ತಲೆ ಬ್ರೇಕ್ ಆಗಿರುವ ಪೋಸ್ಟರಿನ ಮೂಲಕವೇ ಗಮನಸೆಳೆದಿದ್ದ ‘ಒಂದು ಸಣ್ಣ ಬ್ರೇಕ್‌ನ ನಂತರ’ ಸಿನಿಮಾ ಈಗ ತೆರೆಯ ಮೇಲೆ ಬರಲು ಸಜ್ಜಾಗಿದೆ. ಈ ವಾರ ಅದು ಸುಮಾರು ಐವತ್ತರಿಂದ ಅರವತ್ತು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಐದು ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ನಂತರ ರಾಜೀನಾಮೆ ನೀಡಿ ಸಿನಿಮಾ ಕ್ಷೇತ್ರಕ್ಕೆ ಅಡಿಯಿಟ್ಟ ಅಭಿಲಾಷ್ ಗೌಡ ಈ ಚಿತ್ರದ ನಿರ್ದೇಶಕರು.
‘ಬ್ರೇಕ್ ಎಂದರೆ ಮುಂದೆ ಏನೋ ಬದಲಾವಣೆ ಆಗುತ್ತದೆ ಎನ್ನುವ ಸೂಚನೆ. ಸಾಧಾರಣ ಮನುಷ್ಯನ ಜೀವನದಲ್ಲಿ ಬ್ರೇಕ್‌ನ ನಂತರ ಏನು ಬದಲಾವಣೆ ಆಗುತ್ತದೆ ಎನ್ನುವುದೇ ಈ ಸಿನಿಮಾ’ ಎಂಬುದು ಅವರ ವಿವರಣೆ.
ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್‌ನ ಈ ಸಿನಿಮಾ ಮಂಡ್ಯದ ಕಡೆಯ ಪ್ರಾದೇಶಿಕ ಪರಿಸರದಲ್ಲಿ ನಡೆಯುವ ಕಥೆಯಂತೆ. ‘ಯಾವುದೇ ಸಂದೇಶ ನೀಡುವುದು ನಮ್ಮ ಸಿನಿಮಾದ ಉದ್ದೇಶ ಅಲ್ಲ. ಲವ್, ಸೆಂಟಿಮೆಂಟ್ ಇದೆ. ಅರ್ಧಭಾಗ ಕಾಮಿಡಿ. ಕೊನೆಯ ಹದಿನೈದು ನಿಮಿಷ ಸಸ್ಪೆನ್ಸ್ ಥ್ರಿಲ್ಲರ್ ಇದೆ’ ಎಂದು ನಿರ್ದೇಶಕರು ವಿವರಣೆ ನೀಡುತ್ತಾರೆ. ನಾಲ್ಕು ಹುಡುಗರ ಬದುಕಿನಲ್ಲಿ ನಡೆಯುವ ಕಥೆಯನ್ನು ಅವರು ಸಿನಿಮಾ ಆಗಿಸಿದ್ದಾರೆ.
ಈ ಚಿತ್ರದ ಸಂಗೀತ ನಿರ್ದೇಶನ ಮಾಡುವುದರ ಜತೆಗೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಹಿತನ್ ಹಾಸನ್.
‘ಸಂಗೀತ ನಿರ್ದೇಶಕನಾಗಿ ಬಂದ ನಾನು ಈ ಚಿತ್ರದಲ್ಲಿ ನಟನಾಗಿಯೂ ಗುರುತಿಸಿಕೊಂಡಿದ್ದೇನೆ. ಚಿತ್ರದ ಕಥೆಯನ್ನೂ ನಾನೇ ಬರೆದಿದ್ದೇನೆ. ಕಟಿಂಗ್ ಷಾಪ್‌ನಲ್ಲಿ ಕೆಲಸಮಾಡುವ ಅಂಗವಿಕಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರದ ಹಾಡುಗಳಿಗೂ ಒಳ್ಳೆ ಸ್ಪಂದನ ಸಿಗುತ್ತಿರುವುದು ಖುಷಿ ನೀಡುತ್ತಿದೆ’ ಎಂದರು ಹಿತನ್.
ಚೇತನ್ ಎಂಬ ಹೊಸ ನಟ ಅಮ್ಮಣ್ಣಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಅವರ ನಿಜಜೀವನದಲ್ಲಿ ಗೆಳೆಯರೆಲ್ಲರೂ ಅವರನ್ನು ಅಮ್ಮಣ್ಣಿ ಎಂದೇ ಕರೆಯುತ್ತಾರಂತೆ.
ನಾಲ್ವರು ನಾಯಕರಿಗೆ ಒಬ್ಬಳೇ ನಾಯಕಿಯಾಗಿ ಚೈತ್ರಾ ಮಲ್ಲಿಕಾರ್ಜುನ ಕಾಣಿಸಿಕೊಂಡಿದ್ದಾರೆ. ಗೀತಾ ಎಂಬುದು ಅವರ ಪಾತ್ರದ ಹೆಸರು. ‘ತುಂಬ ಗೌರವಸ್ಥ ಕುಟುಂಬದ ಹುಡುಗಿ. ಪ್ರೇಮದ ಭಾವನೆಯ ಜತೆಗೆ ಅಪ್ಪ ಮಗಳ ಸಂಬಂಧದ ಕುರಿತೂ ಹೇಳುವ ಸಿನಿಮಾ ಇದು’ ಎಂದು ವಿವರಣೆ ನೀಡಿದರು ಚೈತ್ರಾ.
ಅಡಪ ಸಮಾಜದವರು ಚಿತ್ರದಲ್ಲಿನ ಕೆಲವು ಸಂಭಾಷಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರಂತೆ. ಆದರೆ, ಅಂಥ ಯಾವ ಸಂಭಾಷಣೆಗಳೂ ಇಲ್ಲ. ಹಳ್ಳಿಗಳ ಕಡೆಗೆ ಸಹಜವಾಗಿ ಬಳಸುವ ಪದಗಳನ್ನೇ ಬಳಸಿದ್ದೇವೆ ಎಂಬ ಸ್ಪಷ್ಟನೆಯನ್ನೂ ಚಿತ್ರತಂಡ ನೀಡಿತು. ನಾಗರಾಜ್ ಉಪ್ಪುಂದ ಛಾಯಾಗ್ರಹಣ ಇರುವ ಚಿತ್ರವನ್ನು ಸರ್ವಶ್ರೀ ನಿರ್ಮಾಣ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.