ಬೆಂಗಳೂರು: ಇತ್ತೀಚೆಗೆ ದಕ್ಷಿಣ ಭಾರತದ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಹಾಗೂ ಹಣ ಗಳಿಕೆಯಲ್ಲೂ ಭಾರಿ ಯಶಸ್ಸು ಕಾಣುತ್ತಿರುವುದು ಬಾಲಿವುಡ್ ಅನ್ನು ಬೆಚ್ಚಿಬೀಳಿಸಿದೆ.
ಅದ್ಯಾಕೋ ಇದಕ್ಕೆ ತಕ್ಕುದಾಗಿ ಬಾಲಿವುಡ್‌ನಲ್ಲಿ ತೆರೆಕಾಣುತ್ತಿರುವ ಚಿತ್ರಗಳೂ ಸಾಲು ಸಾಲಾಗಿ ಮಕಾಡೆ ಮಲಗುತ್ತಿವೆ. ಬೆರಳೆಣಿಕೆಯ ಚಿತ್ರಗಳನ್ನು ಹೊರತುಪಡಿಸಿದರೆ ಬಾಲಿವುಡ್ ಸರಕು ಖಾಲಿ ಆದಂತೆ ಕಾಣುತ್ತಿದೆ ಎನ್ನುವುದು ಹಲವರ ಆರೋಪ.
ಈ ಬಗ್ಗೆ ಮನ ಬಿಚ್ಚಿ ಮಾತನಾಡಿರುವ ಬಾಲಿವುಡ್‌ನ ಖ್ಯಾತನಾಮ ನಟರಾದ ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವಗನ್ ದಕ್ಷಿಣ ಭಾರತದ ಚಿತ್ರರಂಗವನ್ನು ಹಾಡಿ ಹೊಗಳಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಆಯೋಜಿಸಿದ್ದ ಲೀಡರ್‌ಶೀಪ್ ಸಮ್ಮಿಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಕ್ಷಿಣದ ಚಿತ್ರಗಳು ಹೆಚ್ಚು ಯಶಸ್ಸು ಕಾಣುತ್ತಿವೆ. ಮನರಂಜನೆ ಮಾತ್ರವಲ್ಲದೇ ಸಾವಿರಾರು ಕೋಟಿ ರೂಪಾಯಿ ಗಳಿಸುತ್ತಿವೆ. ಇದು ಉತ್ತಮ ಬೆಳವಣಿಗೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಇಂತಹ ಯಶಸ್ಸುಗಳು ಬಾಲಿವುಡ್‌ಗೂ ಬೇಕು. ಆದರೆ, ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ. ದಕ್ಷಿಣದಲ್ಲಿ ಸಿನಿ ತಂತ್ರಜ್ಞರು ಸಾಕಷ್ಟು ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಇದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಅಜಯ್ ದೇವಗನ್ ಮಾತನಾಡಿ, 90ರ ದಶಕದ ನಮ್ಮ ಹೀರೊಗಳಲ್ಲಿ ಒಗ್ಗಟ್ಟು, ಸೌಹಾರ್ದತೆ ಆರೋಗ್ಯಕರ ಸ್ಪರ್ಧೆ ಇದೆ. ನಾನು, ಅಕ್ಷಯ್, ಶಾರುಕ್, ಸಲ್ಮಾನ್, ಅಮಿರ್ ಅವರು ಪರಸ್ಪರರ ಸಿನಿಮಾಗಳ ಯಶಸ್ಸಿಗೆ ಶ್ರಮಿಸುತ್ತೇವೆ. ಆದರೆ, ಪ್ರಸ್ತುತ ಸ್ಟಾರ್‌ಗಳಲ್ಲಿ ಅಂತಹ ವಾತಾವರಣ ಕಾಣುತ್ತಿಲ್ಲ ಎಂದು ಅಕ್ಷಯ್ ಅವರ ಮಾತನ್ನು ಅನುಮೋದಿಸಿದರು.
ಮುಂದುವರೆದು ಮಾತನಾಡಿದ ಅಕ್ಷಯ್, ಒಗ್ಗಟ್ಟಿನ ಕೊರತೆ ಒಂದೆಡೆಯಾದರೆ, ಇಂಡಸ್ಟ್ರಿಯಲ್ಲಿ ಒಬ್ಬರು ಮತ್ತೊಬ್ಬರನ್ನು ಸರಿಯಾಗಿ ಗೌರವಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಾಹುಬಲಿ, ಪುಷ್ಪ, ಕೆಜಿಎಫ್, ಕಾಂತಾರ, ಆರ್‌ಆರ್‌ಆರ್, ತಮಿಳು, ಮಲಯಾಳಂನ ಹಲವು ಚಿತ್ರಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿ, ಭಾರತೀಯ ಚಿತ್ರರಂಗಕ್ಕೆ ದೊಡ್ಡಣ್ಣನಂತಿದ್ದ ಬಾಲಿವುಡ್‌ಅನ್ನು ಹಿಂದಿಕ್ಕಲು ಕಾರಣವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.