಕ ಕಿರುಕುಳದ ಆರೋಪ ಕೇಳಿಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.