‘ದೊಡ್ಡ ಹೆಸರು ಇರುವ ನಿರ್ದೇಶಕರು ಅವರ ಚಿತ್ರಗಳಿಗೆ ನನ್ನನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಹಾಗಾಗಿ ನಾನು ಹೊಸ ನಿರ್ದೇಶಕರ ಜೊತೆ ಕೆಲಸ ಮಾಡಲು ಆರಂಭಿಸಿದೆ...’
ಈ ಮಾತನ್ನು ಹೇಳಿದ್ದು ಚಿತ್ರರಂಗದಲ್ಲಿ ಅಂಬೆಗಾಲು ಇಡುತ್ತಿರುವ ಯಾವುದೋ ನಟ ಅಥವಾ ನಟಿ ಅಲ್ಲ. ಇದನ್ನು ಹೇಳಿದ್ದು ಬಾಲಿವುಡ್‌ನಲ್ಲಿ ಒಂದಾದ ನಂತರ ಒಂದರಂತೆ ಹಿಟ್ ಚಿತ್ರಗಳನ್ನು ನೀಡುತ್ತಿರುವ, ಹೊಸ ಹೊಸ ಪಾತ್ರಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿರುವ ಅಕ್ಷಯ್ ಕುಮಾರ್!
ಅಕ್ಷಯ್ ಅವರು ರಾಜ್ ಮೆಹ್ತಾ ನಿರ್ದೇಶನದ ‘ಗುಡ್ ನ್ಯೂಸ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘ದೊಡ್ಡ ಹೆಸರು ಸಂಪಾದಿಸಿದ ನಿರ್ದೇಶಕರು ನನ್ನನ್ನು ತಮ್ಮ ಸಿನಿಮಾಗಳಿಗೆ ಆಯ್ಕೆ ಮಾಡಲಿಲ್ಲ. ಹಾಗಾಗಿ ನಾನು ಹೊಸಬರ ಜೊತೆ ಕೆಲಸ ಮಾಡಬೇಕಾಯಿತು. ಇದು ಸತ್ಯ. ದೊಡ್ಡವರು ನಿಮ್ಮನ್ನು ಜೊತೆಗೆ ಕರೆದೊಯ್ಯದಿದ್ದರೆ ನೀವು ನಿಮ್ಮದೇ ಪ್ರಯಾಣ ಆರಂಭಿಸಬೇಕು’ ಎಂದು ಅಕ್ಷಯ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
‘ರಾಜ್ ಅವರು ನನ್ನ ಪಾಲಿಗೆ 21ನೆಯ ಹೊಸ ನಿರ್ದೇಶಕ. ಚೆನ್ನಾಗಿ ಕೆಲಸ ಮಾಡಬೇಕು ಎಂಬ ಆಸೆ ಹಳಬರಲ್ಲಿ ಇರುವುದಕ್ಕಿಂತಲೂ ಹೊಸಬರಲ್ಲಿ ಹೆಚ್ಚು ಇರುತ್ತದೆ ಎಂಬುದು ನನ್ನ ಅನುಭವ. ಅವರ ಪಾಲಿಗೆ ಕೆಲಸ ಅಂದರೆ ಮಾಡು ಇಲ್ಲವೆ ಮಡಿ ಎಂಬಂತೆ ಇರುತ್ತದೆ’ ಎಂದು ಅಕ್ಷಯ್ ಹೇಳಿದ್ದಾರೆ.
ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಕಂಪನಿಯು ‘ಗುಡ್ ನ್ಯೂಸ್’ ಸಿನಿಮಾಕ್ಕೆ ಬಂಡವಾಳ ಹೂಡಿಕೆ ಮಾಡಿದೆ. ಅಕ್ಷಯ್ ಅವರ ಮುಂದಿನ ಸಿನಿಮಾ, ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಜೀವನ ಕಥೆಯನ್ನು ಆಧರಿಸಿದೆ. ಇದನ್ನು ಯಶ್ ರಾಜ್ ಫಿಲಂಸ್ ನಿರ್ಮಾಣ ಮಾಡಲಿದೆ.
‘ಈಚಿನ ದಿನಗಳಲ್ಲಿ ದೊಡ್ಡ ನಿರ್ಮಾಣ ಸಂಸ್ಥೆಗಳು ನಿಮ್ಮ ಸಿನಿಮಾಗಳಿಗೆ ಹಣ ಹೂಡುತ್ತಿವೆ. ಇದು ಹೇಗೆ ಸಾಧ್ಯವಾಯಿತು’ ಎಂದು ಪ್ರಶ್ನಿಸಿದಾಗ ಅಕ್ಷಯ್, ‘ಈಗಲೂ ನಾನು ದೊಡ್ಡ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿಲ್ಲ. ಯಶ್ ರಾಜ್ ಫಿಲಂಸ್ ಮತ್ತು ಧರ್ಮ ಪ್ರೊಡಕ್ಷನ್ಸ್ ಸಂಸ್ಥೆಗಳು ನನ್ನ ಸಿನಿಮಾ ನಿರ್ಮಾಣ ಮಾಡುತ್ತಿವೆ, ನಿರ್ದೇಶನ ಮಾಡುತ್ತಿಲ್ಲ’ ಎಂದು ಉತ್ತರಿಸಿದರು.
ಹೊಸಬರ ಜೊತೆ ಕೆಲಸ ಆರಂಭಿಸಿದಾಗ ತಾವು ಅವರು ಸಿದ್ಧಪಡಿಸಿದ ಚಿತ್ರಕಥೆ ಹಾಗೂ ಅವರಲ್ಲಿನ ಆಲೋಚನೆಗಳನ್ನು ಸಂಪೂರ್ಣವಾಗಿ ನಂಬುವುದಾಗಿ ಬಾಲಿವುಡ್‌ನ ‘ಖಿಲಾಡಿ’ ಹೇಳಿದರು.
‘ನಾನು ಅವರಿಗೆ ಏನೂ ಹೇಳುವುದಿಲ್ಲ. ಅವರು ಹೇಗೆ ಕೆಲಸ ಮಾಡಬೇಕು ಎನ್ನುವವ ನಾನಲ್ಲ. ಅವರು ಅವರ ಪಾಲಿನ ಕೆಲಸ ಮಾಡುತ್ತಾರೆ. ಅವರು ಸಿದ್ಧಪಡಿಸಿದ ಚಿತ್ರಕಥೆಯನ್ನು ನಾನು ನಂಬುತ್ತೇನೆ. ಅಷ್ಟಾದರೆ, ಚಿತ್ರದ ಶೇಕಡ 60ರಷ್ಟು ಕೆಲಸ ಆದಂತೆಯೇ. ಇನ್ನುಳಿದಿದ್ದೆಲ್ಲ ನಿರ್ದೇಶಕರ ಮೇಲೆ ಅವಲಂಬಿತ ಆಗಿರುತ್ತದೆ’ ಎನ್ನುವುದು ಅಕ್ಷಯ್ ಅವರ ಮಾತು.
‘ಗುಡ್ ನ್ಯೂಸ್’ ಚಿತ್ರದಲ್ಲಿ ಕರೀನಾ ಕಪೂರ್ ಖಾನ್, ಕಿಯಾರಾ ಅಡ್ವಾಣಿ ಅವರೂ ನಟಿಸಿದ್ದಾರೆ. ಇದು ಡಿಸೆಂಬರ್ 27ರಂದು ತೆರೆಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.