ಐದು ವರ್ಷದ ಹಿಂದೆ ಪಿ. ವಾಸು ನಿರ್ದೇಶನದಡಿ ಬಿಡುಗಡೆಗೊಂಡಿದ್ದ ‘ದೃಶ್ಯ’ ಚಿತ್ರ ಸೂಪರ್ ಹಿಟ್ ಆಗಿತ್ತು. ಅದು ಮಲಯಾಳದ ‘ದೃಶ್ಯಂ’ ಚಿತ್ರದ ರಿಮೇಕ್. ಸಸ್ಪೆನ್ಸ್, ಕ್ರೈಮ್– ಥ್ರಿಲ್ಲರ್ ಜಾನರ್‌ನ ಈ ಕಥೆ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ರವಿಚಂದ್ರನ್ ಅವರ ಮನೋಜ್ಞ ಅಭಿನಯಕ್ಕೆ ಜನರು ತಲೆದೂಗಿದ್ದರು. ರಾಜೇಂದ್ರ ಪೊನ್ನಪ್ಪನಾಗಿ ಅವರು ‘ದೃಶ್ಯ’ಗಳ ಮೂಲಕ ಜನರ ಭಾವವನ್ನು ಮೀಟಿದ್ದರು.
ಈಗ ಅವರೇ ನಾಯಕನಾಗಿರುವ ಅದೇ ಮಾದರಿಯ ‘ಆ...ದೃಶ್ಯ’ ಸಿನಿಮಾ ನವೆಂಬರ್ 8ರಂದು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ಅವರದು ಯಂಗ್‌ಮ್ಯಾನ್ ಗೆಟಪ್. ಅವರದು ನಿಗೂಢ ಕೊಲೆ ಪ್ರಕರಣವೊಂದನ್ನು ಭೇದಿಸುವ ತನಿಖಾಧಿಕಾರಿಯ ಪಾತ್ರವಂತೆ. ಸೈಕೊಪಾತ್‌ವೊಬ್ಬ ಕೊಲೆ ಮಾಡುವ ಸನ್ನಿವೇಶವನ್ನು ರೋಚಕವಾಗಿ ಭೇದಿಸುವುದೇ ಈ ಸಿನಿಮಾದ ತಿರುಳು.
ಈ ಹಿಂದೆ ‘ಜಿಗರ್‌ಥಂಡ’ ಮತ್ತು ‘ತ್ರಾಟಕ’ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಶಿವಗಣೇಶ್ ಈ ಸಿನಿಮಾ ನಿರ್ದೇಶಿಸಿದ್ದಾರೆ. ಇದು ತಮಿಳಿನ ‘ಧ್ರುವಂಗಳ್ 16’ ಚಿತ್ರದ ಕನ್ನಡ ಅವತರಣಿಕೆ. ಸಸ್ಪೆನ್ಸ್, ಥ್ರಿಲ್ಲರ್ ಜಾನರ್‌ನ ಈ ಚಿತ್ರದಲ್ಲಿ ರವಿಚಂದ್ರನ್ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮಾದರಿಯ ಪಾತ್ರ ಅವರಿಗೂ ಹೊಸದು. ಅವರ ಸಿನಿಮಾಗಳಲ್ಲಿ ಹಾಡುಗಳ ಮಾಧುರ್ಯ ಇರುವುದು ಸರ್ವೇ ಸಾಮಾನ್ಯ. ಆದರೆ, ಚಿತ್ರದ ಬ್ಯಾಕ್‌ಡ್ರಾಪ್‌ನಲ್ಲಿ ಒಂದು ಹಾಡು ಮಾತ್ರ ಇದೆಯಂತೆ. ಜೊತೆಗೆ, ಇದು ಅವರು ಹೀರೊಯಿನ್ ಇಲ್ಲದೆ ನಟಿಸುತ್ತಿರುವ ಮೊದಲ ಸಿನಿಮಾವೂ ಹೌದು.
‘ಕನ್ನಡದ ನೇಟಿವಿಟಿಗೆ ತಕ್ಕಂತೆ ಮೂಲ ಕಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಚಿತ್ರಕಥೆ, ಸಂಭಾಷಣೆಯಲ್ಲಿ ಸಂಪೂರ್ಣ ಬದಲಾವಣೆ ಕಾಣಬಹುದು. ರವಿಚಂದ್ರನ್ ಅವರ ಹೊಸ ಲುಕ್ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎನ್ನುವುದು ಶಿವಗಣೇಶ್ ಅವರ ವಿಶ್ವಾಸ. ಚಿತ್ರಕ್ಕೆ ಬಂಡವಾಳ ಹೂಡಿರುವುದು ಕೆ. ಮಂಜು. ಗೌತಮ್ ಶ್ರೀವತ್ಸ ಅವರ ಸಂಗೀತ ನಿರ್ದೇಶನವಿದೆ. ಛಾಯಾಗ್ರಹಣ ವಿನೋದ್ ಭಾರತಿ ಅವರದು. ಮೃಗಶಿರ ಶ್ರೀಕಾಂತ್ ಸಂಭಾಷಣೆ ಬರೆದಿದ್ದಾರೆ. ನಿಸರ್ಗ, ಅರ್ಜುನ್ ಗೌಡ, ಯಶ್ ಶೆಟ್ಟಿ, ಚೈತ್ರಾ ಆಚಾರ್, ಅಚ್ಯುತ್‌ಕುಮಾರ್, ರಮೇಶ್ ಭಟ್ ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.