‘ಅಗ್ನಿಸಾಕ್ಷಿಯ’ ಖಳನಾಯಕಿಯಾಗಿ, 'ಬಿಗ್‌ಬಾಸ್'ನಲ್ಲಿ ನೈಜತೆಯ ಮೂಲಕ ಜನರ ಪ್ರೀತಿ ಗಳಿಸಿದ್ದ ನಟಿ ಪ್ರಿಯಾಂಕಾ ಈಗ ಕಿರುತೆರೆಯಿಂದ ಹಿರಿತೆರೆಗೆ ಬಡ್ತಿ ಪಡೆದಿರುವ ಸಂಭ್ರಮದಲ್ಲಿದ್ದಾರೆ.
ಬೆಂಗಳೂರಿನವರೇ ಆದ ಪ್ರಿಯಾಂಕಾ, ಪದವಿ ಓದುತ್ತಿದ್ದಾಗಲೇ ಬಣ್ಣದ ಲೋಕ ಪ್ರವೇಶಿಸಿದರು. ಈವರೆಗೂ ಎಂಟು ಧಾರಾವಾಹಿಗಳಲ್ಲಿ ನಟಿಸಿರುವ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು ಅಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರ. ಅದಾಗಲೇ ಜನಪ್ರಿಯವಾಗಿದ್ದ ಈ ಪಾತ್ರವನ್ನು ಇವರು ಪ್ರವೇಶಿಸಿದ್ದು ತಡವಾಗಿಯಾದರೂ, ಅದನ್ನು ನಿಭಾಯಿಸಿದ್ದ ರೀತಿ ಹಳೆಯ ಪಾತ್ರಧಾರಿಯನ್ನು ಮರೆಸುವಷ್ಟು ಪ್ರಬಲವಾಗಿತ್ತು.
ಈಗ ಅವರ ನಟನಾ ಕೌಶಲಕ್ಕೆ ಮತ್ತೊಂದು ಗರಿ ದೊರಕಿದೆ. ‘ಫ್ಯಾಂಟಸಿ’ ಸಿನಿಮಾದ ಮುಖ್ಯ ಪಾತ್ರದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಮುಕ್ತಾಯದ ಹಂತದಲ್ಲಿದೆ. ಒಂದೊಳ್ಳೆ ತಂಡ ಮತ್ತು ಪಾತ್ರ ಸಿಕ್ಕಿರುವ ಖುಷಿಯಲ್ಲಿದ್ದಾರೆ ಪ್ರಿಯಾಂಕಾ.
‘ಈ ಸಿನಿಮಾ ವಿಶಿಷ್ಟವಾದ ಅನುಭವವನ್ನು ನೀಡಿದೆ. ಪಾತ್ರ ನಿರ್ವಹಣೆಯೂ ಕಷ್ಟ ಎನಿಸಿಲ್ಲ. ಹಿಂದಿನಂತೆ ಇದರಲ್ಲಿಯೂ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ, ಅಗ್ನಿಸಾಕ್ಷಿಯಲ್ಲಿನ ಪಾತ್ರಕ್ಕೂ ಈ ಪಾತ್ರಕ್ಕೂ ತುಂಬಾ ವ್ಯಾತ್ಯಾಸವಿದೆ. ಅಷ್ಟೊಂದು ಕೆಟ್ಟ ಬುದ್ಧಿ ಇಲ್ಲಿ ಪ್ರದರ್ಶಿಸಿಲ್ಲ. ಕೆಲಸದ ವಿಷಯ ಬಂದಾಗ ನಾನು ಕಿರುತೆರೆ, ಹಿರಿತೆರೆ ಎಂದು ಭೇದ ಮಾಡುವುದಿಲ್ಲ. ಹಾಗಾಗಿ ತುಂಬಾ ಕಡಿಮೆ ಸಮಯದಲ್ಲಿ ಈ ಸಿನಿಮಾ ಶೂಟಿಂಗ್ ಮುಗಿಸಿದೆ. ಈ ಚಿತ್ರದಲ್ಲಿ ನನ್ನದೊಂದು ವಿಶೇಷ ಪಾತ್ರ’ ಎಂದು ಒಂದೇ ಉಸಿರಿಗೆ ತಮ್ಮ ಪಾತ್ರದ ವರದಿ ಒಪ್ಪಿಸಿದರು.
ಸವಾಲೊಡ್ಡುವ ಪಾತ್ರಗಳ ನಿರೀಕ್ಷೆಯಲ್ಲಿದ್ದ ಅವರಿಗೆ, ಮಾಮೂಲಿ ಜಾಡಿಗಿಂತ ವಿಭಿನ್ನವಾಗಿರುವ ಪಾತ್ರವಿದೆ ಎಂಬ ನಿರೀಕ್ಷೆಯನ್ನು ಫ್ಯಾಂಟಸಿ ಸಿನಿಮಾ ನನಸಾಗಿಸಿದೆಯಂತೆ. ಆದರೆ, ಮುಂದಿನ ದಿನಗಳಲ್ಲಿ ನೆಗೆಟಿವ್ ಪಾತ್ರದ ಹೊರತಾಗಿಯೂ ನಟನೆಯ ಚಾಕಚಕ್ಯತೆಯನ್ನು ಪ್ರದರ್ಶಿಸಬೇಕೆಂಬ ಹಂಬಲ ವ್ಯಕ್ತಪಡಿಸುತ್ತಾರೆ.
ಬಿಗ್‌ಬಾಸ್‌ನಲ್ಲಿ ಅಂತಿಮ ಹಂತದವರೆಗೂ ಗೆಲುವಿಗಾಗಿ ಸೆಣಸಾಡಿದ ಪ್ರಿಯಾಂಕಾಗೆ ಗೆಲುವು ದೊರಕದಿದ್ದರೂ, ಜನಪ್ರೀತಿ ಗಳಿಸಿದ ತೃಪ್ತಿ ಇದೆ. ಆದರೆ ಅದನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗದ ದುಃಖವೂ ಇದೆ.
‘ಬಿಗ್‌ಬಾಸ್‌ನಿಂದ ಹೊರಬಂದ ಕೆಲವೇ ದಿನಗಳಲ್ಲಿ ಕೊರೊನಾ ಪರಿಸ್ಥಿತಿ ಎದುರಾಗಿದ್ದರಿಂದ ಆ ಖುಷಿಯನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗಲಿಲ್ಲ. ನಟನೆಯ ಅವಕಾಶವೂ ದೊರಕದೆ ಬಿಡುವು ಪಡೆಯುವ ಅನಿವಾರ್ಯತೆಯೂ ಎದುರಾಯಿತು. ‘ಫ್ಯಾಂಟಸಿ’ ಸಿನಿಮಾದ ಕಥೆ ಕೇಳಿದಾಗ ಮನಸ್ಸಿಗೆ ತುಂಬಾ ಆಪ್ತವೆನಿಸಿತು. ಕಥೆಯೇ ಪ್ರಧಾನವಾಗಿರುವ ಸಿನಿಮಾವಿದು. ಹಾಗಾಗಿ ತಕ್ಷಣವೇ ಒಪ್ಪಿಕೊಂಡೆ’ ಎಂದು ಕಣ್ಣರಳಿಸುತ್ತಾರೆ ಪ್ರಿಯಾಂಕಾ.
ಕಿರುತೆರೆ ತವರು ಮನೆ ಇದ್ದಂತೆ, ಉತ್ತಮ ಅವಕಾಶ ದೊರಕಿದರೆ ಧಾರಾವಾಹಿಗಳಲ್ಲೂ ನಟಿಸುತ್ತೇನೆ ಎನ್ನುವ ಪ್ರಿಯಾಂಕಾ, ನಟನಾ ಕೌಶಲದ ಪ್ರದರ್ಶನಕ್ಕೆ ಬೇಲಿ ಹಾಕಿಕೊಂಡಿಲ್ಲ. ಎಂಬಿಎ ಪದವಿಧರೆಯಾಗಿರುವ ಅವರು, ಭಿನ್ನ ಪಾತ್ರಗಳಿಗೆ ಜೀವ ತುಂಬುವ ಹವಣಿಕೆಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.