ಡೀಪ್‌ಫೇಕ್ ವಿಡಿಯೊಗಳಿಗೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿದ್ದು, ಇದರ ಬೆನ್ನಲ್ಲೇ ಬಾಲಿವುಡ್ ನಟಿ ಅಲಿಯಾ ಭಟ್ ಅವರ ಡೀಪ್‌ಫೇಕ್ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಮಹಿಳೆಯೊಬ್ಬರ ವಿಡಿಯೊಗೆ ಅಲಿಯಾ ಭಟ್ ಅವರ ಮುಖ ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಕ್ಯಾಮೆರಾದ ಎದುರು ಕುಳಿತುಕೊಂಡಿರುವ ಮಹಿಳೆ ಅಶ್ಲೀಲವಾಗಿ ಚಿತ್ರೀಕರಿಸುತ್ತಿರುವುದು ವಿಡಿಯೊದಲ್ಲಿ ಕಾಣಬಹುದಾಗಿದೆ.
ಈ ಹಿಂದೆ ನಟಿ ರಶ್ಮಿಕಾ ಮಂದಣ್ಣನವರ ಡೀಪ್‌ಫೇಕ್ ವಿಡಿಯೊವೊಂದು ಹರಿದಾಡಿದ್ದು, ಲಿಫ್ಟ್ ಪ್ರವೇಶಿಸುತ್ತಿರುವ ಮಹಿಳೆಯೊಬ್ಬರ ಮುಖಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖ ಜೋಡಿಸಿ ಹರಿಬಿಟ್ಟಿದ್ದರು. ವಿಡಿಯೊ ಕುರಿತಂತೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಎಐ ತಂತ್ರಜ್ಞಾನಗಳ ಬಗ್ಗೆ ಆತಂಕ ಮೂಡಿತ್ತು.
ಇದಾದ ಬೆನ್ನಲ್ಲೆ ಬಾಲಿವುಡ್ ನಟಿಯರಾದ ಕತ್ರಿಕಾ ಕೈಫ್, ಕಾಜೋಲ್ ಅವರ ಡೀಪ್‌ಫೇಕ್ ವಿಡಿಯೊಗಳೂ ಹರಿದಾಡಿದ್ದವು.
ಡೀಪ್‌ಫೇಕ್ ವಿಡಿಯೊಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಸರ್ಕಾರ, ತಂತ್ರಜ್ಞಾನ ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿತ್ತು. ಬೃಹತ್ ಮೊತ್ತದ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಲು ಮುಂದಾಗಿದೆ.
ಡೀಫ್‌ಫೇಕ್ ವಿಡಿಯೊ ಕುರಿತಂತೆ ಮಾತನಾಡಿದ್ದ ಪ್ರಧಾನಿ ಮೋದಿ, ಮಾಧ್ಯಮಗಳು ಈ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.