‘ನಾನಾಗ ಎರಡನೇ ತರಗತಿಯಲ್ಲಿದ್ದೆ. ಪ್ರತಿದಿನವೂ ವ್ಯಾನ್‌ನಲ್ಲಿಯೇ ಶಾಲೆಗೆ ಹೋಗುತ್ತಿದ್ದೆ. ಅದು ನನಗೆ ಎಳ್ಳಷ್ಟು ಇಷ್ಟವಿರಲಿಲ್ಲ. ಶಾಲೆಯಿಂದ ಅಪ್ಪನೇ ನನ್ನನ್ನು ಕರೆದೊಯ್ಯಬೇಕು ಎಂಬುದು ನನ್ನಾಸೆ. ಅದೊಂದು ದಿನ ಮನೆಗೆ ಕರೆದೊಯ್ಯಲು ವ್ಯಾನ್ ಅಂಕಲ್ ಸಜ್ಜಾಗಿದ್ದರು. ಅಪ್ಪ ಬಂದಿದ್ದಾರೆಂದು ಅವರಿಗೆ ಸುಳ್ಳು ಹೇಳಿಯೇ ಬಿಟ್ಟೆ. ರಸ್ತೆಬದಿ ನಿಂತಿದ್ದ ವ್ಯಕ್ತಿಯೊಬ್ಬರತ್ತ ಬೆರಳು ತೋರಿಸಿ ಅವರೇ ನನ್ನಪ್ಪ ಎಂದೆ. ವ್ಯಾನ್ ಹೋದ ಬಳಿಕ ಫೋನ್‌ಬೂತ್‌ನಿಂದ ಕರೆ ಮಾಡಿ ಅಪ್ಪನನ್ನು ಸ್ಕೂಲ್ ಹತ್ತಿರ ಕರೆಯಿಸಿದ್ದೆ...’
–ಹೀಗೆಂದು ಪಟಪಟನೇ ಒಂದೇ ಉಸಿರಿಗೆ ಹೇಳಿ ನಸು ನಕ್ಕರು ನಟಿ ಐಶಾನಿ ಶೆಟ್ಟಿ. ‘ವಾಸ್ತು ಪ್ರಕಾರ’ ಚಿತ್ರದಲ್ಲಿ ತುಂಟಿಯಾಗಿ, ‘ರಾಕೆಟ್’ ಸಿನಿಮಾದಲ್ಲಿ ಮುದ್ದು ಮುಖದ ಮುಗ್ಧೆಯಾಗಿ, ‘ನಡುವೆ ಅಂತರವಿರಲಿ’ ಚಿತ್ರದಲ್ಲಿ ಟಿನೇಜ್ ಹುಡುಗಿಯಾಗಿ ಮಿಂಚಿದ್ದರು. ಈಗ ‘ನಮ್ ಗಣಿ ಬಿ.ಕಾಂ ಪಾಸ್’ ಸಿನಿಮಾ ಮೂಲಕ ಮತ್ತೆ ಶಾಲಾ ದಿನಗಳತ್ತ ಹೊರಳಿದ್ದಾರೆ.
ಐಶಾನಿ ಬಣ್ಣದಲೋಕ ಪ್ರವೇಶಿಸಿ ನಾಲ್ಕು ವರ್ಷ ಸರಿದಿವೆ. ಅವರು ನಟಿಸಿದ ಚಿತ್ರಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಸ್ನಾತಕೋತ್ತರ ಪದವಿ ಪಡೆಯಲು ಚಿತ್ರರಂಗದಿಂದ ಅವರು ದೂರವಿದ್ದರು. ಈಗ ವಿದ್ಯಾರ್ಥಿ ಜೀವನ ಮುಗಿಸಿದ್ದು, ಸಂಪೂರ್ಣವಾಗಿ ನಟನೆಯಲ್ಲಿಯೇ ತೊಡಗಿಸಿಕೊಳ್ಳುವ ಹಂಬಲ ಅವರದು.
ಬಿಡುಗಡೆಗೆ ಸಿದ್ಧವಾಗಿರುವ ‘ನಮ್ ಗಣಿ ಬಿ.ಕಾಂ ಪಾಸ್’ ಸಿನಿಮಾ ಕುರಿತು ಅವರು ಹೇಳುವುದು ಹೀಗೆ: ‘ಇದರಲ್ಲಿ ನನ್ನದು ಎರಡು ಶೇಡ್ ಇರುವ ಪಾತ್ರ. ಹೈಸ್ಕೂಲ್ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಸಮವಸ್ತ್ರ ಧರಿಸಿದ ಕ್ಷಣವೇ ನನ್ನ ಶಾಲಾ ದಿನಗಳತ್ತ ಜಾರಿದೆ. ತರಗತಿ ಮುಗಿದ ತಕ್ಷಣ ನಾನು ಮತ್ತು ನನ್ನ ಸ್ನೇಹಿತೆ ಬೋರ್ಡ್ ಮೇಲೆ ಸೀಮೆಸುಣ್ಣದಿಂದ ಗೀಚುತ್ತಿದ್ದೆವು’ ಎಂದು ನೆನಪಿನ ಸುರಳಿಗೆ ಜಾರಿದರು.
ಇನ್ನೊಂದು ಶೇಡ್‌ನಲ್ಲಿ ಅವರದು ಮೆಚ್ಯೂರಿಟಿ ಇರುವ ಹುಡುಗಿಯ ಪಾತ್ರ. ಚಿತ್ರಕ್ಕೆ ತಿರುವು ನೀಡುವುದು ಇದೇ ಪಾತ್ರವಂತೆ. ‘ಮೆಟ್ರೊ ಲೈಫ್‌ನಲ್ಲಿ ಉದ್ಯೋಗ ಹುಡುಕುವಾಗ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಎನ್ನುವುದೇ ಚಿತ್ರದ ಹೂರಣ. ಇದರಲ್ಲಿ ಕೌಟುಂಬಿಕ ಮಹತ್ವ, ಎಮೋಷನ್ ಕೂಡ ಇದೆ. ಜೀವನ ಮೌಲ್ಯಗಳು ಮಿಳಿತವಾಗಿವೆ. ಎಲ್ಲರ ಮನೆಯಲ್ಲಿಯೂ ನಡೆಯುವ ಕಥೆ ಇದು. ಯುವಜನರಿಗೆ ಬಹುಬೇಗ ಕಥೆ ಕನೆಕ್ಟ್ ಆಗುತ್ತದೆ’ ಎಂಬುದು ಅವರ ವಿಶ್ವಾಸ.
ಕಳೆದ ವರ್ಷ ಅವರು ‘ಕಾಜಿ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದರು. ಅದಕ್ಕೆ 2018ರ ಸೈಮಾ ಕಿರುಚಿತ್ರ ಪ್ರಶಸ್ತಿಯೂ ಲಭಿಸಿತ್ತು. ಸಣ್ಣ ಕಥೆ, ಕವನ ಬರೆಯುವ ಹವ್ಯಾಸವೂ ಅವರಿಗಿದೆ. ಸದ್ಯಕ್ಕೆ ಸ್ನಾತಕೋತ್ತರ ಪದವಿ ಪೂರೈಸಿರುವ ಅವರಿಗೆ ನಟನೆಯೇ ಪ್ರಥಮ ಆದ್ಯತೆ. ಜೊತೆಗೆ, ಸಿನಿಮಾ ನಿರ್ದೇಶನದ ಕನಸನ್ನೂ ಕಣ್ಣಲ್ಲಿ ತುಂಬಿಕೊಂಡಿದ್ದಾರೆ.
‘ಕಿರುಚಿತ್ರಕ್ಕೆ ಒಳ್ಳೆಯ ಬೆಂಬಲ ಸಿಕ್ಕಿತು. ಈಗಾಗಲೇ, ಎರಡು ಸ್ಕ್ರಿಪ್ಟ್ ಬರೆದಿದ್ದೇನೆ. ಈಗಲೇ ಸಿನಿಮಾ ನಿರ್ದೇಶನ ಮಾಡಲು ಇಷ್ಟವಿಲ್ಲ. ನಾನಿನ್ನು ಕಲಿಯುವುದು ಸಾಕಷ್ಟಿದೆ. ಮುಂದೊಂದು ದಿನ ಸಿನಿಮಾ ನಿರ್ದೇಶನ ಮಾಡುತ್ತೇನೆ’ ಎನ್ನುತ್ತಾರೆ.
‘ನಾನು ನಟಿಸಿದ ಸಿನಿಮಾಗಳ ಸಂಖ್ಯೆ ಕಡಿಮೆ ಎನಿಸುತ್ತಿಲ್ಲ. ಬಹಳಷ್ಟು ನಟಿಯರು ಸಿನಿಮಾ ಮಾಡುವಾಗ ಓದುತ್ತಿರುವುದಿಲ್ಲ. ನಾನು ಓದುತ್ತಿದ್ದೆ. ಒಟ್ಟೊಟ್ಟಿಗೆ ಸಿನಿಮಾ, ಓದು ಎರಡನ್ನೂ ಮಾಡುತ್ತಿದ್ದೆ. ಪ್ರಾಂಶುಪಾಲರ ಅನುಮತಿ ಪಡೆದೇ ನಟಿಸಬೇಕಿತ್ತು. ಪದವಿ ಹಂತದಲ್ಲಿದ್ದಾಗ ವಾಸ್ತುಪ್ರಕಾರ ಮತ್ತು ರಾಕೆಟ್ ಸಿನಿಮಾದಲ್ಲಿ ನಟಿಸಿದೆ. ರಜೆ ಇದ್ದಾಗ ಮಾತ್ರ ಶೂಟಿಂಗ್‌ಗೆ ಹೋಗುತ್ತಿದ್ದೆ. ಅನುಮತಿ ಸಿಗದಿದ್ದರೆ ರಜಾ ದಿನಗಳವರೆಗೆ ಪ್ರೊಡಕ್ಷನ್ ಟೀಮ್‌ನವರು ನನ್ನನ್ನು ಕಾಯುತ್ತಿದ್ದರು. ನನಗೆ ಶಿಕ್ಷಣ ತುಂಬಾ ಮುಖ್ಯ. ಅದನ್ನು ಬಿಟ್ಟು ಸಿನಿಮಾ ಮಾಡಲು ನನಗೆ ಇಷ್ಟವಿರಲಿಲ್ಲ. ಈಗ ಆ್ಯಕ್ಟಿಂಗ್‌ನತ್ತ ಹೆಚ್ಚು ಗಮನಹರಿಸುತ್ತೇನೆ’ ಎಂದು ವಿವರಿಸುತ್ತಾರೆ.
ಯಾವುದೇ ಕನಸಿನ ಪಾತ್ರದಲ್ಲಿ ನಟಿಸುವ ಆಸೆ ಅವರಿಗೆ ಇಲ್ಲವಂತೆ. ‘ಯಾವುದೇ ಒಂದು ಪಾತ್ರ ಹೇಗೋ ಇಷ್ಟವಾಗಿಬಿಡುತ್ತದೆ. ಪಾತ್ರಗಳು ನಾವು ಅಂದುಕೊಂಡ ತರಹವೇ ಇರಬೇಕೆಂದು ಹೇಳಲು ಆಗುವುದಿಲ್ಲ. ಬರಹಗಾರರು ಆ ಪಾತ್ರವನ್ನು ಹೇಗೆ ಸೃಷ್ಟಿಸುತ್ತಾರೆ ಎನ್ನುವುದು ಮುಖ್ಯ. ಆದರೆ, ಎಫಿಕ್ ಸಿನಿಮಾಗಳಲ್ಲಿ ನಟಿಸಲು ನನಗಿಷ್ಟ. ಐತಿಹಾಸಿಕ ಪಾತ್ರವೊಂದರ ಭಾಗವಾಗಬೇಕೆಂಬ ಆಸೆಯಿದೆ’ ಎಂದು ಕಣ್ಣರಳಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.