ಬೆಂಗಳೂರು: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಮತ್ತೊಂದು ಹೊಸ ಸಿನಿಮಾ ಘೋಷಣೆಯಾಗಿದೆ. ಈ ಚಿತ್ರಕ್ಕೆ ‘ಸೆಲ್ಫಿ’ ಎಂದು ನಾಮಕರಣ ಮಾಡಲಾಗಿದ್ದು, ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
ಅಕ್ಷಯ್ ಕುಮಾರ್‌ಗೆ ಜೊತೆಯಾಗಿ ನಟ ಇಮ್ರಾನ್ ಹಾಶ್ಮಿ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಚಿತ್ರಕ್ಕೆ ಸಂಬಂಧಿಸಿದ ವಿಡಿಯೊ ತುಣಕೊಂದನ್ನು ಅಕ್ಷಯ್ ಕುಮಾರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಹೇಳಿಕೊಂಡಿದ್ದಾರೆ.
ಈ ಸಿನಿಮಾ ಮಲೆಯಾಳಂನಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ, ಲಾಲ್ ಜೂನಿಯರ್ ನಿರ್ದೇಶನದ ಕಾಮಿಡಿ ಡ್ರಾಮಾ ‘ಡ್ರೈವಿಂಗ್ ಲೈಸೆನ್ಸ್’ ಸಿನಿಮಾದ ರಿಮೇಕ್ ಆಗಿದೆ. ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಹಾಗೂ ಸೂರಜ್ ವೆಂಜಾರಮೂಡು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.
ಇದೇ ಚಿತ್ರವನ್ನು ಬಾಲಿವುಡ್‌ನಲ್ಲಿ ಕರಣ್ ಜೊಹರ್ ಹಾಗೂ ಪೃಥ್ವಿರಾಜ್ ಸುಕುಮಾರನ್ ರಿಮೇಕ್ ಮಾಡುತ್ತಿದ್ದಾರೆ. ಉಳಿದ ಪಾತ್ರಗಳ ಪರಿಚಯ ಇನ್ನೂ ತಿಳಿದು ಬಂದಿಲ್ಲ.
ಕೊರೊನಾ ನಡುವೆಯೂ ಅಕ್ಷಯ್ ಕುಮಾರ್ ಅವರು ವರ್ಷಕ್ಕೆ ಎರಡ್ಮೂರು ಸಿನಿಮಾಗಳನ್ನು ಕೊಡುವುದನ್ನು ನಿಲ್ಲಿಸಿಲ್ಲ. ಇದೀಗ ‘ಸೆಲ್ಫಿ’ ಹೊಸ ಸೇರ್ಪಡೆ. ಅವರ ಅಭಿನಯದ ‘ಪೃಥ್ವಿರಾಜ್’ ಬಿಡುಗಡೆಗೆ ಸಿದ್ದವಾಗಿತ್ತು. ಆದರೆ, ಕೊರೊನಾ ಹಾವಳಿಯಿಂದ ಮುಂದೆ ಹೋಗಿದೆ. ‘ಸೂರ್ಯವಂಶಿ’ ಯಶಸ್ಸಿನ ನಂತರ ‘ರಾಮ ಸೇತು’, ‘ರಕ್ಷಾ ಬಂದನ್’ ಹಾಗೂ ‘ಬಚ್ಚನ್ ಪಾಂಡೆ’ ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ತೊಡಗಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.