ಬಾಲಿವುಡ್, ಕಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಹೀಗೆ ಎಲ್ಲಾ ಭಾಷೆಯ ಸಿನಿರಂಗದಲ್ಲೂ ಸಿನಿಮಾ ಬಿಡುಗಡೆಗೂ ಮೊದಲುಟೀಸರ್, ಟ್ರೇಲರ್, ಹಾಡಿನ ಮೂಲಕ ಸಿನಿಮಾಕ್ಕೆ ಹೈಪ್ ಸೃಷ್ಟಿಸುತ್ತಾರೆ. ಇತ್ತೀಚೆಗೆ ಸಿನಿಮಾಗಳು ಹಿಟ್ ಆಗುತ್ತಿರುವುದು ಬಿಡುಗಡೆಗೆ ಮೊದಲೇ ಮಾಡಿದ ಸದ್ದಿನಿಂದಲೇ ಎಂಬುದು ಕೂಡ ಅತಿಶಯೋಕ್ತಿಯಲ್ಲ.
ಯಾವುದೇ ಸಿನಿಮಾಕ್ಕಾಗಲಿ ವಿಮರ್ಶೆ ಕೆಟ್ಟದ್ದಾಗಿದ್ದು, ಚಿತ್ರದ ಬಗ್ಗೆ ‘ಚೆನ್ನಾಗಿಲ್ಲ’ ಎಂಬ ಮಾತು ಕೇಳಿ ಬಂದರೂ ಕೂಡ ಟೀಸರ್, ಟ್ರೇಲರ್ ಸದ್ದಿನಿಂದಲೇ ಮೊದಲ ವಾರದಲ್ಲೇ ನಿರ್ಮಾಪಕರ ಜೇಬು ತುಂಬುತ್ತಿರುವುದು ಸುಳ್ಳಲ್ಲ.
ಆ ಕಾರಣಕ್ಕಾಗಿ ಇತ್ತೀಚೆಗೆ ನಿರ್ಮಾಪಕರು ಸಿನಿಮಾ ಬಿಡುಗಡೆಗೆ ಮೊದಲೇ ಹೈಪ್ ಸೃಷ್ಟಿಸಲು ವಿಭಿನ್ನ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿ ಅಲ್ಲು ಅರ್ಜುನ್ ಅಭಿಯನದ ‘ಅಲಾ ವೈಕುಂಠಪುರಮುಲೋ’ ಸಿನಿಮಾ.
ಈ ಸಿನಿಮಾದ ಹಾಡೊಂದನ್ನು ಸಿನಿಮಾ ಬಿಡುಗಡೆಗೆ 100 ದಿನ ಇರುವ ಮೊದಲೇ ರಿಲೀಸ್ ಮಾಡಲಾಗಿತ್ತು. ಸುಮ್ಮನೆ ಆಡಿಯೊ ಕೇಳಿಸುವ ಬದಲು ತಮನ್ ಹಾಗೂ ಸಿದ್ ಶ್ರೀರಾಮ್‌ಗಾಗಿ ವಿಶೇಷ ಸೆಟ್ ತಯಾರಿಸಿ ಅದರಲ್ಲಿ ಹಾಡನ್ನು ಚಿತ್ರೀಕರಣ ಮಾಡಿ, ಅದರ ವಿಡಿಯೊ ಬಿಡುಗಡೆ ಮಾಡಿದ್ದರು.
ಈ ಹಾಡಿನ ಚಿತ್ರೀಕರಣಕ್ಕಾಗಿ ನಿರ್ಮಾಪಕರು ₹ 25ಲಕ್ಷ ಖರ್ಚು ಮಾಡಿದ್ದಾರೆ. ಅವರ ನಿರೀಕ್ಷೆಯಂತೆ ಆ ಹಾಡು ಬಿಗ್ ಹಿಟ್ ಕಂಡಿದೆ. ‘ಸಾಮಜ ವರ ಗಮನ‘ ಸಾಲು ಭಾಷೆ ಅರಿಯದವರ ಬಾಯಲ್ಲೂ ಕೇಳುವಂತಾಗಿದೆ. ಇದನ್ನು 4 ಕೋಟಿಗೂ ಅಧಿಕ ಮಂದಿ ಯುಟ್ಯೂಬ್‌ನಲ್ಲಿ ವೀಕ್ಷಿಸಿದ್ದಾರೆ.
ಈ ಒಂದು ಹಾಡಿನಿಂದಲೇ ಸಿನಿಮಾ ಬಿಡುಗಡೆಯಾದ ದಿನವೇ ಕೋಟಿ ಕೋಟಿ ಬಾಚುವ ನಿರೀಕ್ಷೆ ಚಿತ್ರತಂಡದ್ದು.
ಹಾಡಿನ ಯಶಸ್ಸಿನ ಉತ್ಸಾಹದಲ್ಲೇ ನಿರ್ಮಾಪಕರು ಚಿತ್ರದ ಇನ್ನೊಂದು ಹಾಡಿನ ಬಿಡುಗಡೆಗೆ ಸಿದ್ಧರಾಗಿದ್ದಾರೆ. ಇದು ಮಾಸ್ ಹಾಡಾಗಿದ್ದು ಈ ದೀಪಾವಳಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಸಾಮಜ ವರ ಗಮನ ಹಾಡಿಗೆ ಶಾಸ್ತ್ರೀಯ ಸಂಗೀತದ ಟಚ್ ಇದ್ದು ಇದು ಕ್ಲಾಸ್ ಪ್ರೇಕ್ಷಕರನ್ನು ಹೆಚ್ಚು ಸೆಳೆದಿದೆ. ಆ ಕಾರಣಕ್ಕೆ ಮುಂದಿನ ಹಾಡು ಮಾಸ್ ಪ್ರೇಕ್ಷಕರನ್ನು ಸೆಳೆಯಲಿದೆ.
ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಸಂಕ್ರಾಂತಿ ವೇಳೆಗೆ ಸಿನಿಮಾ ಬಿಡುಗಡೆ ತೀವ್ರ ಪೈಪೋಟಿ ಇದ್ದು ಇಂತಹ ಹೊಸ ತಂತ್ರಗಳು ಪ್ರೇಕ್ಷಕರನ್ನು ಸೆಳೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.