ಶರಣ್ ಮತ್ತು ರಾಗಿಣಿ ದ್ವಿವೇದಿ ನಟನೆಯ ‘ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರ ಅಕ್ಟೋಬರ್ 4ರಂದು ಬಿಡುಗಡೆಯಾಗುತ್ತಿದೆ. ಇದು ಮಲಯಾಳದ ‘ಟು ಕಂಟ್ರೀಸ್’ ಚಿತ್ರದ ಕನ್ನಡ ಅವತರಣಿಕೆ.
ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ‘ಇದು ರಿಮೇಕ್ ಚಿತ್ರವಾದರೂ ಇಲ್ಲಿನ ನೇಟಿವಿಟಿಗೆ ತಕ್ಕಂತೆ ಕಥೆಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ’ ಎಂದರು ನಿರ್ದೇಶಕ ಯೋಗಾನಂದ್ ಮುದ್ದಾನ್. ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನು ಅವರೇ ನಿಭಾಯಿಸಿದ್ದಾರೆ.
67 ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಅಮೆರಿಕದ ಸಿಯಾಟಲ್‌ನಲ್ಲಿಯೇ ಸಿನಿಮಾದ ಶೇಕಡ 70ರಷ್ಟು ಸನ್ನಿವೇಶಗಳು ಹಾಗೂ ಮೂರು ಹಾಡುಗಳ ಚಿತ್ರೀಕರಣ ನಡೆದಿದೆ. ಅಲ್ಲಿ ಹದಿನೇಳು ಜನರ ತಂಡ ಶೂಟಿಂಗ್‌ನಲ್ಲಿ ಪಾಲ್ಗೊಂಡಿತ್ತಂತೆ.
‘ಅದು ಸೂಕ್ಷ್ಮವಾದ ಸ್ಥಳ. ಅಲ್ಲಿಗೆ ಹೋಗಲು ವೀಸಾ ಸಿಗುವುದೇ ಕಷ್ಟಕರವಾಗಿತ್ತು. ಎಲ್ಲಾ ಅಡೆತಡೆ ದಾಟಿಕೊಂಡು ಶರಣ್ ಜನರ ಮುಂದೆ ಬರುತ್ತಿದ್ದಾರೆ. ಅವರು ಅಧ್ಯಕ್ಷ ಆದ ಬಳಿಕ ಅಮೆರಿಕಕ್ಕೆ ಹೋಗಿ ಏನು ಮಾಡುತ್ತಾರೆ ಎನ್ನುವುದೇ ಚಿತ್ರದ ತಿರುಳು. ಇದಕ್ಕೆ ಕಾಮಿಡಿಯ ಲೇಪನ ಹಚ್ಚಲಾಗಿದೆ’ ಎಂದು ವಿವರಿಸಿದರು ಯೋಗಾನಂದ್.
‘ಕಥೆಯ ಒಂದು ಎಳೆ ಕೇಳಿದಾಗಲೇ ಇದು ಹೆಚ್ಚಿನ ಬಂಡವಾಳ ಬೇಡುವ ಸಿನಿಮಾವೆಂದು ಅರ್ಥವಾಯಿತು. ನಿರ್ಮಾಪಕರು ಅಮೆರಿಕ ವಾಸಿಯೇ ಆಗಿರುವುದರಿಂದ ಚಿತ್ರತಂಡವನ್ನು ಅಲ್ಲಿಗೆಯೇ ಕರೆದೊಯ್ದು ಸಿನಿಮಾ ಮಾಡಿಸಿದ್ದು ಖುಷಿ ನೀಡಿತು’ ಎಂದು ಶ್ಲಾಘಿಸಿದರು
ನಟ ಶರಣ್.‘ವಿ. ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕೆ ಹೊಸತನ ನೀಡಿದೆ. ಅಧ್ಯಕ್ಷನ ಗುಣ ಹೊಂದಿರುವ ನಾನು ಅಲ್ಲಿಗೆ ಹೋದಾಗ ಯಾವ ಪರಿಸ್ಥಿತಿಗೆ ಸಿಲುಕುತ್ತೇನೆ ಎನ್ನುವುದೇ ನನ್ನ ಪಾತ್ರ’ ಎಂದರು.
ಇದನ್ನೂ ಓದಿ: ಶರಣ್... ವಿಜಯ?
ರಾಗಿಣಿ ದ್ವಿವೇದಿ ಅಧ್ಯಕ್ಷನಿಗೆ ಜೋಡಿಯಾಗಿದ್ದಾರೆ. ಅವರು ಗ್ಲಾಮರಸ್ ಹಾಗೂ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರಂತೆ. ಸುಧಾಕರ್ ಎಸ್. ರಾಜ್, ಸಿದ್ಧಾರ್ಥ್ ರಾಮಸ್ವಾಮಿ, ಅನೀಶ್ ತರುಣ್ ಕುಮಾರ್ ಅವರ ಛಾಯಾಗ್ರಹಣವಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಡಿ ವಿಶ್ವಪ್ರಸಾದ್ ಟಿ.ಜಿ. ಆರ್ಥಿಕ ಇಂಧನ ಒದಗಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.